

ಬೆಂಗಳೂರು: ಈಕೆ ಅಜ್ಜಿನಾ.. ಇಲ್ಲಾ ರಾಕ್ಷಸಿನಾ? 'ಹಸಿವಾಗ್ತಿದೆ ಊಟ ಕೊಡಜ್ಜಿ ಎಂದು ಕೇಳಿದ ಮಗುವಿನ ಮೈಯನ್ನು ಮನಸೋ ಇಚ್ಛೆ ಸುಟ್ಟಿ ವಿಕೃತಿ ಮೆರೆದಿದ್ದಾಳೆ.
ಸುದ್ದುಗುಂಟೆಪಾಳ್ಯದ ಗುರಪ್ಪನಪಾಳ್ಯದ ನಿವಾಸಿ ಇಮ್ರಾನ್ ಪಾಷಾ ಮತ್ತು ಅಜೀರಾ ದಂಪತಿಯ ಪುತ್ರ ಅರ್ಮಾನ್ (2) ಗಂಭೀರ ಗಾಯಗೊಂಡ ನತದೃಷ್ಟ. ಬಾಲಕನ ಅಜ್ಜಿ ಮುಬೀನಾ ಹಲ್ಲೆ ಮಾಡಿದವಳು. 'ಅಯ್ಯೋ ನನ್ನ ಮಗು, ಮೊಮ್ಮಗ ಯಾಕೋ ಸರಿಯಾಗಿ ಊಟಾನೇ ಮಾಡ್ತಿಲ್ಲ, ಏನು ಕೊಟ್ರೂ ಜಾಸ್ತಿ ತಿನ್ನಲ್ಲ ಎಂದು ಕೊರಗುವ ತಾಯಂದಿರು-ಅಜ್ಜಿಯಂದಿರು ಲೆಕ್ಕವಿಲ್ಲದಷ್ಟು ಮಂದಿಯನ್ನು ನಾವು ನೋಡಿದ್ದೇವೆ. ಜಾಸ್ತಿ ಊಟ ಮಾಡಲೆಂದು ದೇವರಿಗೆ ಹರಕೆ ಕಟ್ಟುವುದು, ವೈದ್ಯರ ಬಳಿ ಹಸಿವಾಗಲು ಟಾನಿಕ್ ಬರೆದುಕೊಡಿ ಎಂದು ದುಂಬಾಲು ಬೀಳುವುದನ್ನು ನಿತ್ಯ ನೋಡುತ್ತಲೇ ಇರ್ತೀವಿ. ಆದರಿಲ್ಲಿ ಊಟ ಕೇಳಿದ ಮೊಮ್ಮಗನಿಗೆ ದುಷ್ಟ ಅಜ್ಜಿಯೊಬ್ಬಳು ಶಿಕ್ಷೆ ಕೊಟ್ಟಿದ್ದಾಳೆ. ಮಗುವಿಗೆ ಕಣ್ಣು, ಹಣೆ, ಮೂಗು ಸೇರಿದಂತೆ ದೇಹದ ಇತರೆಡೆ ಬೆಂಕಿಯಿಂದ ಸುಟ್ಟಿದ್ದಾಳೆ ಎಂದು ಸ್ವತಃ ಆ ಮಗುವಿನ ತಂದೆಯೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮೊಮ್ಮಗನ ಮೇಲೆ ಅಜ್ಜಿ ಮಾರಣಾಂತಿಕ ಹಲ್ಲೆ ನಡೆಸುತ್ತಿದ್ದರೂ ತಾಯಿ ಮಾತ್ರ ಸುಮ್ಮನೆ ನಿಂತು ನೋಡುತ್ತಿದ್ದಳು. ಇದನ್ನು ಪ್ರಶ್ನಿಸಲು ಹೋಗುತ್ತಿದ್ದ ಅಳಿಯನಿಗೆ ಅತ್ತೆ, ಮನೆಬಿಟ್ಟು ಹೋಗುವಂತೆ ಬೆದರಿಕೆ ಹಾಕುತ್ತಿದ್ದಳು ಎನ್ನಲಾಗಿದೆ.
ತನ್ನ ಮಗುವಿನ ಮೇಲೆ ವಿಕೃತಿ ಮೆರೆದ ಅತ್ತೆ ವಿರುದ್ಧ ಸುದ್ದುಗುಂಟೆಪಾಳ್ಯ ಪೊಲೀಸರಿಗೆ ಇಮ್ರಾನ್ ಪಾಷಾ ಶುಕ್ರವಾರ ರಾತ್ರಿ ದೂರು ನೀಡಿದ್ದರು. ಮಗುವಿಗೆ ಕಿರುಕುಳ ನೀಡಿದ ಆರೋಪದಡಿ ಶನಿವಾರ ಅಜ್ಜಿಯನ್ನು ಪೊಲೀಸರು ಬಂಧಿಸಿದ್ದಾರೆ. ಗಾಯಗೊಂಡ ಬಾಲಕನನ್ನು ಇಂದಿರಾಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ.