ಕನ್ನಡ ಜ್ಯೋತಿ ರಥಕ್ಕೆ ಅದ್ಧೂರಿ ಸ್ವಾಗತ: ಜಿಲ್ಲಾಧಿಕಾರಿ, ಜಿಲ್ಲಾ ಎಸ್ಪಿ ಭಾಗಿ

Grand welcome to Kannada Jyoti Ratha Mandya
Published on

ಮಂಡ್ಯ: ಕರ್ನಾಟಕಕ್ಕೆ 50 ವರ್ಷ ಸಂದ ಹಿನ್ನೆಲೆಯಲ್ಲಿ ರಾಜ್ಯಸರ್ಕಾರದಿಂದ ಆಯೋಜಿಸಿರುವ ಕನ್ನಡ ಜ್ಯೋತಿ ರಥ ಜಿಲ್ಲಾಕೇಂದ್ರಕ್ಕೆ ಆಗಮಿಸಿದಾಗ ಜಿಲ್ಲಾಡಳಿತದಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಕನ್ನಡ ರಥವನ್ನು ಸ್ವಾಗತಿಸಿದ್ದೇವೆ. ನಾವೆಲ್ಲರೂ ಕೂಡ ನಾಡು, ನುಡಿಯ ಬಗ್ಗೆ ಅಭಿಮಾನವನ್ನು ಇಟ್ಟುಕೊಳ್ಳಬೇಕು. ಪ್ರತಿಯೊಬ್ಬರೂ ಕೂಡ ನಮ್ಮ ಸಂಸ್ಕೃತಿ, ಕನ್ನಡ ನಾಡು-ನುಡಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಕಸಾಪ ನಗರಘಟಕದ ಅಧ್ಯಕ್ಷೆ ಸುಜಾತಾಕೃಷ್ಣ, ವಿಜಯಲಕ್ಷ್ಮೀ ರಘುನಂದನ್, ಬಿ.ಎಸ್.ಅನುಪಮಾ, ಸುಜಾತಾಮಣಿ, ಧನಂಜಯ ದರಸಗುಪ್ಪೆ, ಚಂದ್ರಲಿಂಗು, ನಾರಾಯಣ ಇತರರಿದ್ದರು.

ಬೀಳ್ಕೊಡುಗೆ: ನಗರದ ಹಲವೆಡೆ ಸಂಚಾರ ನಡೆಸಿದ ರಥಕ್ಕೆ ಸಂಜೆ ಬೀಳ್ಕೊಡುಗೆ ನೀಡಲಾಯಿತು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, 1973ರಲ್ಲಿ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಹೆಸರನ್ನು ನಾಮಕರಣ ಮಾಡಿದರು. ಅಲ್ಲಿಂದ ಇಲ್ಲಿಗೆ 50 ವರ್ಷವಾಗಿದೆ. ಕರ್ನಾಟಕವನ್ನು ಹೆಸರು ಮಹಾಭಾರತದಲ್ಲಿ ಉಲ್ಲೇಖವಾಗಿದೆ. ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯದ ಹೆಸರನ್ನು ಇಡಬೇಕು ಎಂದು ಕವಿಗಳು, ಹಿರಿಯ ಸಾಹಿತಿಗಳು ಕೂಡ ಒತ್ತಾಯ ಮಾಡಿ ಈ ಹೆಸರನ್ನು ಪ್ರೇರೇಪಿಸಿದರು. ಬೆನಗಲ್ ರಾಮರಾಯರು ಸೂಚಿಸಿದರು. ಕರ್ನಾಟಕವೆಂಬ ಹೆಸರು ಬಹಳ ಸೂಕ್ತವಾದದ್ದು ಎಂದರು.

ಮಂಡ್ಯ ತಾಲೂಕು ತಹಸೀಲ್ದಾರ್ ಡಾ.ಶಿವಕುಮಾರ ಬಿರಾದರ್ ಮಾತನಾಡಿ, ಕನ್ನಡ ಮತ್ತು ಕರ್ನಾಟಕ ಜನರಿಗೆ ಒಂದೇ ಎಂಬ ಭಾವನೆ ಮೂಡಿಸುತ್ತದೆ. ಕನ್ನಡ ರಥ ರಾಜ್ಯದಲ್ಲಿ ಸಂಚರಿಸಿ ಸಂಭ್ರಮವನ್ನು ಹೆಚ್ಚಿಸಿದೆ ಎಂದರು.

ಮಂಡ್ಯ ವಿವಿ ಕನ್ನಡ ಪ್ರಾಧ್ಯಾಪಕ ಲೋಕೇಶ್ ಮಾತನಾಡಿದರು. ಕಸಾಪ ಗೌರವ ಕಾರ್ಯದರ್ಶಿಗಳಾದ ಡಾ.ಕೃಷ್ಣೇಗೌಡ ಹುಸ್ಕೂರು, ಹರ್ಷ ವಿ.ಪಣ್ಣೆದೊಡ್ಡಿ, ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಧನಂಜಯ ದರಸಗುಪ್ಪೆ, ಹೊಳಲು ಶ್ರೀಧರ್, ಚಂದ್ರಲಿಂಗು, ಚಿಕ್ಕತಿಮ್ಮಯ್ಯ, ಎಲ್.ಕೃಷ್ಣ, ಎಸ್.ನಾರಾಯಣ್ ಇತರರಿದ್ದರು. ಇದೇ ವೇಳೆ ಕಾರಸವಾಡಿ ಮಹದೇವು, ಗೊರವಾಲೆ ಚಂದ್ರಶೇಖರ್ ಅವರ ತಂಡ ಗೀತ ಗಾಯನ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net