

ಭಾಲ್ಕಿ: ಜಗತ್ತಿನಲ್ಲಿಯೇ ಅತ್ಯಂತ ಶ್ರೀಮಂತ ಭಾಷೆ ಕನ್ನಡ ಭಾಷೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರ ಶನಿವಾರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ರಥಯಾತ್ರೆಗೆ ಸ್ವಾಗತಿಸಿ ಮಾತನಾಡಿದ ಅವರು, ಕನ್ನಡ ಭಾಷೆಗೆ ತನ್ನದೇ ಆದ ಶ್ರೇಷ್ಠ ಪರಂಪರೆ, ಸಂಸ್ಕೃತಿ ಇದೆ. ದೇಶದಲ್ಲಿಯೇ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಭಾಷೆಯಾಗಿದ್ದರೂ, ಕರ್ನಾಟಕದಲ್ಲಿಯೇ ಕನ್ನಡ ಉಳಿಸಲಿಕ್ಕೆ ಹೋರಾಡುವ ಪರಿಸ್ಥಿತಿ ಬಂದೋದಗಿದೆ. ಕೇಂದ್ರ ಸರ್ಕಾರದ ತಾರತಮ್ಯದಿಂದ ಕನ್ನಡ ಬೆಳೆಯುವಲ್ಲಿ ಹಿನ್ನಡೆಯಾಗುತ್ತಿದೆ. ಇದನ್ನು ಹೋಗಲಾಡಿಸುವ ಕಾರ್ಯವಾಗಬೇಕು. ಅದಕ್ಕಾಗಿ ನಾವೆಲ್ಲರೂ ಒಕ್ಕೂರಲಿನಿಂದ ಹೋರಾಟ ಮಾಡಬೇಕಿದೆ ಎಂದು ಹೇಳಿದರು.
ಸಾನ್ನಿಧ್ಯವಹಿಸಿದ್ದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ೮೭ನೇ ಕನ್ನಡ ಸಾಹಿತ್ಯ ಸಮ್ಮೇಳನ ನಿಮಿತ್ತ ರಾಜ್ಯಾದ್ಯಂತ ಕನ್ನಡ ಜ್ಯೋತಿ ರಥಯಾತ್ರೆ ಹೊರಡಿಸುತ್ತಿರುವುದು ಇದು ಪ್ರಥಮವಾಗಿದೆ ಎಂದು ಸಂತಸ ವ್ಯಕ್ತಪಡಿಸಿ, ಮಂಡ್ಯದಲ್ಲಿ ನಡೆಯುವ ಸಮ್ಮೇಳನದಲ್ಲಿ ಹೆಚ್ಚಿನ ಸಂಖೆಯಲ್ಲಿ ಭಾಗವಹಿಸೋಣ ಎಂದು ಹೇಳಿದರು.
ಕಸಾಪ ಜಿಲ್ಲಾದ್ಯಕ್ಷ ಸುರೇಶ ಚನಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಪುರಸಭೆ ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ಕಸಾಪ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ, ತಹಸೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೆರೆ, ತಾಪಂ ಇಒ ಸೂರ್ಯಕಾಂತ ಬಿರಾದಾರ, ಬಿಒ ಮನೋಹರ ಹೊಳಕರ, ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಕಾರಬಾರಿ, ಕೆ.ಡಿ.ಗಣೇಶ, ಜೈರಾಜ ಕೊಳ್ಳಾ, ಸಂಜುಕುಮಾರ ನಾವದಗಿ, ಮಲ್ಲಮ್ಮ ಆರ್ ಪಾಟೀಲ್, ಸುನೀತಾ ಮಮ್ಮಾ, ಚಂದ್ರಕಾಂತ ತಳವಾಡೆ, ಐಜಿಕ ಬಂಗಾರೆ, ಸಂತೋಷ ಪಾಟೀಲ್, ಜಯರಾಜ ದಾಬಶೆಟ್ಟಿ ಇತರರಿದ್ದರು.