ನಿವೃತ್ತ ಯೋಧನಿಗೆ ತವರಿನಿಂದ ಅದ್ಧೂರಿ ಸ್ವಾಗತ

1 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಸೇನೆಯಲ್ಲಿ 24 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗಿ ತವರಿಗೆ ಆಗಮಿಸಿದ ಯೋಧ ರಮೇಶ ಜಟ್ಟಿಂಗನವರ್​ ಅವರಿಗೆ ನಗರದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.

ರೈಲ್ವೆ ನಿಲ್ದಾಣದಲ್ಲಿ ಸಂಭ್ರಮದಿಂದ ರಮೇಶ ಅವರಿಗೆ ಸ್ವಾಗತಿಸಿದ ಕುಟುಂಬಸ್ಥರು ಹಾಗೂ ನಿವೃತ್ತ ಜಿಲ್ಲಾ ಸೈನಿಕರ ಸಂಘದ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು. ನಂತರ ಶಿವಾಜಿ ವೃತ್ತದಲ್ಲಿ ಶಿವಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ರಮೇಶ, ತಂದೆ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ತೆರದ ಜೀಪಿನಲ್ಲಿ ಮೆರವಣಿಗೆ ಮೂಲಕ ಮಟ್ಟಿ ಪ್ಲಾಟ್​ನಲ್ಲಿನ ನಿವಾಸಕ್ಕೆ ಆಗಮಿಸಿದರು. ಕುಟುಂಬಸ್ಥರು ಆರತಿ ಎತ್ತಿ ಸಂಭ್ರಮಿಸಿದರು.

ನಂತರ ಏರ್ಪಡಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಕವಿವಿ ಸಿಂಡಿಕೇಟ್​ ಮಾಜಿ ಸದಸ್ಯ ಕಲ್ಮೇಶ ಹಾವೇರಿಪೇಟ ಮಾತನಾಡಿ, ದೇಶದಲ್ಲಿ ನಮ್ಮನ್ನು ರಕ್ಷಣೆ ಮಾಡುವವರು ರೈತರ ಹಾಗೂ ಸೈನಿಕರು. ರೈತ ಅನ್ನ ಕೊಟ್ಟರೆ, ಸೈನಿಕ ರಕ್ಷಣೆ ನೀಡುತ್ತಾರೆ. ನಿವೃತ್ತ ಯೋಧರು ನಮ್ಮೂರಿಗೆ, ನಮ್ಮ ನಾಡಿಗೆ, ನಮ್ಮ ಓಣಿಗೆ ಬಂದಾಗ ಹಬ್ಬದಂತೆ ಸಂಭ್ರಮಿಸಲಾಗುತ್ತದೆ. 24 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ ಯೋಧನ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿರುವುದು ಸಂತಸ ತಂದಿದೆ ಎಂದರು.

ರಮೇಶ ಜಟ್ಟಿಂಗನವರ್​ ಸನ್ಮಾನ ಸ್ವೀಕರಿಸಿ ಮಾತನಾಡಿ, ದೇಶ ಸೇವೆ ಮಾಡಿ ಬಂದಿರುವ ನನಗೆ ಅದ್ಧೂರಿಯಾಗಿ ಸ್ವಾಗತಿಸಲಾಗಿದೆ. ನಾನು ನೀಜಕ್ಕೂ ಚಿರಋಣಿ. ನಮ್ಮ ಇಬ್ಬರು ಮಕ್ಕಳನ್ನೂ ಸೈನ್ಯಕ್ಕೆ ಕಳುಹಿಸುವ ಕೆಲಸ ಮಾಡುತ್ತೇನೆ. ಯುವ ಜನತೆ ಮಾದಕ ವಸ್ತುಗಳು, ದುಶ್ಚಟಗಳಿಂದ ದೂರು ಇರುವಂತೆ ಜಾಗೃತಿ ಮೂಡಿಸಿ ದೇಶ ಸೇವೆಗೆ ಅಣಿಯಾಗುವಂತೆ ನೋಡಿಕೊಳ್ಳುವೆ ಎಂದರು.

ಮಟ್ಟಿ ಪ್ಲಾಟ್​ ನಿವಾಸಿಗಳು, ಜಿಲ್ಲಾ ಮಾಜಿ ಸೈನಿಕರ ಸಂದ ಪದಾಧಿಕಾರಿಗಳು, ಬೆಳಗಾವಿ ಜಿಲ್ಲಾ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net