

ಹುಬ್ಬಳ್ಳಿ : ಇಲ್ಲಿಗೆ ಸಮೀಪದ ತಡಸ ಕ್ರಾಸ್ನಲ್ಲಿರುವ ಗಾಯತ್ರಿ ತಪೋವನದ ರಜತ ಮಹೋತ್ಸವ ಅಂಗವಾಗಿ ಶೃಂಗೇರಿ ಮಠದ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಅವರ ಭವ್ಯ ಶೋಭಾಯಾತ್ರೆ ಮಂಗಳವಾರ ಅದ್ದೂರಿಯಾಗಿ ನಡೆಯಿತು.
ಗಾಯತ್ರಿ ತಪೋವನ ಮುಖ್ಯ ದ್ವಾರದಿಂದ ದೇವಸ್ಥಾನವರೆಗೆ ಸಕಲ ವಾದ್ಯ ಮೇಳ, ಪೂರ್ಣಕುಂಭದೊಂದಿಗೆ ಶೋಭಾಯಾತ್ರೆ ನೆರವೇರಿತು. ನೂರಾರು ಭಕ್ತರು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು. ಮಹಿಳೆಯರು ಶ್ರೀಗಳಿಗೆ ಪಾದ ಪೂಜೆ, ಆರತಿ ಮಾಡುವ ಮೂಲಕ ಬರಮಾಡಿಕೊಂಡರು.
ನಂತರ ತಪೋಭೂಮಿಯ ವೇದಿಕೆಯಲ್ಲಿ ಧೂಳಿಪೂಜೆ ಮಾಡಿ ಆಶೀರ್ವಚನ ನೀಡಿದ ಶ್ರೀ ವಿಧುಶೇಖರಭಾರತೀ ಸ್ವಾಮೀಜಿ, ತಡಸನ ತಪೋಭೂಮಿ ಆಸ್ತಿಕರಿಗೆ ಶ್ರದ್ಧಾಕೇಂದ್ರವಾಗಿದೆ ಎಂದರು.
ಲೋಕಕಲ್ಯಾಣಕ್ಕಾಗಿ ತಡಸ ತಪೋಭೂಮಿಯ ರಜತ ಮಹೋತ್ಸವ ಆಯೋಜಿಸಲಾಗಿದೆ. ಶ್ರೀ ಗಾಯತ್ರಿ ದೇವಿ ಅಮ್ಮನವರ ಆರಾಧನೆ ಶ್ರೀಚಕ್ರಾಚರಣೆ ಮೂಲಕ ಮಾಡಲಾಗುತ್ತದೆ ಎಂದರು.
ಲೋಕದಲ್ಲಿನ ಅಜ್ಞಾನ ಹೋಗಲಾಡಿಸಿ, ಜ್ಞಾನ ರೂಪ ಅನುಗ್ರಹ ಮಾಡುವ ರೂಪವೇ ದಕ್ಷಿಣಾಮೂತಿರ್ ಸ್ವರೂಪವಾಗಿದೆ. ಇದರ ಉಪಾಸನೆ ಮಾಡಿದಾಗ ಮನಸ್ಸಿನಲ್ಲಿರುವ ಗೊಂದಲ ಹೋಗಿ ದಕ್ಷಿಣಾರೂಪ ಪ್ರಾಪ್ತಿಯಾಗಲಿದೆ. ಇದೇ ಉದ್ದೇಶಕ್ಕಾಗಿ ದಣಾಮೂತಿರ್ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಜಗತ್ತಿನ ಉದ್ದಾರಕ್ಕೆ ಮಾರ್ಗದರ್ಶನ ಮಾಡುವ ಶ್ರೀ ಶಂಕರ ಭಗವತ್ಪಾದಕರನ್ನೇ ದಣಾಮೂತಿರ್ ಅವತಾರ ಎಂದೇ ಭಾವಿಸಲಾಗಿದೆ ಎಂದು ಹೇಳಿದರು.
ಪ್ರತಿಯೊಬ್ಬರೂ ಆತ್ಮ ಉದ್ದಾರ ಮಾಡಿಕೊಳ್ಳಬೇಕು. ಅಂದಾಗ ಮಾತ್ರ ಜೀವನ ಸಾರ್ಥಕ ಆಗುತ್ತದೆ. ಆತ್ಮ ಉದ್ದಾರಕ್ಕಾಗಿ ಯಾವ ಮಾರ್ಗ ಅನುಸರಿಸಬೇಕೆಂಬುದನ್ನು ಶ್ರೀ ಶಂಕರ ಭಗವತ್ಪಾದಕರು ತಮ್ಮ ಗ್ರಂಥಗಳಲ್ಲಿ ಹೇಳಿದ್ದಾರೆ ಎಂದು ತಿಳಿಸಿದರು.