

ಹುಬ್ಬಳ್ಳಿ: ನಗರದ ಪ್ರತಿಷ್ಠಿತ ಚೇತನ ಶಿಕ್ಷಣ ಸಂಸ್ಥೆಗಳ ನೇತೃತ್ವದಲ್ಲಿ 70 ನೆಯ ಕನ್ನಡ ರಾಜ್ಯೋತ್ಸವ ನಿಮಿತ್ತ ಇತ್ತೀಚೆಗೆ ಏರ್ಪಡಿಸಿದ್ದ ಬೃಹತ್ ಮೆರವಣಿಗೆಗೆ ಹು-ಧಾ ಪೊಲೀಸ್ ಆಯುಕ್ತಾಲಯದ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಸಿ.ಆರ್. ರವೀಶ ಅವರು ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಚೇತನ ಶಿಕ್ಷಣ ಸಂಸ್ಥೆಯಡಿ ಬರುವ ಐ.ಸಿ.ಎಸ್.ಇ., ಸಿ.ಬಿ.ಎಸ್.ಇ, ಸ್ಟೇಟ್ ಹಾಗೂ ಕಾಲೇಜ್ ವಿಭಾಗಗಳು ಭಾಗವಹಿಸಿದ್ದವು.
ಇಸ್ರೋ ಚಂದ್ರಯಾನ, ಕರಾವಳಿಯ ಯಕ್ಷಗಾನ, ಭೂತಾರಾಧನೆ, ದಿ. ಸಿದ್ದೇಶ್ವರ ಸ್ವಾಮೀಜಿ, ಹುಬ್ಬಳ್ಳಿ ಉಣಕಲ್ ಚಂದ್ರಮೌಳೇಶ್ವರ, ವಿಶ್ವದ ಅತಿ ಉದ್ದದ ಪ್ಲಾಟ್ ಫಾರ್ಮ್ ಹುಬ್ಬಳ್ಳಿ ಶ್ರೀ ಸಿದ್ಧಾರೂಢ ಸ್ವಾಮಿ ರೈಲ್ವೆ ಸ್ಟೇಷನ್, ಪರಶುರಾಮ ಸೃಷ್ಟಿ, ಮಹಿಷಾಸುರ ಮರ್ದಿನಿ, ಹುಲಿಕುಣಿತ ಮುಂತಾದ ಕರುನಾಡಿನ ಕಲೆ, ಸಂಸ್ಕೃತಿ, ಆಧ್ಯಾತ್ಮ, ವಿಜ್ಞಾನ, ಸಾಹಿತ್ಯ, ಜನಪದ ವೈಭವವನ್ನು ಸಾರುವ 12 ರೂಪಕಗಳ ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಕೊಡವ ಮತ್ತು ಕಂಸಾಳೆ ನೃತ್ಯವು ಎಲ್ಲರನ್ನೂ ಆಕರ್ಷಿಸಿತು.
ದ್ಯಾವಪ್ಪನವರ - ವಳಸಂಗ ಎಜುಕೇಷನಲ್ ಮತ್ತು ಅಕಾಡೆಮಿಕ್ ಟ್ರಸ್ಟ್ ಅಧ್ಯಕ್ಷ ಪ್ರೊ. ಜಿ.ವಿ. ವಳಸಂಗ, ಕಾರ್ಯದರ್ಶಿ ಪ್ರೊ. ಮಹೇಶ ದ್ಯಾವಪ್ಪನವರ, ಟ್ರಸ್ಟಿಗಳಾದ ಪವನ ದ್ಯಾವಪ್ಪನವರ, ಸೌಮ್ಯ ವಳಸಂಗ, ಶಾಂತೇಶ ಕೆಂಚಣ್ಣವರ, ಸ್ಟೇಟ್ ವಿಭಾಗದ ಪ್ರಾಚಾರ್ಯ ಎಂ.ಎಂ. ಕರಿಗೌಡರ, ಸಿ.ಬಿ.ಎಸ್.ಇ ಪ್ರಾಂಶುಪಾಲೆ ಡಾ.ಜೆರುಷಾ ನಡುಗಡ್ಡಿ, ಉಪ ಪ್ರಾಂಶುಪಾಲೆ ರೂಪ ಪೈ, ಐ.ಸಿ.ಎಸ್.ಇ ವಿಭಾಗದ ಪ್ರಾಂಶುಪಾಲ ಪ್ರಶಾಂತ ಬೆಲಿಂಜಾ, ಉಪ ಪ್ರಾಂಶುಪಾಲೆ ವಿಜಯಲಕ್ಷ್ಮೀ, ಚೇತನ ಶಿಕ್ಷಣ ಸಂಸ್ಥೆಗಳ ಸುಮಾರು 1,500 ವಿದ್ಯಾರ್ಥಿಗಳು, 200 ಶಿಕ್ಷಕರು, ಸಿಬ್ಬಂದಿ ಇತರರು ಭಾಗವಹಿಸಿದ್ದರು.