

ಹುಬ್ಬಳ್ಳಿ: ಪೂರ್ವ ಸಂಕಲ್ಪಿತ 11 ಕೋಟಿ ಶ್ರೀಹನುಮಾನ ಚಾಲೀಸಾ ಪಾಠದ ಸಮಾರೋಪ ಸಮಾರಂಭ ಹಾಗೂ ಅಖಂಡ ನೂರು ಗಂಟೆಗಳ ಶ್ರೀಹನುಮಾನ ಚಾಲೀಸಾ ಪಠಣದ ಮಹಾಸಮಾರಂಭ ನಿಮಿತ್ತ ನಗರದಲ್ಲಿ ಮಂಗಳವಾರ ಸಂಜೆ ಭವ್ಯ ಶೋಭಾಯಾತ್ರೆ ಏರ್ಪಾಟಾಗಿತ್ತು.
ಹೊಸೂರಿನಲ್ಲಿರುವ ಉತ್ತರ ಕನ್ನಡ ವೈಶ್ಯ ಸಮಾಜದ ಶ್ರೀ ಶಂಕರ ಸದನ ಮಂಗಲ ಕಾರ್ಯಾಲಯದಿಂದ ಶ್ರೀಹನುಮಂತನ ಹಾಗೂ ಸದ್ಗುರು ಶ್ರೀ ಬ್ರಹ್ಮಚೈತನ್ಯ ಮಹಾರಾಜರ ದಿವ್ಯ ಪಾದುಕೆಗಳನ್ನು ಹೊತ್ತ ಅಲಂಕೃತ ರಥಗಳ ಭವ್ಯ ಶೋಭಾಯಾತ್ರೆಯಲ್ಲಿ ಬಹಳಷ್ಟು ಜನರು ಪಾಲ್ಗೊಂಡಿದ್ದರು.
ಶೋಭಾಯಾತ್ರೆಯು ಜಿತೂರಿ ಆಸ್ಪತ್ರೆ, ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆ, ವಾಣಿ ವಿಲಾಸ ವೃತ್ತದ ಮೂಲಕ ಗೋಕುಲ ರಸ್ತೆಯ ನಾನಕೀ ಕನ್‌ವೆನ್ಷನ್ ಹಾಲ್‌ಗೆ ಆಗಮಿಸಿ ಸಂಪನ್ನಗೊಂಡಿತು. ಶೊಭಾಯಾತ್ರೆಯುದ್ದಕ್ಕೂ ಕುಂಭ, ಕಳಸಹೊತ್ತ ಮಹಿಳೆಯರು ಹೆಜ್ಜೆ ಹಾಕಿದರು.
ಹುಬ್ಬಳ್ಳಿಯ ಶ್ರೀ ದತ್ತಾವಧೂತ ಸೇವಾ ಸಂಘ ಹಾಗೂ ನಾಮ ಸಾಧಕ ಸಮಿತಿ ಸಹಯೋಗದಲ್ಲಿ ನಡೆದ ಶೋಭಾಯಾತ್ರೆಯಲ್ಲಿ ಹೆಬ್ಬಳ್ಳಿ ಶ್ರೀಕ್ಷೇತ್ರ ಚೈತನ್ಯಾಶ್ರಮದ ಶ್ರೀ ದತ್ತಾವಧೂತ ಗುರುಗಳು ನೇತೃತ್ವವಹಿಸಿದ್ದರು.
ಶೋಭಾಯಾತ್ರೆಯಲ್ಲಿ ರಾಮ್‌ಡೋಲ್ ತಾಸೆ, ಮಹಿಳೆಯರ ಕೋಲಾಟ ಮತ್ತು ವಿವಿಧ ಕಲಾ ತಂಡಗಳು, ಭಜನಾ ಮಂಡಳಿಗಳು ಭಾಗವಹಿಸಿದ್ದವು.
ಗಿರೀಶ ರಾಮದಾಸಿ, ಶಶಿಧರ ಕುಲಕರ್ಣಿ, ಕೆ.ಜಿ. ಕುಲಕರ್ಣಿ, ರಾಮಚಂದ್ರ ಮುದ್ರೆಬೆಟ್ಟು, ಅಶೋಕ ದೇಸಾಯಿ, ವಸಂತ ಕುಬಾಳ, ಶ್ರೀಪಾದ ಪೂಜಾರ, ಡಾ.ವಿ.ಎಂ. ದೇಶಪಾಂಡೆ, ರಮೇಶ ಕುಲಕರ್ಣಿ, ವೆಂಕಟೇಶ ಸುಳ್ಳದ, ದಾಮೋದರ ಪಾಟೀಲ, ಉಮೇಶ ದುಶಿ, ರಮೇಶ ಕುಲಕರ್ಣಿ, ಶಂಕರ ಪಾಟೀಲ ನೂರಾರು ಭಕ್ತರು ಭಾಗವಹಿಸಿದ್ದರು.