

ಮೇಲುಕೋಟೆ: ರಾಮಾನುಜಾಚಾರ್ಯರ 1007ನೇ ಜಯಂತ್ಯುತ್ಸವ ಪ್ರಯುಕ್ತ ಶನಿವಾರ ಮಹಾರಥೋತ್ಸವ ವೈಭವದಿಂದ ನೆರವೇರಿತು.
ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ವಿವಿಧೆಡೆಯಿಂದ ನೂರಾರು ಸಂಖ್ಯೆಯಲ್ಲಿ ವೈಷ್ಣವ ಭಕ್ತರು ಪಾಲ್ಗೊಂಡಿದ್ದರು. ದೇವಾಲಯದಲ್ಲಿ ಬೆಳಗ್ಗೆ 9ಗಂಟೆಗೆ ಆಚಾರ್ಯರಿಗೆ ಯಾತ್ರಾದಾನವಾದ ನಂತರ ವೇದಪಾರಾಯಣ ಮತ್ತು ಮಂಗಳವಾದ್ಯದೊಂದಿಗೆ ಒಳಪ್ರಾಕಾರದಲ್ಲಿ ಉತ್ಸವ ನೆರವೇರಿತು. ನಂತರ ರಾಮಾನುಜರ ಎದರು ಸೇವೆಯಲ್ಲಿ ಚೆಲುವನಾರಾಯಣಸ್ವಾಮಿಗೆ ಮಹಾಮಂಗಳಾರತಿ ನೆರವೇರಿತು. ರಾಮಾನುಜರಿಗೆ ಮರ್ಯಾದೆ ನಡೆದ ನಂತರ ಉತ್ಸವ ರಥದಮಂಟಪದ ಬಳಿಗೆ ಬಂದುಸೇರಿತು.
ರಥಮಂಟಪಕ್ಕೆ ಮೂರುಪ್ರದಕ್ಷಿಣೆ ಹಾಗೂ ಜೋಯಿಸರಿಂದ ಮಹೂರ್ತ ಪಠಣೆಯಾದ ನಂತರ 10.30ಕ್ಕೆ ರಥಾರೋಹಣ, ದಿವ್ಯಪ್ರಬಂದ ಪಾರಾಯಣಗೋಷ್ಠಿ ನೆರವೇರಿತು. ಧಾರ್ಮಿಕದತ್ತಿ ಇಲಾಖೆ ಅಧಿಕಾರಿ ಯತಿರಾಜ ಸಂಪತ್ಕುಮಾರನ್, ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಎಚ್.ಎಸ್.ಮಹೇಶ್ ಸರಪಣಿ ಎಳೆಯುವ ಮೂಲಕ 11.30ಕ್ಕೆ ಮಹಾರಥಕ್ಕೆ ಚಾಲನೆ ನೀಡಿದರು.
ಮಾರಿಗುಡಿ, ರಾಜಬೀದಿ, ವಾನಮಾಮಲೈಮಠದ ಬೀದಿಗಳಲ್ಲಿ ಮಹಾರಥ ಸಂಚರಿಸಿ ಸಂಜೆ 4ಗಂಟೆ ವೇಳೆಗೆ ಮುಕ್ತಾಯವಾಯಿತು. ಮಹಾರಥೋತ್ಸವದ ಧಾರ್ಮಿಕ ವಿಧಿವಿದಾನಗಳನ್ನು ಅರ್ಚಕ ವಿದ್ವಾನ್ ಬಿ.ವಿ. ಆನಂದಾಳ್ವಾರ್, ಆಗಪ್ರವೀಣ ವಿದ್ವಾನ್‌ಭಾ.ವಂ. ರಾಮಪ್ರಿಯ ನೆರವೇರಿಸಿದರು.
ಸಂಜೆ ಯತಿರಾಜ ಮಠದಲ್ಲಿ ರಾಮಾನುಜರಿಗೆ ಅಂತರಂಗ ಅಭಿಷೇಕ ನೆರವೇರಿತು. ರಾತ್ರಿ ರಾಮಾನುಜರ ಸನ್ನಿಧಿಯಲ್ಲಿ ಸ್ಥಾನಿಕರಾದ ಶ್ರೀನಿವಾಸನರಸಿಂಹನ್‌ಗುರೂಜಿ ಯತಿರಾಜದಾಸರ್ ಗುರುಪೀಠ ವತಿಯಿಂದ ಭಿಕ್ಷಾಕೈಂಕರ್ಯ ಸೇವೆ ನೆರವೇರಿತು.
ಭಾನುವಾರ ರಾಮಾನುಜರ ಜಯಂತಿ: ರಾಮಾನುಜಾಚಾರ್ಯರ ಜಯಂತಿ ಅಂಗವಾಗಿ ಮೇ 12ರಂದು ಬೆಳಗ್ಗೆ 9ಕ್ಕೆ ದ್ವಾದಶಾರಾಧನೆಯೊಂದಿಗೆ ರಾಮಾನುಜರಿಗೆ ಮಹಾಭಿಷೇಕ, ಸಂಜೆ ಗಂಧದ ಅಲಂಕಾರದಲ್ಲಿ ಬೆಳ್ಳಿಪಲ್ಲಕ್ಕಿ ಉತ್ಸವ, ರಾತ್ರಿ ಶ್ರೀಚೆಲುವನಾರಾಯಣಸ್ವಾಮಿಯ ದಶಾವತಾರ ಉತ್ಸವ ನಡೆಯಲಿದೆ.
ಮಹಿಳಾ ಭಕ್ತರ ಮೇಲುಗೈ: ರಾಮಾನುಜಚಾರ್ಯರ ಮಹಾರಥ ಎಳೆಯಲು ಸೇರಿದ್ದವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಭಕ್ತರೇ ಇದ್ದರು. ಸುಡು ಬಿಸಿಲನ್ನೂ ಲೆಕ್ಕಿಸದೆ ರಾಮಾನುಜ-ಯತಿರಾಜ ಎಂಬ ಜಯಘೋಷದೊಂದಿಗೆ ತೇರು ಎಳೆದರು. ಮೇಲುಕೋಟೆ ಪೋಲೀಸರು ಹೆಚ್ಚಿನ ಸಿಬ್ಬಂದಿಯೊಂದಿಗೆ ಹಾಜರಿದ್ದರು.