ಶಿವಭಕ್ತಿ ಅಲೆ ಮೂಡಿಸಿದ ಕಾವಡ್

1808 KLB 01
Published on

ಕಲಬುರಗಿ: ಶಿವನ ತಾಪವನ್ನು ತಣಿಸಲು, ಭಕ್ತರ ಬೇಡಿಕೆ ಈಡೇರಿಸಲು ಶಿವಲಿಂಗಕ್ಕೆ ಗಂಗಾ ಜಲಾಭಿಷೇಕ ಮಾಡುವ ಕಾವಡ್ ಯಾತ್ರೆಯೂ ನಗರದಲ್ಲಿ ಭಾನುವಾರ ಡಮರು, ಬೃಹತ್ ಚಳ್ಳಮ್ ನಾದ, ನೂರಾರು ಶಿವ ಭಕ್ತರ ಹರ್ ಹರ್ ಮಹಾದೇವ ಘೋಷಣೆಯೊಂದಿಗೆ ಭಕ್ತಿ, ಶ್ರದ್ಧೆಯೊಂದಿಗೆ ನೆರವೇರಿತು.
ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದಿಂದ ಆಳಂದ ಚೆಕ್ ಪೋಸ್ಟ್ ಬಳಿಯ ಶ್ರೀ ರಾಮತೀರ್ಥ ದೇವಸ್ಥಾನದವರೆಗೆ ನೂರಾರು ಶಿವಭಕ್ತರು ಗಂಗಾ ಜಲವನ್ನು ಹೊತ್ತು, ಪಾದಯಾತ್ರೆ ಮೂಲಕ ಸಾಗಿದರು. ದೇವಸ್ಥಾನ ತಲುಪಿದ ನಂತರ ಎಲ್ಲ ಭಕ್ತರು ತಾವು ಪಾದಯಾತ್ರೆಯಲ್ಲಿ ಹೊತ್ತು ತಂದಿದ್ದ ಜಲವನ್ನು ರಾಮತೀರ್ಥ ಲಿಂಗಕ್ಕೆ ಅರ್ಪಿಸಿ ಭಕ್ತಿ ಬಾವ ಮೆರೆದರು.
ಶರಣಬಸವೇಶ್ವರ ದೇವಸ್ಥಾನದಿಂದ ಲಾಲ್‌ಗೇರಿ ಕ್ರಾಸ್, ಶಹಾಬಜಾರ್ ನಾಕಾ, ಶೆಟ್ಟಿ ಟಾಕೀಸ್ ಮಾರ್ಗವಾಗಿ ರಾಮತೀರ್ಥ ದೇವಸ್ಥಾನ ತಲುಪಿತು. ಯಾತ್ರೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಭಕ್ತರಿಗೆ ಪ್ರಯಾಗ್‌ರಾಜ್‌ನಿಂದ ತರಿಸಿದ ಗಂಗಾಜಲವನ್ನು ವಿಶೇಷ ಬಿಂದಿಗೆಯಲ್ಲಿ ತುಂಬಿ ನೀಡಲಾಗಿತ್ತು. ಉಜ್ಜಯಿನಿಂದ ತರಿಸಿದ್ದ ಭಸ್ಮ ಲೇಪನ ಮಾಡಲಾಯಿತು. ಚಿಕ್ಕ ಮಕ್ಕಳಿಂದ ಹಿಡಿದು, ಮಹಿಳೆಯರು, ಹಿರಿಯರು, ಯುವಕರು ಯಾತ್ರೆಯಲ್ಲಿ ಪಾಲ್ಗೊಂಡು ಭಕ್ತಿ ಮೆರೆದರು.
ಎಲ್ಲ ಭಕ್ತರ ಗಂಗಾ ಜಲಾಭಿಷೇಕದ ನಂತರ ವಿಶೇಷ ಪೂಜೆ ನೆರವೇರಿಸಲಾಯಿತು. ಕಾವಡ್ ಯಾತ್ರೆಯಲ್ಲಿ ಭಾಗವಹಿಸಿದ ಮತ್ತು ರಾಮತೀರ್ಥ ದೇವಸ್ಥಾನಕ್ಕೆ ಆಗಮಿಸಿದ ಎಲ್ಲ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಮುಗಳನಾಗಾಂವದ ಶ್ರೀ ಅಭಿನವ ಸಿದ್ಧಲಿಂಗ ಸ್ವಾಮೀಜಿ, ಚವದಾಪುರಿಯ ಶ್ರೀ ಡಾ.ರಾಜಶೇಖರ ಶಿವಾಚಾರ್ಯರು, ಚಿ.ದೊಡ್ಡಪ್ಪ ಅಪ್ಪ, ಬಸವರಾಜ ದೇಶಮುಖ, ಸಂಘಟಕ ರಾಜು ಭವಾನಿ, ಡಾ.ಅಲ್ಲಮಪ್ರಭು ದೇಶಮುಖ, ವಿನೋದ ಪಾಟೀಲï ಸರಡಗಿ, ದಯಾನಂದ ಪಾಟೀಲ್, ಶ್ರೀಧರ ನಾಗನಹಳ್ಳಿ, ಮಲ್ಲಿಕಾರ್ಜುನ ಸಾರವಾಡ, ದಿವ್ಯ ಹಾಗರಗಿ, ಉದಯ ಪಾಟೀಲ್, ಸೂರ್ಯಕಾಂತ ಅಂಬಾಡಿ, ಗುರುರಾಜ ಅಂಬಾಡಿ, ಶರಣು ಟೆಂಗಳಿ, ಪ್ರಭವ ಪಟ್ಟಣಕರ, ಕಿರಣ ಕಣ್ಣಿ, ಆಕಾಶ ಕುಲಕರ್ಣಿ ಇತರರಿದ್ದರು.

ಬೃಹತ್ ಶಿವನ ಮೂರ್ತಿ
ಕಾವಡ್ ಯಾತ್ರೆ ನಿಮಿತ್ತ ೧೨ ಅಡಿಯ ಬೃಹತ್ ಶಿವನ ಮೂರ್ತಿಯೂ ಗಮನ ಸೆಳೆಯಿತು. ಬೃಹತ್ ರುದ್ರಾಕ್ಷಿ ಹಾರ ಅರ್ಪಿಸಲಾಯಿತು. ಶಿವನ ಮೂರ್ತಿಯನ್ನು ಶರಣಬಸವೇಶ್ವರ ಸಂಸ್ಥಾನದ ೯ನೇ ಪೀಠಾಧಿಪತಿ ಶ್ರೀ ಚಿ.ದೊಡ್ಡಪ್ಪ ಅಪ್ಪ ಅನಾವರಣ ಮಾಡಿದರು. ಯಾತ್ರಿಗಳು ಗಂಗಾಜಲ ಹೊತ್ತು ಮುಂದೆ ಸಾಗಿದ್ದು, ಹಿಂದೆ ಶಿವನ ಬೃಹತ್ ಮೂರ್ತಿ ಭಜನೆ, ವಾದ್ಯ ಮೇಳದೊಂದಿಗೆ ಸಾಗಿತು.

ಪ್ರಯಾಗ್‌ರಾಜ್‌ನಿಂದ ೫೦೦ ಲೀಟರ್ ಗಂಗಾಜಲ, ಉಜ್ಜಯಿನಿಯಿಂದ ಭಸ್ಮ ತರಿಸಿ ಭಕ್ತರಿಗೆ ಅರ್ಪಣೆ ಮಾಡಲಾಗಿದೆ. ಶ್ರಾವಣ ಮಾಸದ ಶುಭ ಸಂದರ್ಭದಲ್ಲಿ ಶಿವನ ಆರಾಧನೆಯನ್ನು ಕಾವಡ್ ಯಾತ್ರೆ ಮೂಲಕ ವಿಶೇಷವಾಗಿ ಆಚರಿಸಲಾಗಿದೆ. ಮುಂದೆಯೂ ಇನ್ನು ಅದ್ದೂರಿಯಾಗಿ ಶಿವನ ಆರಾಧನೆ ಮಾಡಿ, ಲೋಕಕಲ್ಯಾಣಕ್ಕೆ ಪ್ರಾರ್ಥಿಸಲಾಗುವುದು.
| ರಾಜು ಭವಾನಿ
ಕಾವಡ್ ಯಾತ್ರೆ ಸಂಘಟಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net