ಬೃಹತ್ ಹನುಮ ಸಂಕೀರ್ತನಾ ಯಾತ್ರೆ

SRP_14-01(b)jpj
ಭಾನುವಾರ ಹನುಮ ಮಾಲಾಧಾರಿಗಳ ಬೃಹತ್ ಸಂಕೀರ್ತನಾ ಯಾತ್ರೆ ನಡೆಯುವ ಹಿನ್ನಲೆ ಹಿಂದೂ ಜಾಗರಣ ವೇದಿಕೆ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಬಂಟಿಂಗ್ಸ್, ಹನುಮ ಧ್ವಜಗಳು ಹಾಗೂ ಬೃಹತ್ ಭಾವಚಿತ್ರಗಳ ಫ್ಲೆಕ್ಸ್ ಅಳವಡಿಸಿ ಸಂಪೂರ್ಣ ಕೇಸರಿಮಯಗೊಳಿಸಿ ವರ್ಣರಂಜಿತವಾಗಿ ಅಲಂಕರಿಸಿರುವುದು.
Published on

ಶ್ರೀರಂಗಪಟ್ಟಣ:  ಡಿ.15ರಂದು ಹನುಮ ಮಾಲಾಧಾರಿಗಳ ಬೃಹತ್ ಸಂಕೀರ್ತನಾ ಯಾತ್ರೆ ನಡೆಯುವ ಹಿನ್ನೆಲೆ ಪುರಾಣ ಪ್ರಸಿದ್ಧ ಶ್ರೀರಂಗಪಟ್ಟಣ ಸಂಪೂರ್ಣ ಕೇಸರಿಮಯವಾಗಿ ಅಲಂಕಾರಗೊಂಡು ನಳನಳಿಸುತ್ತಿದೆ.

ಪಟ್ಟಣದ ಐತಿಹಾಸಿಕ ಶ್ರೀ ಮೂಡಲಬಾಗಿಲು ಆಂಜನೇಯಸ್ವಾಮಿ ಸ್ಮರಣೆಗಾಗಿ ಹಿಂದು ಜಾಗರಣ ವೇದಿಕೆ ಹಮ್ಮಿಕೊಳ್ಳುವ 10ನೇ ವರ್ಷದ ಸಂಕೀರ್ತನ ಯಾತ್ರೆಯಲ್ಲಿ ಪಾಲ್ಗೊಳ್ಳಲು ಸಾವಿರಾರು ಹನುಮ ಭಕ್ತರು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಲಿದ್ದಾರೆ. ಇದಕ್ಕಾಗಿ ಜಾಗರಣ ವೇದಿಕೆ ಸೇರಿದಂತೆ ವಿವಿಧ ಹಿಂದು ಸಂಘಟನೆಗಳು ಗಂಜಾಂನ ನಿಮಿಷಾಂಬ ದೇಗುಲ ಮುಂಭಾಗದಿಂದ 5 ಕಿ.ಮಿ. ದೂರದ ಪಟ್ಟಣದ ಶ್ರೀರಂಗನಾಥಸ್ವಾಮಿ ಮೈದಾನದವರೆಗೂ ಪೇಟೆ ಬೀದಿ ಮತ್ತು ಪಟ್ಟಣದ ಮುಖ್ಯರಸ್ತೆಗಳು ಸೇರಿದಂತೆ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಹನುಮ ಧ್ವಜಗಳು, ಕೇಸರಿ ಬಂಟಿಂಗ್ಸ್ ಹಾಗೂ ಹನುಮನ ಬೃಹತ್ ಭಾವಚಿತ್ರಗಳಿರುವ ಫ್ಲೆಕ್ಸ್‌ಗಳನ್ನು ಅಳವಡಿಸಿ ಯಾತ್ರೆ ಸಾಗುವ ಸಂಪೂರ್ಣ ಮಾರ್ಗದಲ್ಲಿ ತಳಿರು ತೋರಣ, ಬಾಳೆ ಕಂಬಗಳ ಕಟ್ಟಿ ವರ್ಣರಂಜಿತವಾಗಿ ಅಲಂಕರಿಸುವ ಜತೆಗೆ ವಿಜೃಂಭಣೆಯಿಂದ ಆಚರಿಸಲು ಸಿದ್ಧತೆ ಕೈಗೊಂಡಿದೆ.

ಇನ್ನು ಸಂಕೀರ್ತನ ಯಾತ್ರೆಯು ಗಂಜಾಂನ ಶ್ರೀ ನಿಮಿಷಾಂಬ ಮುಂಭಾಗದ ಶ್ರೀ ಆಂಜನೇಯಸ್ವಾಮಿ ದೇವಾಲಯದ ಸನ್ನಿಧಿಯಿಂದ ಯಾತ್ರೆಯ ಭಾನುವಾರ ಬೆಳಗ್ಗೆ 11.30ಕ್ಕೆ ಜ್ಯೋತಿಷಿ ಡಾ.ಭಾನುಪ್ರಕಾಶ್ ಶರ್ಮ, ಮುಖಂಡರಾದ ಚಂದನ್, ರಾಂಪುರ ಶ್ಯಾಂ ಸೇರಿದಂತೆ ಹಲವರ ನೇತೃತ್ವದಲ್ಲಿ ಆರಂಭವಾಗಲಿದ್ದು, ಇದಕ್ಕು ಮೊದಲು ನಿಮಿಷಾಂಬ ದೇಗುಲದ ಆವರಣದ ಅಳವಡಿಸಲಾಗಿರುವ ವೇದಿಕೆಯಲ್ಲಿ ಬೆಳಗ್ಗೆ 10ಕ್ಕೆ ದೇವಾಲಯ ಸಂವರ್ಧನ ಸಮಿತಿ ರಾಜ್ಯ ಸಂಯೋಜಕ ಮನೋಹರ್ ಮಠದ್ ನೆರೆದಿರುವ ಸಹಸ್ರಾರು ಜನರ ಕುರಿತು ದಿಕ್ಕೂಚಿ ಭಾಷಣ ಮಾಡಲಿದ್ದಾರೆ.

ಡ್ರೋಣ್ ಜತೆಗೆ ಹದ್ದಿನ ಕಣ್ಗಾವಲು: ಪಟ್ಟಣದಲ್ಲಿ ಭಾನುವಾರ ನಡೆಯುವ ಹನುಮ ಮಾಲಾಧಾರಿಗಳ ಸಂರ್ಕಿತನಾ ಯಾತ್ರೆ ಹಿನ್ನೆಲೆ ಗಂಜಾಂನಿಂದ ಶ್ರೀರಂಗಪಟ್ಟಣದವರೆಗೂ ರಸ್ತೆಯುದ್ದಕ್ಕೂ ಸಹಸ್ರಾರು ಪೊಲೀಸರ ನಿಯೋಜನೆ ಮೂಲಕ ಸರ್ಪಗಾವಲು ಹಾಕಿ ಯಾವುದೇ ಅನಾಹುತ ಹಾಗೂ ಸಮಸ್ಯೆಗಳು ಉಂಟಾಗದಂತೆ ಮಂಡ್ಯ ಜಿಲ್ಲಾ ಪೊಲೀಸ್ ಇಲಾಖೆ ಮುಂಜಾಗ್ರತೆಯಾಗಿ ಬಿಗಿ ಭದ್ರತೆ ಕೈಗೊಂಡಿದೆ.

ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮತ್ತು ಚಾಮರಾಜನಗರ ಎಸ್ಪಿ ಬಿ.ಟಿ.ಕವಿತಾ ಅವರ ನೇತೃತ್ವದಲ್ಲಿ ಹೆಚ್ಚುವರಿ ವರಿಷ್ಠಾಧಿಕಾರಿಗಳಾದ ಗಂಗಾಧರಸ್ವಾಮಿ ಹಾಗೂ ತಿಮ್ಮಯ್ಯ ನಿರ್ದೇಶನದಲ್ಲಿ 5 ಜನ ಡಿವೈಎಸ್ಪಿ, 25 ಮಂದಿ ಪೊಲೀಸ್ ಇನ್ಸ್‌ಪೆಕ್ಟರ್, 60 ಮಂದಿ ಪಿಎಸ್‌ಐ, 123 ಎಎಸ್‌ಐ, ಸಂಚಾರಿ ಸೇರಿದಂತೆ ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಶಸ್ತ್ರಸಜ್ಜಿತ ಸಹಿತ ಕ್ಷಿಪ್ರಕಾರ್ಯಪಡೆ ವಾಹನಗಳೊಂದಿಗೆ ನಿಯೋಜಿಸಲಾಗಿದೆ.

ಇದರೊಂದಿಗೆ ಗಂಜಾಂ ಹಾಗೂ ಪಟ್ಟಣದ ವಿವಿಧ ವೃತ್ತಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ, ನೂರಕ್ಕೂ ಹೆಚ್ಚು ಕಡೆ ಸಿಸಿ ಕ್ಯಾಮೆರಾಗಳ ಅಳವಡಿಕೆ, ವಿಡಿಯೋ ಚಿತ್ರೀಕರಣ ಮತ್ತು ಡ್ರೋಣ್ ಕ್ಯಾಮೆರಾಗಳೊಂದಿಗೆ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದು, ಪ್ರತಿಯೊಂದು ಸನ್ನಿವೇಶಗಳನ್ನು ಚಿತ್ರೀಕರಣ ನಡೆಸಲಿದ್ದಾರೆ. ಇದರೊಂದಿಗೆ ಶ್ರೀರಂಗಪಟ್ಟಣ ಹಾಗೂ ಗಂಜಾಂ ಸೇರಿದಂತೆ ಯಾತ್ರೆ ತೆರಳುವ ಮಾರ್ಗದುದ್ದಕ್ಕು ಬಾಂಬ್ ನಿಷ್ಕ್ರೀಯ ದಳ ಮತ್ತು ಶ್ವಾನ ದಳ ಪರಿಶೀಲನೆ ನಡೆಸಿದ್ದು, ವಿಧ್ವಂಸಕ ಕೃತ್ಯ ಎಸಗುವವರ ಕುರಿತು ತೀವ್ರ ನಿಗಾ ವಹಿಸಿದ್ದಾರೆ.

ಶ್ರೀರಂಗಪಟ್ಟಣಕ್ಕೆ ಆಗಮಿಸುವ ಎಲ್ಲ ವಾಹನಗಳ ಬಗ್ಗೆ ತೀವ್ರ ಕಟ್ಟೆಚ್ಚರ ವಹಿಸಲಿರುವ ಪೊಲೀಸರು ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳಲ್ಲೂ ಚೆಕ್‌ಪೋಸ್ಟ್ ನಿರ್ಮಿಸಿದ್ದು, ತಪಾಸಣೆ ಕೈಗೊಳ್ಳಲಿದ್ದಾರೆ. ಇನ್ನು ಪಟ್ಟಣದಲ್ಲಿರುವ ಮಸ್ಜೀದ್-ಎ-ಆಲಾ(ಜಾಮಿಯಾ ಮಸೀದಿ)ಮತ್ತು ಗಂಜಾಂ ಸೇರಿದಂತೆ ಎಲ್ಲಾ ಮಸೀದಿಗಳು ಹಾಗೂ ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸರು ಎತ್ತರದ ಬ್ಯಾರಿಕೇಡ್ ಅಳವಡಿಸಿ ಈಗಾಗಲೇ ಭಿಗಿ ಭದ್ರತೆ ಒದಗಿಸಲಾಗಿದೆ. ಇನ್ನು ಸಂಕೀರ್ತನ ಯಾತ್ರೆಯ ಮುನ್ನದಿನವಾದ ಶನಿವಾರ ಗಂಜಾಂ ಹಾಗೂ ಶ್ರೀರಂಗಪಟ್ಟಣದ ಮುಖ್ಯರಸ್ತೆಗಳಲ್ಲಿ ಶಸ್ತ್ರಸಜ್ಜಿತ ಸಹಸ್ರಾರು ಪೊಲೀಸರು ಪೊಲೀಸ್ ವಾಹನಗಳೊಂದಿಗೆ ಪಟ್ಟಣದಲ್ಲಿ ಪಥ ಸಂಚಲನ ನಡೆಸಿ ಪುರಜನರ ಗಮನ ಸೆಳೆದರು.

ಡಿವೈಎಸ್ಪಿ ಎಚ್.ಎಸ್.ಮುರುಳಿ, ಶ್ರೀರಂಗಪಟ್ಟಣ ಟೌನ್ ಠಾಣೆ ಇನ್ಸ್‌ಪೆಕ್ಟರ್ ಬಿ.ಎಸ್.ಪ್ರಕಾಶ್, ಪಿಎಸ್‌ಐ ಶಿವಲಿಂಗ ದಳವಾಯಿ, ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಬಿ.ಜಿ.ಕುಮಾರ್, ಪಿಎಸ್‌ಐ ರಕ್ಷಿತಾ, ಅರಕೆರೆ ವೃತ್ತದ ಸರ್ಕಲ್ ಇನ್ಸ್‌ಪೆಕ್ಟರ್ ಟಿ.ಎಂ.ಪುನೀತ್, ಪಿಎಸ್‌ಐ ವಿನೋದ್ ಕುಮಾರ್, ಕೆ.ಆರ್.ಸಾಗರ ಪಿಎಸ್‌ಐ ರಮೇಶ್ ಕರ್ಕಿಕಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net