ಬಸರಾಳು ವ್ಯಾಪ್ತಿಗೆ ಶಾಶ್ವತ ನೀರಾವರಿ: ಶಾಸಕ ರವಿಕುಮಾರ್ ಗಣಿಗ ಭರವಸೆ

Grand entrance inauguration Mandya
Published on

ಮಂಡ್ಯ: ಬಸರಾಳು ಹೋಬಳಿ ವ್ಯಾಪ್ತಿಯಲ್ಲಿ ಕಾವೇರಿ ನೀರನ್ನು ಹರಿಸುವ ಉದ್ದೇಶದಿಂದ ಒಂದು ಸಾವಿರ ಕೋಟಿ ರೂ ವೆಚ್ಚದ ಯೋಜನೆ ಅನುಷ್ಠಾನಕ್ಕೆ ಚಿಂತನೆ ನಡೆಸಲಾಗಿದೆ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.

ತಾಲೂಕಿನ ಬಸರಾಳು ಹೋಬಳಿ ಚಂದಗಾಲು ಗ್ರಾಮದಲ್ಲಿ ಪಟ್ಟಲದಮ್ಮ ಮತ್ತು ಕೊಲ್ಲಾಪುರದಮ್ಮ ದೇವಿಯ ಮಹಾದ್ವಾರ ಪ್ರತಿಷ್ಠಾಪನೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ಅವರ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಬಸರಾಳು ಭಾಗದಲ್ಲಿ ನೀರಿನ ಸಮಸ್ಯೆ ಕಾಡುತ್ತಿದೆ. ಹೇಮಾವತಿ ನದಿ ನೀರನ್ನೇ ಅವಲಂಬಿಸಬೇಕಿದೆ. ಈ ಹಿನ್ನೆಲೆಯಲ್ಲಿ ಬಸರಾಳು, ನಾಗಮಂಗಲ ವಿಧಾನಸಭಾ ಕ್ಷೇತ್ರದ ಹೊಣಕೆರೆ ಹಾಗೂ ದೇವಲಾಪುರ ಭಾಗಕ್ಕೆ ಶ್ರೀರಂಗಪಟ್ಟಣದಿಂದ ಕಾವೇರಿ ನೀರು ಹರಿಸಲು ಯೋಜನೆ ರೂಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಸಿಎಂ ಅವರೊಂದಿಗೆ ಚರ್ಚೆ ನಡೆಸಲಾಗಿದೆ. ಒಟ್ಟಾರೆ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಇನ್ನು ಹಲ್ಲೇಗೆರೆ-ನಾಗಮಂಗಲ ರಸ್ತೆ ಕಾಮಗಾರಿಗೆ ಸ್ವಲ್ಪ ಅಡೆಚಣೆ ಇದೆ. ಆದಾಗ್ಯೂ ಅದನ್ನು ಬಗೆಹರಿಸಿ ಎರಡು ತಿಂಗಳೊಳಗೆ ಮುಗಿಸಲಾಗುವುದು. ಚಂದಗಾಲು ಗ್ರಾಮ ಪಂಚಾಯಿತಿಗೆ ವಿವಿಧ ಅಭಿವೃದ್ಧಿ ಕಾಮಗಾರಿಗೆಂದು 29 ಕೋಟಿ ರೂ ಅನುದಾನ ನೀಡಲಾಗಿದೆ. ಇದರೊಟ್ಟಿಗೆ ಉಪಕೃಷಿ ಕೇಂದ್ರ ಸ್ಥಾಪಿಸುವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ಅದರ ಬಗ್ಗೆಯೂ ಗಮನಹರಿಸಲಾಗುವುದು. ಅಂತೆಯೇ ಸಮುದಾಯ ಭವನಕ್ಕೆ ಅನುದಾನ ಕೇಳಿದ್ದೀರಿ. ಮುಂದಿನ ನನ್ನ ಅನುದಾನದಲ್ಲಿ ನೀಡಲಾಗುವುದು. ಹಲ್ಲೇಗೆರೆ, ಚಿಕ್ಕಬಳ್ಳಿ, ಚಲ್ಲನಾಯ್ಕನಹಳ್ಳಿಯಲ್ಲಿಯೂ ಸಮುದಾಯ ಭವನ ಕಾಮಗಾರಿಗೆ ಅನುದಾನ ಕೊಡಲಾಗುವುದು.

ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ಜಿಲ್ಲೆಯ ಜನರಿಗೆ ಸಹಾಯ ಮಾಡಿದವರನ್ನು ಸ್ಮರಿಸುವ ಮಹದ್ಗುಣ ರಕ್ತದಲ್ಲೇ ಬಂದಿದೆ. ರಾಜಶ್ರೀ ಕೃಷ್ಣರಾಜ ಒಡೆಯರ್ ಅವರು ಮತ್ತು ಜಗತ್ತಿನ ಅತ್ಯಂತ ಬುದ್ಧಿವಂತ, ತಾಂತ್ರಿಕ ನಿಪುಣರಾದ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ಕೊಡುಗೆಯನ್ನು ಮುಂದಿನ ದಿನಮಾನಗಳಲ್ಲಿ ಯುವಜನತೆಗೆ ತಿಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸುವುದು ಒಂದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಹೇಳಿದರು.

ಈ ಮಹಾನ್ ಚೇತನರು ಸೇರಿ ಕೃಷ್ಣರಾಜಸಾಗರ ಜಲಾಶಯವನ್ನು ನಿರ್ಮಾಣ ಮಾಡಿರದಿದ್ದರೆ ಇವತ್ತು ಮಂಡ್ಯ ಜಿಲ್ಲೆ ಬರಪೀಡಿತವಾಗಿರುತ್ತಿತ್ತು. ರಾಜಕಾರಣಿಗಳ ಕೊಡುಗೆಗಿಂತ ಇವರಿಬ್ಬರ ಕೊಡುಗೆ ಮೈಸೂರು ಮಹಾಸಂಸ್ಥಾನಕ್ಕೆ ಅಗಾಧವಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಸಂಸ್ಥಾನದ 24ನೇ ರಾಜರಾಗಿ ಸರ್ವಾಂಗೀಣ ಪ್ರಗತಿಗೆ ಕಾರಣರಾದರು. ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಅವರಂತೆ ನಾಲ್ವಡಿ ಅವರ ಪಾತ್ರ ಮಹತ್ವದ್ದು. ಪ್ರಾಜ್ಞರಿಗೆ ಅಧಿಕಾರ ನೀಡುವ ಮನೋಬಲ ಅರಸನಿಗಿರಬೇಕು. ಅಂಥಹದೊಂದು ಗುಣ ಇವರಲ್ಲಿ ಇದ್ದಿದ್ದೇ ಇಷ್ಟೆಲ್ಲ ಸಾಧನೆಗೆ ಕಾರಣವಾಗಿದೆ ಎಂದು ಶಾಸಕರು ಅಭಿಪ್ರಾಯಪಟ್ಟರು.

ಒಡೆಯರ್ ಅವರು ಅಧಿಕಾರ ವಹಿಸಿಕೊಂಡು ಮೈಸೂರನ್ನು ಮಾದರಿ ಮೈಸೂರು ಮಾಡಿದರು. ಪ್ರಜಾಪ್ರತಿನಿಧಿ, ನ್ಯಾಯ ವಿಧಾಯಕ ಸಭೆ ಸ್ಥಾಪಿಸಿ ಜನತೆಯ ಆಡಳಿತಕ್ಕೆ ಉತ್ತೇಜನ ನೀಡಿದರು. ಗ್ರಾಮ ಪಂಚಾಯಿತಿ ರಚಿಸಿದರು. ಶಿಕ್ಷಣ, ವೈದ್ಯಕೀಯ, ನೀರಾವರಿ, ಸಾರಿಗೆ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದರು. ಉಚಿತ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿದ್ದಲ್ಲದೆ, ಮೈಸೂರು ವಿವಿಯನ್ನು ಸ್ಥಾಪನೆ ಮಾಡಿದ್ದರು. ಮೈಸೂರಿನಲ್ಲಿ ಉತ್ತಮ ಕಟ್ಟಡ, ರಸ್ತೆ, ಉದ್ಯಾನ ನಿರ್ಮಿಸಿದರು. ದೇವದಾಸಿ ಪದ್ಧತಿ ನಿಷೇಧ, ವಿಧವೆಯರ ಮರುವಿವಾಹಕ್ಕೆ ಅವಕಾಶ, ಸ್ತ್ರೀಯರಿಗೆ ಮತದಾನದ ಹಕ್ಕು ನೀಡಿದರು. ರೈತರಿಗೆ ಸಹಕಾರಿ ಸಂಘವನ್ನು ಸ್ಥಾಪಿಸುವ ಮೂಲಕ ರೈತಸ್ನೇಹಿಯಾಗಿ ಆಡಳಿತವನ್ನು ನಡೆಸಿದ್ದರು ಎಂದು ಹೇಳಿದರು.

ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರು ಆಧುನಿಕ ಭಾರತದ ನಿರ್ಮಾತೃಗಳಲ್ಲಿ ಒಬ್ಬರು. ನೀರಾವರಿ ಕ್ಷೇತ್ರದ ದಿಗ್ಗಜರಾಗಿ ದಖನ್ ಪ್ರಸ್ಥಭೂಮಿಯಲ್ಲಿ ಕ್ರಾಂತಿ ಮಾಡಿದರು. ಮೈಸೂರು ಸಂಸ್ಥಾನದ ದಿವಾನರಾಗಿ ಕೈಗಾರಿಕೆ ಸ್ಥಾಪನೆಗೆ ನೆರವಾದರು. ಮೈಸೂರು ಸಂಪದಭಿವೃದ್ಧಿ ಸಮ್ಮೇಳನವನ್ನು ಆರಂಭಿಸಿದರು. ಮುಖ್ಯ ಇಂಜಿನಿಯರ್ ಆಗಿ ರಸ್ತೆ, ರೈಲ್ವೆ, ನೀರಾವರಿ ಯೋಜನೆ ರೂಪಿಸಿದರು. ಕೃಷ್ಣರಾಜಸಾಗರ ಅಣೆಕಟ್ಟು, ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಮೈಸೂರು ಸಾಬೂನು ಕಾರ್ಖಾನೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು ಬ್ಯಾಂಕ್, ಸಾರ್ವಜನಿಕ ಗ್ರಂಥಾಲಯಗಳು, ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಗೆ ಕಾರಣರಾದರು ಎಂದು ಬಣ್ಣಿಸಿದ ಅವರು, ಕಳೆದ ಎರಡು ವರ್ಷದ ಅವಧಿಯಲ್ಲಿ ವಿಶ್ವೇಶ್ವರಯ್ಯ ನಾಲೆ ಅಭಿವೃದ್ಧಿಗೆ ಈ ಕ್ಷೇತ್ರದ ಕ್ರಿಯಾಶೀಲ ಶಾಸಕ ರವಿಕುಮಾರ್ ಗಣಿಗ 285 ಕೋಟಿ ರೂಪಾಯಿ ಅನುದಾನ ತಂದಿದ್ದಾರೆ. ಅವರ ಮೇಲೆ ನಿಮ್ಮ ಆಶೀರ್ವಾದ ಇರಲಿ ಎಂದರು.

ಜಂಗಮಮಠದ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಯುವ ಮುಖಂಡ ಸಚಿನ್ ಚಲುವರಾಯಸ್ವಾಮಿ, ಲೋಕಸಭಾ ಚುನಾವಣೆ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಸ್ಟಾರ್ ಚಂದ್ರು, ಮಂಡ್ಯ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net