ಬಾಳೆಹೊನ್ನೂರಲ್ಲಿ ಸೆ.22 ಅದ್ದೂರಿ ದಸರಾ ಮಹೋತ್ಸವ

bhr 2 (7)
Published on

ಬಾಳೆಹೊನ್ನೂರು: ಪಟ್ಟಣದ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯಿಂದ 16ನೇ ವರ್ಷದ ನವರಾತ್ರಿ ಮಹೋತ್ಸವ ಸೆ.22ರಿಂದ ಅ.2ರವರೆಗೆ ನಡೆಯಲಿದೆ ಎಂದು ಸಮಿತಿ ಕಾರ್ಯಾಧ್ಯಕ್ಷ ಬಿ.ಚನ್ನಕೇಶವಗೌಡ ಬರಗಲ್ ಹೇಳಿದರು.

ಪಟ್ಟಣದ ಮಾರ್ಕಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ನವರಾತ್ರಿ ಪೂಜಾ ಸಮಿತಿಯ ಸರ್ವಸದಸ್ಯರ ಸಭೆಯಲ್ಲಿ ಪ್ರಸಕ್ತ ಸಾಲಿನ ಉತ್ಸವದ ಕರಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿ, ಬಾಳೆಹೊನ್ನೂರು ನವರಾತ್ರಿ ಮಹೋತ್ಸವ ಈ ಬಾರಿ 11ದಿನ ಕಾರ್ಯಕ್ರಮ ನಡೆಯಲಿದೆ. ಉತ್ಸವದ ಎಲ್ಲ ದಿನ ದುರ್ಗಾದೇವಿ ಸನ್ನಿಯಲ್ಲಿ ತ್ರಿಕಾಲ ಪೂಜೆ, ಅಷ್ಟೋತ್ತರ ಕುಂಕುಮಾರ್ಚನೆ, ಶ್ರೀ ದುರ್ಗಾ ಪಾರಾಯಣ ಹಾಗೂ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿದೆ. ವಿಶೇಷ ದಿನಗಳಂದು ಚಂಡಿಕಾ ಹೋಮ, ಅಕ್ಷರಾಭ್ಯಾಸ, ಹೂವಿನ ಪೂಜೆ, ದುರ್ಗಾ ಹೋಮ ನಡೆಯಲಿದೆ.

ಪ್ರತಿದಿನ ಮಧ್ಯಾಹ್ನ ಎರಡು ಸಾವಿರಕ್ಕೂ ಅಧಿಕ ಭಕ್ತರಿಗೆ ಅನ್ನ ಸಂತರ್ಪಣೆ, ರಾತ್ರಿ ಭವ್ಯವಾದ ದುರ್ಗಾ ಮಂಟಪದಲ್ಲಿ ರಾಜ್ಯದ ವಿವಿಧ ಕಲಾ ತಂಡಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಲಾ ತಂಡಗಳಲ್ಲಿ ಪ್ರಖ್ಯಾತ ಕಲಾವಿದರು ಪಾಲ್ಗೊಂಡು ಕಲಾ ಸೇವೆ ಸಲ್ಲಿಸಲಿದ್ದಾರೆ ಎಂದರು.

ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಮಾತನಾಡಿ, ಕಳೆದ 15 ವರ್ಷಗಳಿಂದ ಸಂಪ್ರದಾಯ ಬದ್ಧ, ಶಿಸ್ತು ಹಾಗೂ ವೈವಿಧ್ಯಮಯ ಕಾರ್ಯಕ್ರಮದ ಮೂಲಕ ಹೆಸರಾಗಿರುವ ನವರಾತ್ರಿ ಉತ್ಸವವು ಬಾಳೆಹೊನ್ನೂರು ದಸರಾ ಎಂದೇ ಮನೆಮಾತಾಗಿದೆ. ಈ ವರ್ಷ ವಿಶೇಷ, ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಉತ್ಸವದ 11ದಿನ ಸರಾಸರಿ 40 ಸಾವಿರಕ್ಕೂ ಅಧಿಕ ಭಕ್ತರು ಅನ್ನಸಂತರ್ಪಣೆಯ ಪ್ರಸಾದ ಸ್ವೀಕರಿಸುವ ನಿರೀಕ್ಷೆಯಿದೆ. ಹಿಂದು ಸಂಸ್ಕೃತಿ, ಸಂಪ್ರದಾಯ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net