ಬೃಹತ್ ಸಮಾವೇಶ

CPTN PRAKSHA RAI
Published on

ವಿಜಯವಾಣಿ ಸುದ್ದಿಜಾಲ ಚನ್ನರಾಯಪಟ್ಟಣ

ಭೂ ಸ್ವಾಧೀನ ವಿರೋಧಿಸಿ ಇಲ್ಲಿನ ರೈತರು ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟ ಸಾವಿರ ದಿನ ದಾಟಿರುವುದು ಸಣ್ಣ ವಿಷಯವಲ್ಲ. ಎಲ್ಲ ಸರ್ಕಾರಗಳು ರೈತ ವಿರೋಧಿ ಧೋರಣೆಯನ್ನೇ ಅನುಸರಿಸುತ್ತಿವೆ ಎಂದು ಚಿತ್ರನಟ ಪ್ರಕಾಶ್‌ರಾಜ್ ಬೇಸರ ವ್ಯಕ್ತಪಡಿಸಿದರು.

ಚನ್ನರಾಯಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಭೂಸ್ವಾಧೀನ ವಿರೋಧಿ ಹೋರಾಟಗಾರರ ಧರಣಿಯಲ್ಲಿ ಮಾತನಾಡಿದರು. ಫಲವತ್ತಾದ ಭೂಮಿಯನ್ನು ವಶಕ್ಕೆ ಪಡೆದು ಕೈಗಾರಿಕೆಗಳನ್ನು ನಿರ್ಮಿಸುತ್ತಾ ಹೋದರೆ ಮುಂದೆ ಆಹಾರಕ್ಕೆ ಏನು ಮಾಡಬೇಕು, ಹೊಟ್ಟೆಗೇನು ತಿನ್ನಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತನಿಗೆ ಭೂಮಿ ಆಸ್ತಿ ಅಲ್ಲ ಅದು ಅವನ ಬದುಕು, ಸ್ವಾಭಿಮಾನ, ಹೆಮ್ಮೆ, ಅದನ್ನು ಹೇಗೆ ಕಿತ್ತು ಕೊಳ್ತಿರಿ, ಬಂಡವಾಳಶಾಯಿಗಳಿಗೆ ರೈತನ ಮತ್ತು ಭೂಮಿ ನಡುವಿನ ಸಂಬಂಧ ಅರ್ಥವಾಗುವುದಿಲ್ಲ, ರೈತನನ್ನ ಉಳಿಸಿಕೊಳ್ಳದಿದ್ದರೆ ಮುಂದೆ ಎಲ್ಲರೂ ಸರ್ವನಾಶವಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು. ಈ ದೇಶದ ಕರ್ಮ ಮತ್ತು ದೊಡ್ಡ ಶಾಪ ಅಂದರೆ ರೈತರು ಹಲವು ದಶಕಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದಾರೆ, ರೈತ ದೇಶದ ಬೆನ್ನೇಲುಬು ಎಂದು ಜನಪ್ರತಿನಿಧಿಗಳು ಕಥೆ ಹೇಳ್ತಾರೆ ಅಷ್ಟೇ, ಇಷ್ಟು ದಿನಗಳಿಂದ ಹೋರಾಟ ಮಾಡುತ್ತಿದ್ದರೂ ಯಾರೂ ಸ್ಪಂದಿಸಿಲ್ಲ ಎಂದರೆ ಏನರ್ಥ? ಎಲ್ಲ ಸರ್ಕಾರಗಳು ರೈತ ವಿರೋಧಿಗಳು, ಜನವಿರೋಧಿಗಳು ಆಗಿವೆ, ರಾಜಕಾರಣಿಗಳಿಗೆ ನಮ್ಮ ರೈತರು ಚುನಾವಣೆಯಲ್ಲಿ ಮತಹಾಕುವ ಹಾಕುವ ಬಟನ್‌ಗಳಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ನೆನಪು ಕಳೆದುಕೊಂಡಿದ್ದಾರೆ: ನಾನು ರೈತನ ಮಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ, ನಾನೂ ಕೃಷಿ ಮಾಡುತ್ತಿದ್ದೇನೆ. ರೈತರ ಬವಣೆ ಎಂಬುದರ ಅರಿವು ನನಗಿದೆ. ನಮ್ಮ ಶಾಸಕಾಂಗ ಹಾಗೂ ಅಧಿಕಾರಿ ವರ್ಗದಲ್ಲಿ ಇರುವರೆಲ್ಲರೂ ರೈತನ ಮಕ್ಕಳೇ ಆದರೆ, ಅವರು ತಮ್ಮ ಕಣ್ಣು-ಕಿವಿ ಹಾಗೂ ನೆನಪು ಕಳೆದುಕೊಂಡಿದ್ದಾರೆ ಎಂದು ಸಾಹಿತಿ ಪ್ರೋ.ಸಿದ್ದರಾಮಯ್ಯ ಟೀಕಿಸಿದರು.

ರೈತರ ಬವಣೆಗಳನ್ನು ಬಾಲ್ಯದಲ್ಲಿ ಕಂಡವರು, ಅಕ್ಷರ ಕಲಿತ ನಂತರ ಅದಕ್ಕೆ ಪರಿಹಾರ ಹುಡುಕಬೇಕಿತ್ತು. ಆದರೆ, ಅವರು ಆ ಕಣ್ಣು ಕಳೆದುಕೊಂಡು ಕನ್ನಡಕ ಹಾಕಿಕೊಂಡಿದ್ದಾರೆ. ನೆನಪು ಹಾಗೂ ಕಿವಿ ಎರಡನ್ನೂ ಕಳೆದುಕೊಂಡಿದ್ದಾರೆ. ವಿಧಾನಸೌಧದಲ್ಲಿ ಇರುವ ಬಹುತೇಕರು ರೈತರ ಮಕ್ಕಳೆ. ಅವರು ತಮ್ಮ ಅಂತಃಸಾಕ್ಷಿಯನ್ನು ಎಚ್ಚರಿಸಿಕೊಳ್ಳುವ ರೀತಿಯಲ್ಲಿ, ಹಳೆಯ ನೆನಪನ್ನು ಜಾಗೃತಿಯಲ್ಲಿ ಇಟ್ಟುಕೊಂಡು ರೈತರ ಬವಣೆ ನೋಡಬೇಕು. ತಮ್ಮ ಆತ್ಮಸಾಕ್ಷಿ ಎಚ್ಚರದಲ್ಲಿಟ್ಟುಕೊಂಡು ಮಾತನಾಡಬೇಕು ಎಂದರು. ದೇಶಕ್ಕೆ ಪ್ರಗತಿ ಬೇಕು ಹೌದು. ಆದರೆ, ಸಂಸ್ಕೃತಿ, ಇತಿಹಾಸ ಹಾಗೂ ಬದುಕಿನ ನಾಶದ ಮೂಲಕ ಅಲ್ಲ. ನಮ್ಮ ಬದುಕಿಗೆ ಪೂರಕವಾದ ಪ್ರಗತಿ ಬೇಕು. ಸ್ಥಳೀಯವಾಗಿ ಇಲ್ಲಿ ಪ್ರತಿಯೊಂದು ತರಕಾರಿಯನ್ನೂ ಬೆಳಯುತ್ತಾರೆ. ಅದೆಲ್ಲಾ ಬೆಂಗಳೂರಿಗೆ ಹೋಗುತ್ತಿದೆ, ಇಂತಹ ಹಳ್ಳಿಗಳನ್ನು ನಾಶ ಮಾಡಿ, ಪ್ರಗತಿ ಸಾಧಿಸುತ್ತೇವೆ ಎನ್ನುವುದು ಮನುಷ್ಯತ್ವವಾಗಲಿದೆಯೇ ಎಂದು ಪ್ರಶ್ನಿಸಿದರು.

ರೈತರ ಸಂಸ್ಕೃತಿ ರಕ್ಷಣೆಯ ಸಂಘರ್ಷ: ಇದು ಕೇವಲ ಚನ್ನರಾಯಪಟ್ಟಣದ 13 ಗ್ರಾಮಗಳ ಹೋರಾಟವಲ್ಲ. ಈ ನಾಡಿನ ರೈತರ ಸಂಸ್ಕೃತಿಯನ್ನು ಉಳಿಸುವುದಕ್ಕೆ ನಡೆಸುತ್ತಿರುವ ಸಂಘರ್ಷವಾಗಿದೆ ಎಂದುರೈತ ನಾಯಕಿ ಚುಕ್ಕಿ ಜಂಜುಂಡಸ್ವಾಮಿ ಎಚ್ಚರಿಕೆ ನೀಡಿದರು.ನಮಗೆ ಎಂಥ ಅಭಿವೃದ್ಧಿ ಬೇಕು ಎಂಬುದು ನಮ್ಮನ್ನು ಆಳುತ್ತಿರುವ ಸರ್ಕಾರಕ್ಕೆ ಬೇಕಿಲ್ಲ. ಆದ್ದರಿಂದ ರೈತರು ಮಾಡುತ್ತಿರುವುದು ನಿಜವಾದ ಅಭಿವೃದ್ಧಿ ಎಂದು ತೋರಿಸುವುದಕ್ಕೆ ಈ ಹೋರಾಟ ಎಂದು ಹೇಳಿದರು. ಅಧಿಕಾರಿಗಳು ಹಾಗೂ ಸರ್ಕಾರದ ಜತೆ ಸರಣಿ ಸಭೆಗಳು ನಡೆಯುತ್ತಿವೆ. ಏಕೆ ಇಷ್ಟೆಲ್ಲ ಸಭೆಗಳು ಎಂದು ನಮಗೆ ಅನಿಸುತ್ತಿದೆ. ಶೇ.77.7 ಜನ ನಾವು ಭೂಮಿ ಕೊಡಲ್ಲ ಎಂದು ಬರೆದುಕೊಟ್ಟಿದ್ದಾರೆ. ಈ ಹಿಂದಿನ ಕೇಂದ್ರ ಕಾಂಗ್ರೆಸ್ ಸರ್ಕಾರ ಬಹುಸಂಖ್ಯಾತರ ವಿರೋಧ ಇದ್ದಲ್ಲಿ ಭೂಸ್ವಾಧೀನ ಮಾಡುವಂತಿಲ್ಲ ಎಂದು ಹೇಳುತ್ತದೆ. ಇಷ್ಟು ಸರಳವಾಗಿರುವ ವಿಚಾರ ನಮಗೆ ಗೊತ್ತಿರುವಾಗ, ಸರ್ಕಾರದ ಶಾಸಕಾಂಗ ಹಾಗೂ ಕಾಯಾರ್ಂಗಕ್ಕೆ ಅರ್ಥವಾಗಿಲ್ಲ ಎಂದು ಅಂದುಕೊಳ್ಳಬೇಕಾ? ಸಾವಿರ ದಿನಗಳಿಂದ ನಿರಂತರ ಹೋರಾಟ ನಡೆಯುತ್ತಿದ್ದರೂ ಸರ್ಕಾರ ಸ್ವಾಧೀನ ಕೈಬಿಡುವುದಕ್ಕೆ ತಯಾರಿಲ್ಲ ಎಂದರೆ ಏನರ್ಥ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net