

ಮಂಡ್ಯ: ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯಲ್ಲಿ ರೈತರ 1800 ಎಕರೆ ಭೂಸ್ವಾಧಿನಕ್ಕೆ ಮುಂದಾಗಿರುವ ರಾಜ್ಯಸರ್ಕಾರದ ನಿರ್ಧಾರ ರೈತ ವಿರೋಧಿಯಾಗಿದೆ. ಆದ್ದರಿಂದ ತನ್ನ ನಿಲುವನ್ನು ಬದಲಿಸಿಕೊಳ್ಳಬೇಕು ಎಂದು ಜನಾಂದೋಲನಗಳ ಮಹಾಮೈತ್ರಿ ಸದಸ್ಯ ಉಗ್ರನರಸಿಂಹೇಗೌಡ ಆಗ್ರಹಿಸಿದರು.
ರೈತರಿಂದ ಸಾವಿರಾರು ಎಕರೆ ಜಮೀನು ಸ್ವಾಧೀನ ಪಡಿಸಿಕೊಂಡು ಬಂಡವಾಳಶಾಹಿಗಳ ಪರವಾಗಿ ನಿಲ್ಲುವ ದುರುದ್ದೇಶ ಸರ್ಕಾರದಾಗಿದೆ. ಹಿಂದಿನ ಸರ್ಕಾರ ಭೂಸ್ವಾಧಿನಕ್ಕೆ ಮುಂದಾದಾಗ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯೋಜನೆಯನ್ನು ಕೈಬಿಡುವುದಾಗಿ ಕೊಟ್ಟ ವಾಗ್ದಾನ ಮರೆತು ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ಕ್ರಮ ಸರಿಯಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಸಚಿವರಾದ ಎಂ.ಬಿ.ಪಾಟೀಲ್ ಹಾಗೂ ಎಚ್.ಕೆ.ಮುನಿಯಪ್ಪ 1800 ಎಕರೆ ಭೂಮಿಯಲ್ಲಿ 490 ಎಕರೆ ಭೂಮಿಯನ್ನು ಸ್ವಾಧೀನ ಪಡೆಸಿಕೊಳ್ಳುವ ಕಾರ್ಯದಿಂದ ಕೈಬಿಡುವುದಾಗಿ ಹೇಳಿ ರೈತರ ದಾರಿ ತಪ್ಪಿಸುತ್ತಿದ್ದಾರೆ. ರಾಜ್ಯಸರ್ಕಾರ ಈಗಾಗಲೇ ಕೈಗಾರಿಕೆಗಳಿಗೆ ಸ್ವಾಧೀನ ಪಡಿಸಿಕೊಂಡ ರೈತರ ಭೂಮಿಯಲ್ಲಿ ಶೇ.70ರಷ್ಟು ಭೂಮಿ ಬಾಕಿ ಉಳಿದಿದ್ದು, ಆ ಸ್ಥಳದಲ್ಲಿಯೇ ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದಾಗಲಿ ಎಂದು ಹೇಳಿದರು.
ಭವಿಷ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಉದ್ದೇಶದಿಂದ ಬಲವಂತವಾಗಿ ಈಗಲೇ ರೈತರಿಂಧ ಭೂಮಿ ಸ್ವಾಧೀನ ಮಾಡಿಕೊಳ್ಳುತ್ತಿರುವ ಸರ್ಕಾರ ಬಂಡವಾಳ ಶಾಹಿಗಳ ಪರವಾಗಿದೆ ಎಂಬುದನನು ಸಾಬೀತು ಮಾಡುತ್ತಿದೆ. ಸರ್ಕಾರ ತನ್ನ ನಿರ್ಧಾರವನ್ನು ಕೈಬಿಟ್ಟು ಕೂಡಲೇ ನೋಟಿಫಿಕೇಷನ್ ನೀಡಿರುವ ರೈತರ ಭೂಮಿಯನ್ನು ಕೂಡಲೇ ಹಿಂದಿರುಗಿಸಬೇಕೆಂದು ಒತ್ತಾಯಿಸಿದರು.
ಕೆಆರ್‌ಎಸ್‌ನಲ್ಲಿ ನಿರ್ಮಿಸಲು ಹೊರಟಿರುವ ಅಮ್ಯೂಸ್‌ಮೆಂಟ್ ಪಾರ್ಕ್‌ಗೆ 2,663 ಕೋಟಿ ರೂ ಹಾಗೂ ಕಾವೇರಿ ಆರತಿಗೆ 92 ಕೋಟಿ ರೂ ವ್ಯಯಿಸಲು ಸರ್ಕಾರ ಮುಂದಾಗಿದ್ದು, ಈ ಹಣದಿಂದ ರಾಜ್ಯದ ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಪ್ರಗತಿ ಕಾಣಲು ಅವಕಾಶವಿದೆ. ಆದ್ದರಿಂದ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಹೂಡಿಕೆ ಮಾಡುವಂತೆ ಮನವಿ ಮಾಡಿದರು.
ಜನಾಂದೋಲನಗಳ ಮಹಾಮೈತ್ರಿಯ ಸಂತೋಷ್ ಕೌಲಗಿ, ಜಗದೀಶ್ ನಗರಕೆರೆ ಇದ್ದರು.