

ಬೇಲೂರು: ಪಟ್ಟಣದ ದೇವಾಂಗ ಬೀದಿಯ ಕೊನೇ ಭಾಗದಲ್ಲಿರುವ ಕೆಂಚರಾಯಸ್ವಾಮಿ ದೇಗುಲದ ಬಳಿ ಪುರಸಭೆಗೆ ಸೇರಿದ 6 ಗುಂಟೆಗೂ ಹೆಚ್ಚು ಗ್ರಾಮಠಾಣಾ ಜಾಗವಿದ್ದು, ಹನುಮ ಜಯಂತಿ ನಂತರ ಅಳತೆ ಮಾಡಿಸಿ ವಶಕ್ಕೆ ಪಡೆಯಲಾಗುವುದು ಎಂದು ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಮಾಹಿತಿ ನೀಡಿದರು.
ಪಟ್ಟಣದ ಪಂಪ್‌ಹೌಸ್ ರಸ್ತೆಯಿಂದ ದೇವಾಂಗ ಬೀದಿಗೆ ಸಂಪರ್ಕ ಕಲ್ಪಿಸುವ ನಕಾಶೆ ರಸ್ತೆಯನ್ನು ಕೆಂಚರಾಯಸ್ವಾಮಿ ದೇಗುಲ ಸಮೀಪದ ವಾಸವಿ ಶಾಲೆಯವರು ಮಣ್ಣು ಸುರಿದು ಮುಚ್ಚಿದ್ದನ್ನು ಸೋಮವಾರ ಕಾರ್ಯಾಚರಣೆ ಮೂಲಕ ತೆರವುಗೊಳಿಸಿ ಮಾತನಾಡಿದರು.
ಈ ರಸ್ತೆ ಕಳಸಿನಕೆರೆ ಸಮೀಪದಿಂದ ದೇವಾಂಗ ಬೀದಿಗೆ ಸಂಪರ್ಕಕ್ಕೆ ಉತ್ತಮ ರಸ್ತೆಯಾಗಿದೆ. ಇಂತಹ ರಸ್ತೆಯನ್ನು ಮಣ್ಣು ಸುರಿದು ಮುಚ್ಚುವ ಕೆಲಸಕ್ಕೆ ವ್ಯಕ್ತಿಯೊಬ್ಬರೂ ಮುಂದಾಗಿದ್ದರಿಂದ ಸಾರ್ವಜನಿಕರು, ಶಾಲಾ ಮಕ್ಕಳಿಗೆ ತೊಂದರೆ ಆಗಿತ್ತು. ಈ ಹಿನ್ನೆಲೆಯಲ್ಲಿ ಇಲ್ಲಿನ ಪುರಸಭಾ ಸದಸ್ಯೆ ಮಣಿಶೇಖರ್ ದೂರು ನೀಡಿದ್ದರು. ಹಾಗಾಗಿ ರಸ್ತೆಗೆ ಸುರಿದಿದ್ದ ಮಣ್ಣು ತೆರವುಗೊಳಿಸಲಾಗಿದೆ. ಇಲ್ಲಿನ ವಾಸವಿ ಶಾಲೆಗೆ ಖರೀದಿಸಿದ್ದ 30*220 ಅಳತೆ ನಿವೇಶನ ಹೊರತುಪಡಿಸಿ ಉಳಿದದ್ದು ಗ್ರಾಮಠಾಣಾ ಸ್ಥಳ ಪುರಸಭೆಗೆ ಸೇರಿದ್ದಾಗಿದೆ. ಈ ಸ್ಥಳವನ್ನೂ ಶಾಲೆಯವರು ನಮ್ಮದೆಂದು ಹೇಳುತ್ತಿದ್ದಾರೆ. ಹೀಗಾಗಿ ಖಾತೆ ಆಗಿರುವ ಬಗ್ಗೆ ಇ-ಸ್ವತ್ತು ಸೇರಿದಂತೆ ಸೂಕ್ತ ದಾಖಲೆ ತರುವಂತೆ ಸೂಚಿಸಿದ್ದೇನೆ. ಅವರು ದಾಖಲೆ ತಂದು ಕೊಟ್ಟರೆ ಪರಿಶೀಲಿಸಲಾಗುವುದು. ಸರಿಯಾದ ದಾಖಲೆ ಇಲ್ಲದಿದ್ದ ಪಕ್ಷದಲ್ಲಿ ಅವರ ನಿವೇಶನ ಹೊರತುಪಡಿಸಿ ಉಳಿದ ಜಾಗಕ್ಕೆ ಬೇಲಿ ಹಾಕಿಸಲಾಗುವುದು. ಈ ಸ್ಥಳದಲ್ಲಿ ಅಂಗನವಾಡಿ ಹಾಗೂ ಉದ್ಯಾನವನ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಮಾತಿನ ಚಕಮಕಿ: ಇದೇ ವೇಳೆ ರಸ್ತೆಯ ಸಮೀಪದಲ್ಲೇ ಇರುವ ಹಿಟ್ಟಿನ ಗಿರಣಿ ಜಾಗವು ರಸ್ತೆಗೆ ಸೇರಿದ್ದೆಂದು ಶಾಲಾ ಮುಖ್ಯಸ್ಥರು ಆರೋಪಿಸಿದ್ದರಿಂದ ಗಿರಣಿ ಮಾಲೀಕ ಹಾಗೂ ಶಾಲಾ ಮುಖ್ಯಸ್ಥರ ನಡುವೆ ಮಾತಿನ ಚಕಮಕಿಯೂ ನಡೆಯಿತು.
ಪುರಸಭೆ ಸದಸ್ಯರಾದ ಪ್ರಭಾಕರ್, ಮಾಜಿ ಸದಸ್ಯ ಬಿ.ಕೆ.ಮೋಹನ್, ಆರೋಗ್ಯಾಧಿಕಾರಿ ಲೋಹಿತ್, ಶೇಖರ್ ಇತರರು ಇದ್ದರು.