ಕಾರಿನೊಳಗೆ ಸುಟ್ಟು ಕರಕಲಾದ ಗ್ರಾಪಂ ಸದಸ್ಯ

SRP_30-01(a)jpj
ತಾಲೂಕಿನ ಶ್ರೀರಂಗಪಟ್ಟಣ -ಕೆ.ಆರ್.ಸಾಗರ ಹೆದ್ದಾರಿಯ ಪಾಲಹಳ್ಳಿ - ಪಿ.ಹೊಸಹಳ್ಳಿ ಗ್ರಾಮಗಳ ನಡುವಿನ ಏಚಿ(ನೀಲಗಿರಿ)ತೋಪು ಬಳಿ ಬುಧವಾರ ತಡರಾತ್ರಿ ಕಾರು ಹಾಗೂ ಟಿಪ್ಪರ್ ಲಾರಿ ನಡುವೆ ಉಂಟಾದ ಮುಖಾಮುಖಿ ಅಪಘಾತದಿಂದ ಬೆಂಕಿ ಹೊತ್ತಿ ಉರಿಯುತ್ತಿದ್ದು, ಬೆಂಕಿ ನಂದಿಸಲು ಅಗ್ನೀಶಾಮಕದಳ ಸಿಬ್ಬಂದಿ ಹರಸಾಹಸ ಪಟ್ಟರು.
Published on

ಶ್ರೀರಂಗಪಟ್ಟಣ : ತಾಲೂಕಿನ ಶ್ರೀರಂಗಪಟ್ಟಣ-ಕೆ.ಆರ್.ಎಸ್ ರಸ್ತೆಯಲ್ಲಿ ಇನ್ನೊವಾ ಕಾರು ಮತ್ತು ಟಿಪ್ಪರ್ ಲಾರಿ ನಡುವೆ ಮುಖಾಮುಖಿ ಭೀಕರ ಅಪಘಾತ ಸಂಭವಿಸಿದ್ದು, ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಕಾರಿನಿಂದ ಹೊರಬರಲಾಗದೆ ಸಜೀವವಾಗಿ ದಹನವಾಗಿದ್ದಾನೆ.

ತಾಲೂಕಿನ ಪಾಲಹಳ್ಳಿ-ಪಿ.ಹೊಸಹಳ್ಳಿ ಗ್ರಾಮಗಳ ನಡುವಿನ ಏಚಿ(ನಿಲಗಿರಿ)ತೋಪಿನ ತಿರುವು ಬಳಿ ಬುಧವಾರ ತಡರಾತ್ರಿ 12ರ ವೇಳೆ ಈ ರ್ದುಘಟನೆ ನಡೆದಿದ್ದು, ಹುಣಸೂರು ತಾಲೂಕು ಮೂಕನಹಳ್ಳಿ ಗ್ರಾಮದ ಪ್ರಧಾನ ಲೇ.ಶೆಟ್ಟೀಗೌಡರ ದ್ವಿತೀಯ ಪುತ್ರ ಹಾಗೂ ಮೂಕನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಚಂದ್ರಶೇಖರ್(48) ಮೃತ ದುರ್ದೈವಿ.

ಪಾಂಡವಪುರ ತಾಲೂಕಿನ ಅನುವಿನಹಳ್ಳಿ ಗ್ರಾಮದ ಶ್ರೀ ಚಿಕ್ಕಯ್ಯ ಬೀರೆಶ್ವರ ದೇವರು ಮೃತ ಚಂದ್ರಶೇಖರ್ ಅವರ ಕುಲದೈವವಾಗಿದ್ದು, ಈ ದೇವಾಲಯ ನಿರ್ವಹಣೆ ಯಜಮಾನಿಕೆ ಹೊಂದಿರುವ ಇವರು ಆಡಳಿತ ಸಮಿತಿಯ ಸಹಕಾರದೊಂದಿಗೆ ದೇಗುಲ ಜೀರ್ಣೋದ್ಧಾರದೊಂದಿಗೆ ನೂತನ ನಿರ್ಮಾಣ ಕಾಮಗಾರಿ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಪಾಂಡವಪುರ ತಾಲೂಕಿಗೆ ಆಗಮಿಸಿದ್ದ ಇವರು ತಮ್ಮ ಕೆಲಸ ಕಾರ್ಯಗಳ ಮುಗಿಸಿ ಸ್ವಗ್ರಾಮಕ್ಕೆ ಮರಳುತ್ತಿದ್ದ ವೇಳೆ ಮಾರ್ಗ ಮಧ್ಯೆ ಕೆ.ಆರ್.ಸಾಗರದ ಕಡೆಯಿಂದ ಎದುರಿಗೆ ಬರುತ್ತಿದ್ದ ಖಾಲಿ ಟಿಪ್ಪರ್ ಲಾರಿಗೆ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಟಿಪ್ಪರ್ ಲಾರಿಯ ಮುಂಭಾಗಕ್ಕೆ ಕಾರು ಒಳನುಗ್ಗಿದೆ. ಕಾರಿನೊಳಗೆ ಸಿಲುಕಿದ್ದ ಚಂದ್ರಶೇಖರ್ ಹೊರಬರಲಾಗದೆ ಗಂಭೀರವಾಗಿ ಗಾಯಗೊಂಡಿದ್ದು, ಇತ್ತ ಇಂಜಿನಲ್ಲಿ ಕಾಣಿಸಿಕೊಂಡ ಬೆಂಕಿಯು ಬಹುಬೇಗ ವ್ಯಾಪಿಸಿ ಕಾರು ಮತ್ತು ಲಾರಿ ಎರಡು ವಾಹನಗಳು ಕ್ಷಣಾರ್ಧದಲ್ಲೇ ಹೊತ್ತಿ ಉರಿದಿದೆ. ಅಪಘಾತದ ಬಳಿಕ ಟಿಪ್ಪರ್ ಲಾರಿ ಚಾಲಕ ಮತ್ತು ಕ್ಲೀನರ್ ಸ್ಥಳದಿಂದ ಪರಾರಿಯಾಗಿದ್ದು, ಇದೇ ಮಾರ್ಗದಲ್ಲಿ ಆಗಮಿಸಿದ ಇತರವಾಹನಗಳ ಸವಾರರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದು ಗಸ್ತಿನಲ್ಲೇ ಇದ್ದ ಕೆ.ಆರ್.ಸಾಗರ ಪೊಲೀಸ್ ವೃತ್ತ ನೀರಿಕ್ಷಕ ವಿವೇಕಾನಂದ ಮತ್ತು ಟೌನ್ ಠಾಣೆ ಇನ್‌ಸ್ಪೆಕ್ಟರ್ ಬಿ.ಜಿ.ಕುಮಾರ್, ಸಿಬ್ಬಂದಿ ಸೇರಿದಂತೆ ಅಗ್ನೀಶಾಮಕ ಠಾಣಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಆಗಮಿಸಿದ್ದು, ಬೆಂಕಿ ನಂದಿಸಿದರು. ಕಾರಿನೊಳಗೆ ವ್ಯಕ್ತಿ ಸಿಲುಕಿರುವ ವಿಚಾರ ಯಾರಿಗೂ ತಿಳಿಯದಾಗಿದ್ದು, ದುರದೃಷ್ಟವಶತ್ ಬೆಂಕಿ ನಂದಿಸುವಷ್ಟರಲ್ಲಾಗಲೇ ಕಾರಿನೊಳಗಿದ್ದ ಚಂದ್ರಶೇಖರ್ ಸುಟ್ಟು ಕರಕಲಾಗಿದ್ದರು.

ಬಳಿಕ ತಡರಾತ್ರಿ ಸಾಕಷ್ಟು ಸುರಕ್ಷತ ಕ್ರಮಗಳನ್ನು ಅನುಸರಿಸಿದ ಅಗ್ನಿಶಾಮಕ ಠಾಣಾಧಿಕಾರಿ ಅಂಬರೀಶ್ ಉಪ್ಪಾರ್, ಪ್ರಮುಖ ಅಗ್ನೀಶಾಮಕ ತೇಜೋಮೂರ್ತಿ, ಸಿಬ್ಬಂದಿ ಶ್ರೀಶೈಲ, ರಾಜು ಕಾರಿನೊಳಗೆ ಸಿಲುಕಿದ್ದ ಶವವನ್ನು ಹೊರತೆಗೆದಿದ್ದು, ಪೊಲೀಸರು ಮೈಸೂರಿನ ಕೆ.ಆರ್.ಆಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದಾರೆ. ಮೃತ ಚಂದ್ರಶೇಖರ್‌ಗೆ ತಾಯಿ, ಪತ್ನಿ, ಇಬ್ಬರು ಇದ್ದಾರೆ. ಘಟನೆ ಸಂಬಂಧ ಶ್ರೀರಂಗಪಟ್ಟಣ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net