

ಅಳವಂಡಿ: ಹದಿಹರೆಯದ ಮಕ್ಕಳ ಅಭಿವೃದ್ಧಿಯಾಗಬೇಕಾದರೆ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸುವ ಕೆಲಸವಾಗಬೇಕಿದೆ ಎಂದು ಪಿಡಿಒ ಬಸವರಡ್ಡಿ ತವದಿ ತಿಳಿಸಿದರು.
ಸಮೀಪದ ಬೆಟಗೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಪಂ, ತಾಪಂ, ಸ್ಥಳೀಯ ಆಡಳಿತದಿಂದ ಆಯೋಜಿಸಿದ್ದ ಹದಿಹರೆಯದ ಮಕ್ಕಳ ಅಭಿವೃದ್ಧ ಕುರಿತ ಸಮಾಲೋಚನಾ ಸಭೆಯಲ್ಲಿ ಸೋಮವಾರ ಮಾತನಾಡಿದರು.
ಹದಿಹರೆಯದ ಮಕ್ಕಳ ಅಭಿವೃದ್ಧಿ ಸುಸ್ಥಿರ ಸಮಾಜದ ಸಂಕೇತ. ಅವರು ಎದುರಿಸುತ್ತಿರುವ ಸವಾಲುಗಳನ್ನು ಗುರುತಿಸಿ ಸೂಕ್ತ ರೀತಿಯಲ್ಲಿ ಬಗೆಹರಿಸುವುದು ಎಲ್ಲರ ಕರ್ತವ್ಯ. ಅಪೌಷ್ಟಿಕತೆ, ರಕ್ತಹೀನತೆ, ಬಾಲ್ಯ ವಿವಾಹ, ಬಾಲ ಕಾರ್ಮಿಕತೆ, ಕಿಶೋರಾವಸ್ಥೆ ಕಾರ್ಮಿಕತೆ, ಲೈಂಗಿಕ ದೌರ್ಜನ್ಯ, ಶಾಲೆ-ಕಾಲೇಜು ದಾಖಲಾತಿ, ಗೈರು ಹಾಜರಾತಿ, ಸೈಬರ್ ಅಪರಾಧ, ಮೊಬೈಲ್ ಬಳಕೆ, ಆರೋಗ್ಯ ಸಂಬಂಧಿ ಇತರ ಸಮಸ್ಯಗಳ ಬಗ್ಗೆ ಸೂಕ್ತ ಪರಿಹಾರ ಕೈಕೊಳ್ಳಬೇಕಾಗಿದೆ ಎಂದರು.
ಗ್ರಾಪಂ ಅಧ್ಯಕ್ಷ ದುರಗಪ್ಪ ಭಜಂತ್ರಿ, ಪ್ರಮುಖರಾದ ಸಿದ್ದಣ್ಣ ಸಜ್ಜನ, ನವೀನ ಮಾದಿನೂರ, ಶರಣಪ್ಪ ಮಡಿವಾಳರ, ಮಹೇಶ ಹ್ಯಾಟಿ, ಮುಖ್ಯಶಿಕ್ಷಕ ಪರಶುರಾಮ ಸಾಲ್ಮನಿ, ಎಸ್‌ಡಿಎಂಸಿಯವರು, ಗ್ರಾಮಸ್ಥರು ಇದ್ದರು.