

ರಾಮನಗರ: ಬೇಸಿಗೆ ಸಮೀಪಿಸುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಎಚ್ಚರ ವಹಿಸುವಂತೆ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಇಕ್ರಂ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ವೀಡಿಯೋ ಕಾನ್ಫರೆನ್ಸ್ ನಲ್ಲಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳ ಜತೆ ಕುಡಿಯುವ ನೀರು, ನರೇಗಾ, ಸ್ವಚ್ಛ ಭಾರತ್ ಮಿಷನ್, ವಸತಿ ಯೋಜನೆಗಳು ಸೇರಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಮಾರ್ಚ್, ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಗ್ರಾಮಗಳ ಪಟ್ಟಿ ಮಾಡಿ ತಾಂತ್ರಿಕ ಸಲಹೆ ಪಡೆದು ಕ್ರಿಯಾಯೋಜನೆ ತಯಾರಿಸಿ ತಾಪಂ ಇಒಗೆ ಸಲ್ಲಿಸುವಂತೆ ತಿಳಿಸಿದರು.
ಗ್ರಾಮಗಳಲ್ಲಿ ಕುಡಿಯುವ ನೀರಿನ ಘಟಕಗಳನ್ನು ಸುಸ್ಥಿತಿಯಲ್ಲಿಟ್ಟಿಕೊಳ್ಳಿ. ಜನರಿಗೆ ಹಾಗೂ ವಾಟರ್‌ಮ್ಯಾನ್‌ಗಳಿಗೆ ನೀರಿನ ಮಿತ ಬಳಕೆ ಹಾಗೂ ನೀರನ್ನು ವ್ಯರ್ಥ ಮಾಡದಂತೆ ತರಬೇತಿ ನೀಡಿ. ನೀರಿನ ಘಗಕ ಮತ್ತು ದನಕರುಗಳು ಕುಡಿಯುವ ನೀರಿನ ತೊಟ್ಟಿಗಳನ್ನು 15 ದಿನಗಳಿಗೊಮ್ಮೆ ಶುಚಿಗೊಳಿಸಬೇಕು. ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ 24 ಗಂಟೆಯೊಳಗೆ ಕ್ರಮ ಕೈಗೊಳ್ಳಲು ಬೇಕಿರುವ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದರು.
ಶುಚಿತ್ವ ಕಾಪಾಡುವುದು ಅಗತ್ಯ: ಸಾಂಕ್ರಾಮಿಕ ರೋಗಗಳು ಹರಡದಂತೆ ಗ್ರಾಮಗಳಲ್ಲಿ ಶುಚಿತ್ವ ಕಾಪಾಡುವುದು ಅತ್ಯಂತ ಮುಖ್ಯವಾಗಿದೆ. ನೀರಿನ ಘಟಕಗಳ ಬಳಿ ಕೊಳಚೆ ನೀರು ನಿಲ್ಲದಂತೆ, ವಿತರಣಾ ಕೊಳವೆ ಹಾಗೂ ಏರು ಕೊಳವೆ ಮಾರ್ಗಗಳಲ್ಲಿ ಕಲುಷಿತ ನೀರು ಪೈಪ್ ಒಳಗೆ ಹೋಗದಂತೆ ಎಚ್ಚರಿಕೆ ವಹಿಸಿ. ಚರಂಡಿಗಳಲ್ಲಿರುವ ತ್ಯಾಜ್ಯಗಳನ್ನು ತೆರವುಗೊಳಿಸಿ, ಕೊಳಚೆ ನೀರು ಸರಾಗವಾಗಿ ಹೋಗುವಂತೆ ಕ್ರಮವಹಿಸಿ ಎಂದು ಇಕ್ರಂ ಸೂಚಿಸಿದರು. ಕುಡಿಯುವ ನೀರನ್ನು ಕುದಿಸಿ ಆರಿಸಿ ಕುಡಿಯುವಂತೆ ಗ್ರಾಮಸ್ಥರಿಗೆ ಟಾಂಟಾಂ, ಕರಪತ್ರದ ಮೂಲಕ ನೀಡಿ ಅರಿವು ಮೂಡಿಸಿ. ಗ್ರಾಮ ಪಂಚಾಯಿತಿಗಳಲ್ಲಿ ದೂರು ಸ್ವೀಕೃತಿ ಪುಸ್ತಕವನ್ನು ನಿರ್ವಹಿಸಿ. ಬರುವ ದೂರುಗಳನ್ನು ಶೀಘ್ರವಾಗಿ ಪರಿಹರಿಸಲು ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಉಮೇಶ್, ಯೋಜನಾ ನಿರ್ದೇಶಕ ನಾಗರಾಜ್, ಮುಖ್ಯ ಯೋಜನಾಧಿಕಾರಿ ರಾಜು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಚಂದ್ರಹಾಸ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ಲಕ್ಷ್ಮಿ ಪ್ರಸನ್ನ ಉಪಸ್ಥಿತರಿದ್ದರು. ವಿಡಿಯೋ ಸಂವಾದದಲ್ಲಿ ತಾಪಂ ಇಒಗಳಾದ ಚಂದ್ರ, ಪ್ರದೀಪ್, ಶಿವರಾಮು, ಶಿವಕುಮಾರ್ ಭಾಗವಹಿಸಿದ್ದರು.
ಬದಲಿ ಮೋಟರ್ ಉಪಯೋಗಿಸಿ: ಅನಿವಾರ್ಯ ಸಂದರ್ಭಗಳಲ್ಲಿ ತಹಸೀಲ್ದಾರ್, ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರ ಗಮನಕ್ಕೆ ತಂದು ಸಮಿತಿಯ ಅನುಮೋದನೆ ಪಡೆದು ನೀರಿನ ಟ್ಯಾಂಕರ್‌ಗಳ ವ್ಯವಸ್ಥೆ ಮಾಡಿಕೊಳ್ಳುವುದು. ಗ್ರಾಮ ಪಂಚಾಯಿತಿಗಳಲ್ಲಿ ಹೆಚ್ಚುವರಿಯಾಗಿ ಒಂದು ಅಥವಾ ಎರಡು ಮೋಟರ್‌ಗಳ ವ್ಯವಸ್ಥೆ ಮಾಡಿಕೊಳ್ಳುವುದು. ಮೋಟರ್‌ಗಳು ಕಾರ್ಯನಿರ್ವಹಣೆಯಲ್ಲಿ ತೊಂದರೆಯಾದಲ್ಲಿ ಬದಲಿ ಮೋಟರ್ ಉಪಯೋಗಿಸಿಕೊಳ್ಳಬಹುದು ಎಂದು ಜಿಪಂ ಸಿಇಒ ತಿಳಿಸಿದರು.