

ಮದ್ದೂರು: ತಾಲೂಕಿನ ಆತಗೂರು ಹೋಬಳಿಯ ಕುರಿದೊಡ್ಡಿ ಗ್ರಾಮ ತನ್ನದೆಯಾದ ಹಲವಾರು ವೈಶಿಷ್ಟ್ಯವನ್ನು ಹೊಂದುವ ಮೂಲಕ ಗಮನ ಸೆಳೆದಿದೆ.
ಕುರಿಗಳನ್ನು ಹೆಚ್ಚಾಗಿ ಕೂಡಿಹಾಕುವ ಸ್ಥಳವಾಗಿದ್ದರಿಂದ ಗ್ರಾಮಕ್ಕೆ ಕುರಿದೊಡ್ಡಿ ಎಂಬ ಹೆಸರು ಬಂತು ಎಂದು ಹೇಳಲಾಗುತ್ತಿದೆ. ಗ್ರಾಮದಲ್ಲಿ ಒಕ್ಕಲಿಗರು, ರಾಜಭೋವಿ ಹಾಗೂ ಮಡಿವಾಳ ಜನಾಂಗದವರು ವಾಸ ಮಾಡುತ್ತಿದ್ದು, ಎಲ್ಲರೂ ಶಾಂತಿ, ಸೌಹಾರ್ದತೆ ಹಾಗೂ ಅನ್ಯೋನ್ಯವಾಗಿ ಜೀವನ ಮಾಡುತ್ತಿದ್ದಾರೆ.
ಗ್ರಾಮ ಮಳೆಯಾಶ್ರಿತ ಪ್ರದೇಶವಾದ ಕಾರಣ ಒಕ್ಕಲಿಗರು ರಾಗಿ, ಹುರುಳಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಅದರಲ್ಲೂ ಹೈನುಗಾರಿಕೆಯನ್ನು ಹೆಚ್ಚಾಗಿ ಅವಲಂಬನೆ ಮಾಡಿಕೊಂಡಿದ್ದು, ಆದಾಯ ಮೂಲವಾಗಿದೆ. ಪ್ರತಿ ಮನೆಯಲ್ಲೂ ಹಸುಗಳನ್ನು ಸಾಕಿರುವುದು ವಿಶೇಷವಾಗಿದೆ.
ರಾಜಭೋವಿ ಜನಾಂಗದವರು ಗಾರೆ ಹಾಗೂ ಕಲ್ಲು ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದು, ವಿಶೇಷವೆಂದರೆ ಗ್ರಾಮದಲ್ಲಿರುವ ಬಹುತೇಕ ದೇವಾಲಯಗಳನ್ನು ಇವರೇ ನಿರ್ಮಾಣ ಮಾಡಿದ್ದಾರೆ. ಬೇರೆ ಕಡೆಗಳಲ್ಲೂ ಸುಂದರವಾದ ದೇವಾಲಯಗಳ ಕಟ್ಟಡ ನಿರ್ಮಾಣ ಮಾಡಿದ್ದು, ಇದೇ ಇವರ ಕಾಯಕವಾಗಿದೆ. ಇನ್ನೂ ಮಡಿವಾಳ ಜನಾಂಗದವರು ಸಣ್ಣ, ಪುಟ್ಟ ಉದ್ಯೋಗ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಒಟ್ಟಾರೆಯಾಗಿ ಎಲ್ಲರೂ ಸುಖ, ಶಾಂತಿ ಹಾಗೂ ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದಾರೆ.
ಗ್ರಾಮದಲ್ಲಿ ಹನುಮಂತರಾಯ, ಶ್ರೀ ಪಟ್ಟಲದಮ್ಮ, ಶ್ರೀ ರಾಮಮಂದಿರ, ಶನೈಶ್ಚರ ಸ್ವಾಮಿ, ಮುನೇಶ್ವರ ಸ್ವಾಮಿ ಹಾಗೂ ಎಲ್ಲಮ್ಮ ದೇವಸ್ಥಾನಗಳಿದ್ದು, ಇದರಲ್ಲಿ ಹನುಮಂತರಾಯ, ಶನೈಶ್ಚರ ಸ್ವಾಮಿ, ಶ್ರೀ ರಾಮಮಂದಿರ ಪುರಾತನ ದೇವಸ್ಥಾನಗಳಾಗಿವೆ.
ಮಾರ್ಚ್‌ನಲ್ಲಿ ಶನೈಶ್ಚರ ಸ್ವಾಮಿ ಕರಗ ಮಹೋತ್ಸವವು ವಿಜೃಂಭಣೆಯಿಂದ ನಡೆಯುತ್ತದೆ. ಕರಗ ಮಹೋತ್ಸವಕ್ಕೆ ಅಕ್ಕ ಪಕ್ಕದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ದೇವಾಲಯಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ ಮತ್ತು ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗುತ್ತದೆ. ಜತೆಗೆ, ಕದಲೂರು ಶ್ರೀ ಪಟ್ಟಲದಮ್ಮ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತದೆ. ಈ ಸಂದರ್ಭದಲ್ಲಿ ಕರಗ ಮಹೋತ್ಸವ, ಕೊಂಡ ಬಂಡಿ, ಕೊಂಡೋತ್ಸವ, ಸಿಡಿ ಉತ್ಸವ ಸೇರಿದಂತೆ ಇನ್ನಿತರರ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತದೆ. ಈ ಹಬ್ಬವನ್ನು ಕುರಿದೊಡ್ಡಿ ಹಾಗೂ ಕದಲೂರು ಗ್ರಾಮಸ್ಥರು ಜತೆಗೂಡಿ ಸೋದರತ್ವದಿಂದ ಆಚರಿಸುತ್ತಾರೆ.