ಜಿಲ್ಲಾಡಳಿತಕ್ಕೆ ತಲೆನೋವಾದ ಗ್ರಾಮಾಯಣ; ಗ್ರಾಪಂ ಸದಸ್ಯ ಸ್ಥಾನಗಳು ಹರಾಜು ಮೂಲಕ ಆಯ್ಕೆ; ಅಧಿಕಾರಿಗಳ ಜತೆ ಡಿಸಿ ಸಭೆ

42400d3f-ddf7-4bf7-afa7-69107300a7c6
Published on

ತುಮಕೂರು: ಜಿಲ್ಲೆಯಲ್ಲಿ ಗ್ರಾಮಪಂಚಾಯಿತಿ ಸದಸ್ಯ ಸ್ಥಾನಗಳು ಹರಾಜು ಮೂಲಕ ಆಯ್ಕೆಯಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವು ತಂದಿದೆ.

ಈ ಹಿನ್ನೆಲೆಯಲ್ಲಿ ಪದೇಪದೆ ಪತ್ರಿಕೆಗಳ ಮೂಲಕ ಪ್ರಕಟಣೆ ನೀಡುತ್ತಿರುವ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಪ್ರಕರಣಗಳ ಬಗ್ಗೆ ಪರಿಶೀಲಿಸಿ ಸಂಬಂಧಪಟ್ಟವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಎಸಿ ಹಾಗೂ ತಹಸೀಲ್ದಾರ್‌ಗಳಿಗೆ ಸೂಚಿಸಿದ್ದಾರೆ. ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಎಸಿ ಹಾಗೂ ತಹಸೀಲ್ದಾರ್ ಮತ್ತು ನೋಡಲ್ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದದಲ್ಲಿ ಮಾತನಾಡಿದರು.

ಗಾಮ ಪಂ ಚಾಯಿತಿ ಸದಸ್ಯರ ಸ್ಥಾನಗಳಿಗೆ ಹರಾಜು, ಅವಿರೋಧ ಆಯ್ಕೆ ಯಾಗುವುದಕ್ಕೆ ಒಪ್ಪಂದ ಆಗಿರುವುದರ ಬಗ್ಗೆ ಮಾಧ್ಯಮಗಳಲ್ಲಿ ಹಾಗೂ ದೂರುಗಳು ಬಂದಲ್ಲಿ ಕೂಡಲೇ ಪರಿಶೀಲಿಸಿ, ಮೇಲ್ನೋಟಕ್ಕೆ ನಿಜವೆಂದು ಕಂಡು ಬಂದರೆ ಅಂತಹವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ನಿಯಮಾನುಸಾರ ಕ್ರಮಕೈಗೊಳ್ಳಲು ಸಬ್ ಡಿವಿಷನ್ ಮ್ಯಾಜಿಸ್ಟ್ರೇಟ್ ಅವರಿಗೆ ನಿರ್ದೇಶನ ನೀಡಲಾಗಿದೆ. ಅಲ್ಲದೆ ಪೊಲೀಸ್ ಇಲಾಖೆಗೂ ಸೂಚಿಸಲಾಗಿದೆ ಎಂದರು.

ಹರಾಜು ಪ್ರಕ್ರಿಯೆ ನಡೆಯುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ, ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಿ, ತುರುವೇಕೆರೆ ತಾಲೂಕಿನ ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸಿ ಸಂಬಂಧಪಟ್ಟವರ ಮೇಲೆ ಎಫ್‌ಐಆರ್ ದಾಖಲಿಸಿ ಎಂದು ತಹಸೀಲ್ದಾರ್ ನಯೀಂ ಉನ್ನಿಸಾ ಅವರಿಗೆ ಸೂಚಿಸಿದರು.

ಗುಬ್ಬಿ ತಾಲೂಕು ಮಂಚಲದೊರೆ, ಅಂಕಸಂದ್ರದಲ್ಲಿ ನಾಮಪತ್ರ ಸಲ್ಲಿಕೆಯೇ ಆಗಲಿಲ್ಲ. ಈಗ ಶಿರಾ ತಾಲೂಕು ಗೋಪಾಲದೇವರಹಳ್ಳಿ ಸೇರಿ ಜಿಲ್ಲೆಯ ಕೆಲವು ಕಡೆ ನಾಮಪತ್ರ ಸಲ್ಲಿಕೆ ಮಾಡುತ್ತಿಲ್ಲ. ಅಂತಹ ಸ್ಥಳಗಳಿಗೆ ಎಸಿ ಹಾಗೂ ತಹಸೀಲ್ದಾರ್ ತೆರಳಿ ಸ್ಥಳೀಯರ ಮನವೊಲಿಕೆಗೆ ಮುಂದಾಗಬೇಕು ಎಂದರು.ತುಮಕೂರು ಉಪವಿಭಾಗಾ ಧಿಕಾರಿ ಅಜಯ್, ತಹಸೀಲ್ದಾರ್ ಮೋಹನ್ ಕುಮಾರ್, ಚುನಾವಣಾ ಶಾಖೆಯ ನಾಗಭೂಷಣ್, ರವಿ ಮತ್ತಿತರರು ಇದ್ದರು.

ಎಚ್.ಮೇಲನಹಳ್ಳಿ ಸದಸ್ಯ ಸ್ಥಾನ 2.15ಲಕ್ಷ ರೂಪಾಯಿಗೆ ಹರಾಜು ?: ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿ ಮೇಲನಹಳ್ಳಿಯಲ್ಲಿ ಗ್ರಾಪಂ ಸದಸ್ಯ ಸ್ಥಾನ ಹರಾಜು ಮೂಲಕ ನಡೆದಿದ್ದು, ಅವಿರೋಧ ಆಯ್ಕೆಗೆ ವೇದಿಕೆ ಸಿದ್ಧವಾಗಿದೆ. ಗಾಣಧಾಳು ಗ್ರಾಪಂ ವ್ಯಾಪ್ತಿಯ ಮೇಲನಹಳ್ಳಿಯಲ್ಲಿ ಎಸ್‌ಸಿ ಮಹಿಳೆಗೆ ಮೀಸಲಿರುವ ಸದಸ್ಯ ಸ್ಥಾನಕ್ಕೆ ಹರಾಜು ನಡೆದಿದ್ದು ಬರೋಬ್ಬರಿ 2.15ಲಕ್ಷ ರೂ.ಗೆ ಬೀಕರಿಯಾಗಿದೆ ಎನ್ನಲಾಗಿದೆ.

ನಿವೃತ್ತ ಅಧಿಕಾರಿಯೊಬ್ಬರ ಸಮ್ಮುಖದಲ್ಲಿಯೇ ಹರಾಜು ನಡೆದಿದ್ದು, ಗ್ರಾಮದ ದುರ್ಗಮ್ಮ ದೇವಾಲಯದ ಜೀರ್ಣೋದ್ಧಾರಕ್ಕೆ ಹರಾಜು ಮೂಲಕ ಬಂದಿರುವ ಹಣ ಬಳಸಿಕೊಳ್ಳಲು ತೀರ್ಮಾನಿಸಿರುವುದು ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆ ಇದ್ದವರಿಗೆ ನಿರಾಸೆಯಾಗಿದೆ. ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಸ್ಥಾನವೇ ಲಕ್ಷ ಲಕ್ಷ ರೂ.ಗೆ ಹರಾಜು ನಡೆದಿರುವುದು ಆಶ್ಚರ್ಯ ಮೂಡಿಸಿದ್ದು ತಾಲೂಕು ಆಡಳಿತ ಕಣ್ಮುಚ್ಚಿ ಕುಳಿತಿದೆ.ಗ್ರಾಮದಲ್ಲಿ ಮೂರು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು ಎಸ್‌ಸಿ ಮಹಿಳೆ ಮೀಸಲು ಸ್ಥಾನ ಅವಿರೋಧ ಆಯ್ಕೆಯಾಗುವುದು ಖಚಿತವಾಗಿದೆ. ಹಾಗೆಯೇ ಇನ್ನುಳಿದ ಸಾಮಾನ್ಯ ಹಾಗೂ ಪರಿಶಿಷ್ಟ ಪಂಗಡ ಮಹಿಳೆಯ ಆಯ್ಕೆಯನ್ನು ಅವಿರೋಧವಾಗಿ ನಡೆಸುವ ಹುನ್ನಾರ ಕೂಡ ನಡೆದಿದೆ ಎನ್ನಲಾಗಿದ್ದು ಗ್ರಾಮದ ಪ್ರಜ್ಞಾವಂತರು ವಿರೋಧ ವ್ಯಕ್ತಪಡಿಸಿರುವುದು ಕುತೂಹಲ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net