ಗ್ರಾಮಾಂತರದಲ್ಲಿ ರಂಗೇರಿದ ಗ್ರಾಮಾಯಣ ; ಬಿಜೆಪಿ, ಜೆಡಿಎಸ್ ನಡುವೆ ಶಕ್ತಿ ವೃದ್ಧಿಸಿಕೊಳ್ಳಲು ಕಾಂಗ್ರೆಸ್ ಕಸರತ್ತು

09Tmk_Tmk_Gramayana
Published on

ತುಮಕೂರು: ತುಮಕೂರು ತಾಲೂಕಿನ ಗ್ರಾಮಾಂತರ ಕ್ಷೇತ್ರದಲ್ಲಿ ಗ್ರಾಪಂ ಚುನಾವಣೆ ರಂಗೇರಿದ್ದು, ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಉತ್ಸಾಹದಿಂದ ಓಡಾಟ ಆರಂಭಿಸಿದ್ದಾರೆ.

ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್‌ಗೌಡ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಶಕ್ತಿ ವೃದ್ಧಿಸಿಕೊಳ್ಳಲು ಚುನಾವಣೆಯನ್ನು ವೇದಿಕೆ ಮಾಡಿಕೊಂಡಿದ್ದು, ಪ್ರತಿ ಗ್ರಾಮದಲ್ಲಿಯೂ ಅಭ್ಯರ್ಥಿಗಳನ್ನು ಅವರೇ ಆಯ್ಕೆ ಮಾಡುತ್ತಿರುವುದು ಆಶ್ಚರ್ಯ ಮೂಡಿಸಿದೆ. ಬಿಜೆಪಿ ಏಟಿಗೆ ಎದಿರೇಟು ನೀಡಲು ಜೆಡಿಎಸ್ ಶಾಸಕ ಡಿ.ಸಿ.ಗೌರಿಶಂಕರ್ ಕೂಡ ಚುನಾವಣೆಗೆ ಅಣಿಗೊಳಿಸುತ್ತಿದ್ದಾರೆ.

ಇದೇ ಮೊದಲ ಬಾರಿಗೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪ್ರಮುಖ ನಾಯಕರು ನಾಗವಲ್ಲಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಸಾಧ್ಯವಾದಷ್ಟು ಹೆಚ್ಚು ಸದಸ್ಯರನ್ನು ಗೆಲ್ಲಿಸಿಕೊಂಡು ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷ ಪ್ರಬಲ ಸ್ಪರ್ಧೆ ನೀಡುವಂತೆ ಮಾಡುವ ಸಂಕಲ್ಪ ತೊಟ್ಟಿದ್ದಾರೆ. ಈ ಸಭೆಯಲ್ಲಿ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಮಾಜಿ ಸಂಸದ ಮುದ್ದಹನುಮೇಗೌಡ, ಮಾಜಿ ಶಾಸಕ ಕೆ.ಎನ್.ರಾಜಣ್ಣ ಹಾಜರಿದ್ದು ಸಲಹೆ ನೀಡಿರುವುದು ವಿಶೇಷ ಎನಿಸಿದೆ.

ಮುದ್ದಹನುಮೇಗೌಡ ಕುಣಿಗಲ್ ಅಥವಾ ತುಮಕೂರು ಗ್ರಾಮೀಣ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹ ಹರಿದಾಡುತ್ತಿರುವ ನಡುವೆಯೇ ಹೆಬ್ಬೂರು ನಿವಾಸದಿಂದಲೇ ಕಾರ್ಯಕರ್ತರ ನಿರಂತರ ಸಭೆ ನಡೆಸುತ್ತಿರುವುದು ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಕುತೂಹಲ ಹೆಚ್ಚಿಸಿದೆ.

ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ನಡುವೆಯೇ ನೇರ ಸ್ಪರ್ಧೆ ಕಾಣಿಸಿದೆಯಾದರೂ ಕಾಂಗ್ರೆಸ್ ಎರಡೂ ಪಕ್ಷಗಳ ಅಭ್ಯರ್ಥಿಗಳ ಸೋಲು-ಗೆಲುವು ನಿರ್ಧರಿಸುವ ಶಕ್ತಿ ಹೊಂದಿದೆ ಎಂದು ಅಂದಾಜಿಸಲಾಗುತ್ತಿದೆ. ಈ ನಡುವೆ ತಾಪಂ, ಜಿಪಂ ಚುನಾವಣೆ ಪೂರ್ವಸಿದ್ಧತೆ ಎಂಬಂತೆ ಗ್ರಾಪಂ ಚುನಾವಣೆ ನಡೆಯುತ್ತಿದೆ.

ತುಮಕೂರಿನ ಸುತ್ತಮುತ್ತಲೇ ಇರುವ ಗ್ರಾಮಗಳಾಗಿದ್ದು ರಾಜಕೀಯ ಆಕಾಂಕ್ಷಿಗಳು ಹಣ ಬಲ, ತೋಳ್ಬಲಗಳಲ್ಲಿ ಸಮರ್ಥರಾಗಿರುವುದು ಇತರ ತಾಲೂಕುಗಳಿಗೆ ಹೋಲಿಸಿದರೆ ಕಣ ರಂಗೇರುವಂತೆ ಮಾಡಿದೆ. ಶಾಸಕರು, ಮಾಜಿ ಶಾಸಕರು ಸಂಪೂರ್ಣವಾಗಿ ತೊಡಗಿಕೊಂಡಿರುವುದು ಕ್ಷೇತ್ರದ ಮತ್ತೊಂದು ವಿಶೇಷ ಎನಿಸಿದೆ.

ತಾಲೂಕಿನ 41 ಗ್ರಾಪಂಗಳ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, 365 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 1500ಕ್ಕೂ ಹೆಚ್ಚು ಮತದಾರರಿರುವ 50 ಮತಗಟ್ಟೆಗಳಿದ್ದು ಹೆಬ್ಬೂರು, ಬೆಳ್ಳಾವಿ, ಊರ್ಡಿಗೆರೆ, ಹೆಗ್ಗೆರೆ, ಬೆಳಗುಂಬ ಮತ್ತಿತರ ಗ್ರಾಪಂ ಸದಸ್ಯ ಸ್ಥಾನಗಳಿಗೆ ಇನ್ನಿಲ್ಲದ ಬೇಡಿಕೆಯಿದೆ.

ತುಮಕೂರು ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಇತಿಹಾಸವಿದೆ. ಗತ ವೈಭವ ಮರುಸ್ಥಾಪಿಸುವ ನಿಟ್ಟಿನಲ್ಲಿ ಗ್ರಾಪಂ ಚುನಾವಣೆಯನ್ನೇ ವೇದಿಕೆಯಾಗಿ ಬಳಸಿಕೊಳ್ಳಲಿದ್ದೇವೆ. ಎಲ್ಲೆಡೆ ಕಾರ್ಯಕರ್ತರು ಸ್ಪರ್ಧೆಗೆ ಸಿದ್ಧರಾಗಿದ್ದಾರೆ. ನಮ್ಮ ಸ್ಥಾನಗಳನ್ನು ವೃದ್ಧಿಸಿಕೊಳ್ಳುವುದೇ ಗುರಿ. ಎಸ್.ಪಿ.ಮುದ್ದಹನುಮೇಗೌಡ, ಮಾಜಿ ಸಂಸದ ಎಲ್ಲ ಗ್ರಾಮಗಳಲ್ಲಿ ಜೆಡಿಎಸ್ ಬಲಿಷ್ಠವಾಗಿದ್ದು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಕಾರ್ಯತಂತ್ರ ರೂಪಿಸಿದ್ದೇವೆ. ಸ್ಥಳೀಯ ಮುಖಂಡರು ಸಮರ್ಥ ಅಭ್ಯರ್ಥಿಗಳನ್ನು ಒಮ್ಮತದಿಂದ ಆಯ್ಕೆ ಮಾಡಿದ್ದು ಚುನಾವಣೆಯಲ್ಲಿ ಹೆಚ್ಚು ಸ್ಥಾನ ಪಡೆಯುವ ಮೂಲಕ ಬಹುತೇಕ ಗ್ರಾಪಂ ಚುಕ್ಕಾಣಿ ನಮ್ಮದೇ ಆಗಿರಲಿದೆ. ಡಿ.ಸಿ.ಗೌರಿಶಂಕರ್ ಶಾಸಕ ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಪರ ವಾತಾವರಣವಿದೆ. ಎಲ್ಲ ಗ್ರಾಮಗಳಲ್ಲಿ ಸಭೆ ನಡೆಸಿ ಗೆಲ್ಲುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಬಿಜೆಪಿ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕೊಡುಗೆ ಕಾರಣಕ್ಕೆ ಜನರು ನಮ್ಮ ಅಭ್ಯರ್ಥಿಗಳಿಗೆ ಮತ ನೀಡಿ ಗೆಲುವು ನೀಡಲಿದ್ದಾರೆ. ಬಿ.ಸುರೇಶ್‌ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net