

ಕೋಲಾರ: ಜಿಲ್ಲೆಯ ಮುಳಬಾಗಿಲು, ಬಂಗಾರಪೇಟೆ ಹಾಗೂ ಕೆಜಿಎಫ್ ತಾಲೂಕುಗಳ 67 ಗ್ರಾಪಂಗಳಿಗೆ ಎರಡನೇ ಹಂತದಲ್ಲಿ ಭಾನುವಾರ ಚುನಾವಣೆ ನಡೆಯುವುದರೊಂದಿಗೆ ಆರು ತಾಲೂಕುಗಳ 152 ಗ್ರಾಪಂಗಳ ಚುನಾವಣೆ ಸಂಪನ್ನಗೊಂಡಿದೆ.
ಒಟ್ಟು 2722 ಸದಸ್ಯರ ಆಯ್ಕೆಗೆ ನಿಗದಿಯಾಗಿದ್ದ ಚುನಾವಣೆಯಲ್ಲಿ 224 ಮಂದಿ ಅವಿರೋಧ ಆಯ್ಕೆಯಾಗಿದ್ದು, 2494 ಸದಸ್ಯರ ಚುನಾವಣೆಗೆ ಎರಡು ಹಂತದ ಚುನಾವಣೆ ನಡೆದಿದೆ. ಒಟ್ಟು 6545 ಅಭ್ಯರ್ಥಿಗಳ ಹಣೆಬರಹ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಡಿ.30ರಂದು ಎಣಿಕೆ ಕಾರ್ಯ ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ.
ಮಾಲೂರು ತಾಲೂಕಿನ ಅಂಬ್ಲಿಕಲ್ ಗ್ರಾಪಂನ ಕಂಬೀಪುರದಲ್ಲಿ ಮೂಲಸೌಕರ್ಯ ಕಲ್ಪಿಸದಿರುವ ಕ್ರಮ ಖಂಡಿಸಿ ಗ್ರಾಮಸ್ಥರು ಚುನಾವಣೆಯನ್ನು ಬಹಿಷ್ಕರಿಸಿದ್ದರು. ಮುಳಬಾಗಿಲಿನ ಉತ್ತನೂರು ಗ್ರಾಪಂನ ಮಲ್ಲಸಂದ್ರ ಏಕ ಸದಸ್ಯ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದ ಎಲ್ಲ ಅಭ್ಯರ್ಥಿಗಳ ಉಮೇದುವಾರಿಕೆ ತಿರಸ್ಕರಿಸಿದ್ದರಿಂದ ಈ ಕ್ಷೇತ್ರಕ್ಕೆ ಹೊಸದಾಗಿ ಚುನಾವಣೆ ನಡೆಯಬೇಕಿದೆ.
2ನೇ ಹಂತದ ಮತದಾನ: ಭಾನುವಾರ ನಡೆದ ಎರಡನೇ ಹಂತದ ಮತದಾನದಲ್ಲಿ ಬಂಗಾರಪೇಟೆಯ ಕಾರಹಳ್ಳಿ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಹೆಣ್ಣು ಮಕ್ಕಳು ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸಿದರು. ಇದೇ ತಾಲೂಕಿನ ಮರಗಲ್ ಕ್ಷೇತ್ರದಲ್ಲಿ 15 ಅಭ್ಯರ್ಥಿಗಳು ಕಣದಲ್ಲಿದ್ದುದುದರಿಂದ ಬೆಂಬಲಿಗರ ಸದ್ದು ಜೋರಾಗಿತ್ತು. ಅಲ್ಲಲ್ಲಿ ಗುಂಪು ಗುಂಪಾಗಿ ಸೇರಿದ್ದ ಅಭ್ಯರ್ಥಿಗಳ ಬೆಂಬಲಿಗರು ಮತದಾರರನ್ನು ಓಲೈಸಿಕೊಳ್ಳಲು ಗಿಫ್ಟ್ ಕೂಪನ್ ಹಾಗೂ ನಗದು ಹಂಚುತ್ತಿದ್ದ ಬಗ್ಗೆ ಮಾತು ಕೇಳಿಬಂದವು. ತಿಮ್ಮಾಪುರದಲ್ಲಿ ಸದ್ದುಗದ್ದಲವಿಲ್ಲದೆ ಮತದಾರರು ತಮ್ಮ ಪಾಡಿಗೆ ತಾವು ಹಕ್ಕು ಚಲಾಯಿಸುತ್ತಿದ್ದುದು ಕಂಡುಬಂತು.
ತಡವಾಗಿ ಬಂದ ಮತದಾರರು: ಮಜರಾ ನಾರಾಯಣಪುರ ಗ್ರಾಮದಲ್ಲಿ ಬಹಳ ದಿನಗಳ ನಂತರ ಬೆಳಗ್ಗೆ ಕುಡಿಯುವ ನೀರು ಬಿಟ್ಟಿದ್ದರಿಂದ ಗ್ರಾಮಸ್ಥರು ಬೆಳಗ್ಗೆ ನೀರು ಹಿಡಿದುಕೊಳ್ಳುವುದರಲ್ಲಿ ನಿರತರಾಗಿದ್ದರಿಂದ ಗ್ರಾಮಸ್ಥರು ತಡವಾಗಿ ಹಕ್ಕು ಚಲಾಯಿಸಲು ಆಗಮಿಸಿದರು.
ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭಗೊಂಡಿತ್ತು. 9 ಗಂಟೆಯವರೆಗೆ ಶೇ 9ರಷ್ಟು ಮಾತ್ರ ಮತ ಚಲಾವಣೆಗೊಂಡು ಮಂದಗತಿಯಲ್ಲಿ ಸಾಗುತ್ತಿದ್ದ ಮತದಾನ 11ರ ವೇಳೆಗೆ ಚುರುಕುಗೊಂಡು ಶೇ. 23.62 ಆಗಿತ್ತು. ಮಧ್ಯಾಹ್ನ 1 ಗಂಟೆ ವೇಳೆಗೆ ಮತದಾನದ ಪ್ರಮಾಣ ಶೇ. 45.69 ಆಗಿತ್ತು. ಮಧ್ಯಾಹ್ನದ ನಂತರ ಬಿರುಸುಗೊಂಡು 3 ಗಂಟೆ ವೇಳೆಗೆ ಶೇ.67.78 ಆಗಿತ್ತು.
ಪ್ರಾಥಮಿಕ ಮಾಹಿತಿ ಪ್ರಕಾರ ಕೆಜಿಎಫ್‌ನಲ್ಲಿ ಶೇ. 85.69, ಬಂಗಾರಪೇಟೆಯಲ್ಲಿ ಶೇ 85.38 ಹಾಗೂ ಮುಳಬಾಗಿಲಿನಲ್ಲಿ ಶೇ.88.47 ಸೇರಿ ಸಂಜೆ 5 ಗಂಟೆಯ ವೇಳೆಗೆ ಶೇ. 86.51 ಮತದಾನ ಆಗಿದ್ದು, ಜಿಲ್ಲಾಡಳಿತಕ್ಕೆ ನಿಖರ ಮಾಹಿತಿ ಲಭ್ಯವಾಗುವ ವೇಳೆಗೆ ಮತದಾನದ ಪ್ರಮಾಣದಲ್ಲಿ ಇನ್ನಷ್ಟು ಹೆಚ್ಚಳವಾಗಲಿದೆ.