ಹೊಯ್ಸಳಕಟ್ಟೆಯಲ್ಲಿ ಜಿಲ್ಲಾಡಳಿತದಿಂದ ಗ್ರಾಮವಾಸ್ತವ್ಯ

DSC_0436
Published on

ಹೊಯ್ಸಳಕಟ್ಟೆ : ಚಿಕ್ಕನಾಯಕನಹಳ್ಳಿ ತಾಲೂಕು ಕೇಂದ್ರದಿಂದ ದೂರ ಇರುವ ದಸೂಡಿ ಭಾಗದ ಜನತೆಗೆ ತಾಲೂಕು ಕಚೇರಿ ಕೆಲಸಗಳು ಸುಲಭವಾಗುವ ದೃಷ್ಟಿಯಿಂದ ಜಿಲ್ಲಾಡಳಿತ ಗ್ರಾಮವಾಸ್ತವ್ಯ ಹಮ್ಮಿಕೊಂಡಿದೆ. ಜಿಲ್ಲಾ ಹಾಗೂ ತಾಲೂಕು ಅಧಿಕಾರಿಗಳು ಸ್ಥಳದಲ್ಲಿದ್ದು, ಜನರ ಸಮಸ್ಯೆಗಳಿಗೆ ಪರಿಹಾರ ನೀಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಚಿಕ್ಕನಾಯಕನಹಳ್ಳಿ ತಾಲೂಕು ದಸೂಡಿಯಲ್ಲಿ ಜಿಲ್ಲಾಡಳಿತ ಬುಧವಾರ ಜಿಲ್ಲಾಧಿಕಾರಿ ಗ್ರಾಮ ಭೇಟಿ ಮತ್ತು ಜನಸಂಪರ್ಕ ಸಭೆಗೆ ಚಾಲನೆ ನೀಡಿ ಮಾತನಾಡಿದರು. ಬಗರ್‌ಹುಕುಂ ಅರ್ಜಿಗಳು ಹೆಚ್ಚಾಗಿ ಬಂದಿರುವುದರಿಂದ 29ರಂದು ಬಗರ್ ಹುಕುಂ ಕಮಿಟಿಯ ಇನ್ನೊಂದು ಸಭೆ ನಡೆಸಲಾಗುತ್ತಿದ್ದು, ಬಗರ್‌ಹುಕುಂ ಅರ್ಜಿದಾರರಿಗೆ ಸಾಗುವಳಿ ಚೀಟಿ ಜತೆಗೆ ಅವರ ಹೆಸರಿಗೆ ಖಾತೆ ಮಾಡಿಕೊಡಲು ಚಿಂತಿಸಲಾಗಿದೆ ಎಂದರು.

ಬಗರ್ ಹುಕುಂ ಅರ್ಜಿದಾರರ ಸಮಸ್ಯೆ ತುರ್ತಾಗಿ ಬಗೆಹರಿಸಲು ಹುಳಿಯಾರು ಹೋಬಳಿಗೆ ಹೆಚ್ಚುವರಿಯಾಗಿ ಕಂದಾಯ ಅಧಿಕಾರಿಗಳನ್ನು ನೇಮಕ ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಅವರಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಮಾತನಾಡಿ, ಕಂದಾಯ ಸಚಿವರ ಆದೇಶದ ಮೇರೆಗೆ ತಾಲೂಕಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಕಂದಾಯ ಇಲಾಖೆಯಿಂದ 55ಕ್ಕೂ ಹೆಚ್ಚು ಸೇವೆಗಳನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದ್ದು, ಇಲಾಖೆ ಅಧಿಕಾರಿಗಳು ಹಾಜರಿದ್ದು, ಸಾರ್ವಜನಿಕರ ಕಚೇರಿ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹರಿಸಿ ಆದೇಶ ಪತ್ರ ನೀಡಲಾಗುವುದು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ.ವಂಶಿಕೃಷ್ಣ, ತಹಸೀಲ್ದಾರ್

ತೇಜಸ್ವಿನಿ, ಗ್ರಾಪಂ ಅಧ್ಯಕ್ಷೆ ರಂಗಮ್ಮ ಮರಿಯಪ್ಪ, ತಾಲೂಕಿನ ವಿವಿಧ

ಇಲಾಖೆ ಅಧಿಕಾರಿಗಳು ಇದ್ದರು.

ಅರ್ಜಿ ವಿಲೇವಾರಿಗೆ ಸೂಚನೆ: ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಹಾಗೂ ಜಿಪಂ ಸಿಇಒ ಶುಭಾಕಲ್ಯಾಣ್ ಅವರು ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ, ಆರೋಗ್ಯ ಸೇರಿ ವಿವಿಧ ಇಲಾಖೆಗಳಲ್ಲಿ ಆಗಬೇಕಿರುವ ಕೆಲಸಗಳ ಕುರಿತು ಸಾರ್ವಜನಿಕರಿಂದ ಅರ್ಜಿಗಳನ್ನು ಪಡೆದು ಪರಿಹಾರ ಕಲ್ಪಿಸಲು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net