ಗಮನ ಸೆಳೆದ ಮಕ್ಕಳ ಗ್ರಾಮ ಸಭೆ

gramasabhe
Published on

ಕುಶಾಲನಗರ:

ಸಮೀಪದ ಕೂಡುಮಂಗಳೂರು ಗ್ರಾಮ ಪಂಚಾಯಿತಿಯಿAದ ಕೂಡ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಮಕ್ಕಳ ಗ್ರಾಮ ಸಭೆಯಲ್ಲಿ ವಿದ್ಯಾರ್ಥಿಗಳು ತಮ್ಮ ಶಾಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ ಅಧಿಕಾರಿಗಳ ಗಮನ ಸೆಳೆದರು. ಶಾಲೆಗೆ ಅಗತ್ಯವಾಗಿ ಬೇಕಾಗಿರುವ ಶೌಚಾಲಯ ಒದಗಿಸಿ, ಶಾಲೆಯ ಬಾಗಿಲು ದುರಸ್ತಿಗೊಳಿಸಿ, ಶಾಲೆಗೆ ಆಟದ ಮೈದಾನ ಒದಗಿಸಿ ಕೊಡುವುದರ ಜತೆಗೆ, ನಮ್ಮ ಶಾಲೆಗೆ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಿ, ಕಂಪ್ಯೂಟರ್ ಶಿಕ್ಷಣ ಕೊಡಿಸಿ, ಕಂಪ್ಯೂಟರ್ ಶಿಕ್ಷಕರನ್ನು ನೇಮಿಸಿ, ಸರ್ಕಾರಿ ಶಾಲೆಯ ಜಾಗವನ್ನು ರಕ್ಷಿಸಿ.. ಹೀಗೆ ಸರ್ಕಾರಿ ಶಾಲೆಗಳಲ್ಲಿರುವ ಅನೇಕ ಸಮಸ್ಯೆಗಳನ್ನು ಶಾಲೆ ಮಕ್ಕಳಾದ ಗಗನ್ ಚಿನ್ಮಯಿ, ನಮ್ರತಾ, ನಿಶ್ಚಿತ, ಭೂಮಿಕಾ ,ವರ್ಷ, ಸಿಂಚನ, ಯಶ್ವಿನಿ, ಜೀವನ್, ಸಂಜನ್ ಯಾವುದೇ ಅಂಜಿಕೆಯಿಲ್ಲದೇ ಜನಪ್ರತಿನಿಧಿಗಳ ಎದುರು ಹೇಳಿಕೊಂಡರು.

ಕೂಡಿಗೆ ಶಾಲಾ ಮೈದಾನ ಶಾಲಾ ವೇಳೆ ಮುಗಿದ ಸಂಜೆ ನಂತರ ಮದ್ಯ ಹಾಗೂ ಧೂಮಪಾನಿಗರ ಅಡ್ಡೆಯಾಗಿ ಮಾರ್ಪಟ್ಟಿದೆ. ಇದರಿಂದ ಶಾಲಾ ವಾತಾವರಣ ಹದಗೆಟ್ಟಿದೆ ಎಂದು ಮಕ್ಕಳ ಗ್ರಾಮಸಭೆಯಲ್ಲಿ ವಿದ್ಯಾರ್ಥಿಗಳು ದೂರಿದರು.

ಕೂಡುಮಂಗಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಡಿ. ಭಾಸ್ಕರ್ ನಾಯಕ್ ಸಮಸ್ಯೆಗಳನ್ನು ಆಲಿಸಿ ಮಾತನಾಡಿ, ನಮ್ಮ ಪಂಚಾಯತಿ ವ್ಯಾಪ್ತಿಗೆ ಬರುವ ಎಲ್ಲಾ ಸಮಸ್ಯೆಗಳನ್ನು ಅನುದಾನದ ಲಭ್ಯತೆಗನುಗುಣವಾಗಿ ತ್ವರಿತಗತಿಯಲ್ಲಿ ಬಗೆಹರಿಸಲು ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.

ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಂ.ಆರ್. ಸಂತೋಷ್ ಮಾತನಾಡಿ, ವಿದ್ಯಾರ್ಥಿಗಳು ಇಂತಹ ಗ್ರಾಮಸಭೆಯ ಮೂಲಕ ತಮ್ಮ ಹಕ್ಕೋತ್ತಾಯಗಳನ್ನು ಮಂಡಿಸಲು ಸಾಧ್ಯ ಮತ್ತು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಸಾಧ್ಯವಾಗುತ್ತದೆ. ಮಕ್ಕಳು ಈ ಸಭೆಯಲ್ಲಿ ಸಮಸ್ಯೆಗಳನ್ನು ಉತ್ತಮವಾಗಿ ಮಂಡಿಸಿರುವುದನ್ನು ಶ್ಲಾಘಿಸಿದರು.

ಸಂಪನ್ಮೂಲ ವ್ಯಕ್ತಿ ಕೆ.ಶಾಂತಕುಮಾರ್ ಮಕ್ಕಳ ಹಕ್ಕುಗಳ ಮತ್ತು ಕರ್ತವ್ಯ ಕುರಿತು ಮಾಹಿತಿ ನೀಡಿದರು. ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್ ಮಾತನಾಡಿ, ನಾಗರಿಕರು ತಮ್ಮ ಬೇಡಿಕೆಗಳನ್ನು ಅಹವಾಲುಗಳನ್ನು ಗ್ರಾಮಸಭೆಯ ಮೂಲಕ ಸಲ್ಲಿಸುವಂತೆ ಮಕ್ಕಳೂ ಸಹ ತಮ್ಮ ಬೇಡಿಕೆಗಳನ್ನು ಕುಂದುಕೊರತೆಗಳನ್ನು ಮಕ್ಕಳ ಗ್ರಾಮಸಭೆಯ ಮೂಲಕ ಪರಿಹರಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶ ನೀಡಲಾಗಿದೆ ಎಂದರು.

ಈ ಸಂದರ್ಭ ಕೂಡುಮಂಗಳೂರು ಗ್ರಾಮ ಪಂಚಾಯತಿ ಸದಸ್ಯರಾದ ಜೆ. ಫಿಲೋಮಿನಾ, ಸುರೇಶ್, ಕೂಡಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಸ್.ಎ. ಯೋಗೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಂದೀಶ್, ಕೂಡುಮಂಗಳೂರು ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಎಚ್.ಎಸ್. ಸುಜಾತಾ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಪವಿತ್ರ, ಚಿಕ್ಕತ್ತೂರು ಶಾಲೆಯ ಮುಖ್ಯ ಶಿಕ್ಷಕ ಎಚ್.ಎಸ್. ಪ್ರಕಾಶ್, ಶಿಕ್ಷಕ ಉದಯಪ್ರಕಾಶ್, ದೊಡ್ಡತ್ತೂರು ಶಾಲೆಯ ಮುಖ್ಯ ಶಿಕ್ಷಕಿ ಚಂದ್ರಿಕಾ, ಹುಲುಸೆ ಬಸವರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net