ವಿರಾಜಪೇಟೆ : ಕಡಂಗಪಟ್ಟಣದ ಸಮಗ್ರ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿ ಮುಂದಾಗಬೇಕು ಎಂದು ಗ್ರಾಮಸ್ಥರು ಒಕ್ಕೊರಲಿನಿಂದ ಆಗ್ರಹಿಸಿದರು. ನರಿಯಂದಡ ಗ್ರಾಮ ಪಂಚಾಯಿತಿ ಹಾಗೂ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವತಿಯಿಂದ ಜಂಟಿಯಾಗಿ ಕಡಂಗದ ಶಾದಿ ಮಹಲ್ ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗ್ರಾಮಸಭೆಯಲ್ಲಿ ಮಾತನಾಡಿದ ಗ್ರಾಮಸ್ಥರು, ಅಂಗಡಿ ಪರವಾನಗಿ, ಪ್ಲಾಸ್ಟಿಕ್ ತ್ಯಾಜ್ಯ ತೆರವು, ಪಾರ್ಕಿಂಗ್ ವ್ಯವಸ್ಥೆ ಮತ್ತಿತರ ವಿಷಯದ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ತುರ್ತು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು. ಕಡಂಗದಲ್ಲಿ ಸೂಕ್ತವಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ವಾಹನಗಳನ್ನು ಅಂಗಡಿಗಳ ಮುಂದೆ ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗುತ್ತಿದೆ. ಇದರಿಂದ ವ್ಯಾಪಾರ, ವಹಿವಾಟಿಗೆ ತೀವ್ರ ತೊಂದರೆ ಆಗುತ್ತಿದೆ. ಈ ಬಗ್ಗೆ ಪೊಲೀಸರು ಗಮನ ಹರಿಸಬೇಕು ಎಂದು ಸಾರ್ವಜನಿಕರು ಹಾಗೂ ಅಂಗಡಿ ಮಾಲೀಕರು ಆಗ್ರಹಿಸಿದರು. ಆಟೋರಿಕ್ಷಾಗಳಲ್ಲಿ ಚಾಲಕರು ಲೂಡೋ ಆಟ ಆಡುವುದು, ರಾತ್ರಿ ಸಮಯಗಳಲ್ಲಿ ಆಟೋ ಬಾಡಿಗೆ ಕರೆದರೂ ಸಹಕರಿಸದಿರುವ ಪ್ರಸಂಗಗಳು ಹೆಚ್ಚಾಗಿವೆ ಎಂದು ಗ್ರಾಮಸ್ಥರು ಸಮಸ್ಯೆ ವಿವರಿಸಿದರು. ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಚೋಳಂಡ ಸುಗುಣ ಪ್ರತಿಕ್ರಿಯಿಸಿ ಒಂದು ವಾರದ ಒಳಗೆ ಆಟೋ ಚಾಲಕರ ಸಭೆ ನಡೆಸುತ್ತೇನೆ. ಸಮಸ್ಯೆಗಳನ್ನು ನಿವಾರಿಸಲು ಕ್ರಮ ವಹಿಸುವೆ ಎಂದರು.