ಅಪಾಯದ ಕೆಳಗೆ ಪಾಠ ಕೇಳಬೇಕಿದೆ

05 HRS 01
ಹಿರೀಸಾವೆ ಹೋಬಳಿ ದಿಡಗದಲ್ಲಿ ಏರ್ಪಡಿಸಿದ್ದ ಮಕ್ಕಳ ಗ್ರಾಮಸಭೆಯನ್ನು ಗಣ್ಯರು ಉದ್ಘಾಟಿಸಿದರು. ಪುಟ್ಟರಾಜು, ಸವಿತಾ, ಪಿ.ಕೆ.ಶಿವಶಂಕರ್, ಎಚ್.ಕೆ.ಸುಧಾಕರ್, ಕೆ.ಎನ್.ಹರಿಪ್ರಸಾದ್ ಇತರರು ಇದ್ದರು.
Published on

ಹಿರೀಸಾವೆ: ಸೂಕ್ತ ಶೌಚಗೃಹವಿಲ್ಲ, ಶುದ್ಧ ಕುಡಿಯುವ ನೀರಿಲ್ಲ, ಶಾಲಾ ಕಟ್ಟಡಗಳು ಶಿಥಿಲಗೊಂಡಿವೆ, ಗೋಡೆಯಲ್ಲಿ ಬಿರುಕು, ಛಾವಣಿ ಮತ್ತು ಕಿಟಕಿ-ಬಾಗಿಲು ಗೆದ್ದಲು ಹಿಡಿದಿವೆ, ಕೊಠಡಿಗೆ ಬಾಗಿಲೇ ಇಲ್ಲ, ಅಪಾಯದ ಕೆಳಗೆ ಕುಳಿತು ಪಾಠ ಕೇಳಬೇಕಿದೆ, ಮೈದಾನದಲ್ಲಿ ಗಿಡ-ಗಂಟಿಗಳು ಬೆಳೆದಿವೆ, ಕಾಂಪೌಂಡ್ ಇಲ್ಲ, ನೆಲದ ಕಾಂಕ್ರಿಟ್ ಕಿತ್ತು ಗುಂಡಿ ಬಿದ್ದಿವೆ…

ಹೋಬಳಿಯ ದಿಡಗ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿರುವ ಸುವರ್ಣ ಭವನದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಮಕ್ಕಳ ಗ್ರಾಮಸಭೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ತಮ್ಮ ತಮ್ಮ ಸರ್ಕಾರಿ ಶಾಲೆಗಳ ವ್ಯವಸ್ಥೆ-ಅವ್ಯವಸ್ಥೆಗಳ ಬಗ್ಗೆ ಹತ್ತು ಹಲವು ಸಮಸ್ಯೆಗಳ ದೂರಿನ ಸುರಿಮಳೆ ಸುರಿಸಿದರು.
ಸರ್ಕಾರಿ ಫ್ರೌಢಶಾಲೆಯ ವಿದ್ಯಾರ್ಥಿನಿ ಕೆ.ಪೂಜಾ ಮಾತನಾಡಿ, ಪ್ರತಿದಿನ ಸಂಜೆ ಹಾಗೂ ರಜೆ ದಿನಗಳಲ್ಲಿ ಶಾಲಾ ಆವರಣಕ್ಕೆ ಅತಿಕ್ರಮ ಪ್ರವೇಶಿಸುವ ಪುಂಡ-ಪೋಕರಿಗಳು ಮದ್ಯಸೇವನೆ, ಧೂಮಪಾನ ಹಾಗೂ ಇತರ ಅನೈತಿಕ ಚಟುವಟಿಕೆಯಲ್ಲಿ ತೊಡಗಿ ಶಾಲಾ ಆವರಣವನ್ನು ಗಲೀಜು ಮಾಡಿ ಹೋಗುವುದು ಮುಜುಗರ ತಂದಿದೆ. ಇದಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಹೊಸಹಳ್ಳಿಪುರ ಗ್ರಾಮದ ಸರ್ಕಾರಿ ಕಿರಿಯ ಪಾಠಶಾಲೆಯ ವಿದ್ಯಾರ್ಥಿ ಶಶಾಂಕ್ ಮಾತನಾಡಿ, ನಮ್ಮ ಶಾಲೆಯ ಸುತ್ತಲೂ ಗಿಡ-ಗಂಟಿಗಳು ಹೇರಳವಾಗಿ ಬೆಳೆದಿದ್ದು ವಿಷಜಂತು, ಹುಳು-ಉಪ್ಪಟ ಕಾಟ ಹೆಚ್ಚಾಗಿದೆ. ಇಂತಹ ಆತಂಕದಲ್ಲಿಯೇ ದಿನ ಕಳೆಯಬೇಕಾಗಿದೆ. ದಯವಿಟ್ಟು ಶೀಘ್ರ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಅಳಲು ತೋಡಿಕೊಂಡನು.

ಉಳ್ಳಾವಳ್ಳಿ ಶಾಲೆಯ ವಿದ್ಯಾರ್ಥಿನಿ ಸ್ಫೂರ್ತಿ ಮಾತನಾಡಿ, ನಮ್ಮ ಶಾಲಾ ಕಟ್ಟಡ ಶಿಥಿಲಗೊಂಡಿದ್ದು ಛಾವಣಿಯ ಮರ-ಮುಟ್ಟುಗಳು ಗೆದ್ದಲು ಹಿಡಿದು ಉದುರುತ್ತಿವೆ. ಅನಾಹುತಕ್ಕೆ ಆಹ್ವಾನಿಸುತ್ತಿರುವ ಅಪಾಯದ ಕೆಳಗೆ ಕುಳಿತು ಪಾಠ-ಪ್ರವಚನ ಕೇಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ತೆರವುಗೊಳಿಸಿ ನೂತನ ಕಟ್ಟಡ ನಿರ್ಮಿಸಿದರೆ ಅನುಕೂಲವಾಗಲಿದೆ ಎಂದು ಒತ್ತಾಯಿಸಿದರು.
ಕನುವನಘಟ್ಟ ಶಾಲೆಯ ವಿದ್ಯಾರ್ಥಿ ವೈಶಾಕ್ ಮಾತನಾಡಿ, ಶಾಲೆಯ ಕೊಠಡಿಯೊಂದಕ್ಕೆ ಬಾಗಿಲೇ ಇಲ್ಲ. ಸದ್ಯ ಉತ್ತಮ ಕೊಠಡಿಯೂ ಇಲ್ಲ. ಅವ್ಯವಸ್ಥೆಯ ನಡುವೆ ಶಿಕ್ಷಣ ಪಡೆಯಬೇಕಾಗಿದೆ. ಹೊಸ ಕಟ್ಟಡಕ್ಕೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ದಿಡಗ ಫ್ರೌಢಶಾಲೆಯ ವಿದ್ಯಾರ್ಥಿ ವಿನಯ್ ಮಾತನಾಡಿ, ಶೌಚಗೃಹವಿಲ್ಲ, ಇನ್ನು ಕಾಲೇಜು ಹಾಗೂ ಫ್ರೌಢಶಾಲೆ ಒಟ್ಟಿಗೆ ಇದ್ದು ಸಂಜೆ ಮೇಲೆ ಪುಂಡ, ಪೋಕರಿಗಳಿಂದ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವುದರಿಂದ ಸಿಸಿ ಕ್ಯಾಮರಾ ಅಳವಡಿಸಬೇಕು. ಜತೆಗೆ ಆಗಾಗ್ಗೆ ಸಂಜೆ ವೇಳೆ ಪೊಲೀಸರು ಭೇಟಿ ನೀಡಿದರೆ ಇನ್ನೂ ಒಳ್ಳೆಯದು ಎಂದರು.
ಹೊಸಹಳ್ಳಿ ಶಾಲೆಯ ವಿದ್ಯಾರ್ಥಿನಿ ಐಸಿರಿ ಮಾತನಾಡಿ, ಅಗತ್ಯ ಸೌಲಭ್ಯಗಳೊಂದಿಗೆ ಆಟದ ಮೈದಾನ ನಿರ್ಮಿಸುವುದರ ಜತೆಗೆ ಉಪಯುಕ್ತ ಆಟದ ಸಾಮಗ್ರಿಗಳನ್ನು ಕಲ್ಪಿಸಬೇಕು. ಇದರಿಂದ ವಿದ್ಯಾರ್ಥಿಗಳ ಕ್ರೀಡಾ ವ್ಯವಸ್ಥೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಬೇಡಿಕೆ ಇಟ್ಟರು. ಇನ್ನೂ ಹಲವು ವಿದ್ಯಾರ್ಥಿಗಳು ತಮ್ಮ ತಮ್ಮ ಶಾಲೆಯ ಸಮಸ್ಯೆಗಳನ್ನು ಸಭೆಯ ಮುಂದಿಟ್ಟರು.

ತಾಪಂ ಮಾಜಿ ಸದಸ್ಯ ಪುಟ್ಟರಾಜು ಮಾತನಾಡಿ, ಉಳ್ಳಾವಳ್ಳಿ, ಪುರ, ದಿಡಗ, ಹೊಸಹಳ್ಳಿ ಸೇರಿದಂತೆ ಬಹುತೇಕ ಶಾಲಾ, ಆಸ್ತಿ ಶಾಲೆಗಳ ಹೆಸರಿನಲ್ಲಿ ನೋಂದಣಿಯಾಗಿಲ್ಲ. ಪರಿಣಾಮ ಸರ್ಕಾರದಿಂದ ಯಾವುದೇ ಅನುದಾನ ತಂದು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ದಯವಿಟ್ಟು ಗ್ರಾಮ ಪಂಚಾಯಿತಿ, ಶಿಕ್ಷಣ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಭೆ ನಡೆಸಿ ಆಸ್ತಿಯನ್ನು ಶಾಲೆಯ ಹೆಸರಿಗೆ ಸೇರಿಸುವ ಕೆಲಸವಾಗಬೇಕು. ಇದರಿಂದ ಮುಂದಿನ ದಿನಗಳಲ್ಲಿ ಶಾಲಾ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ಸಲಹೆ ನೀಡಿದರು.

ಪಿಡಿಒ ಕೆ.ಎಸ್.ಪ್ರಕಾಶ್ ಮಾತನಾಡಿ, ನೀವೆಲ್ಲ ನೀಡಿದ ದೂರುಗಳನ್ನು ಆಲಿಸಲಾಗಿದ್ದು, ಎಲ್ಲ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆಯೊಂದಿಗೆ ಸಮಸ್ಯೆಗಳ ಪಟ್ಟಿ ಸಿದ್ಧ್ದಪಡಿಸಲಾಗುವುದು. ಮೇಲಾಧಿಕಾರಿಗಳ ಗಮನಕ್ಕೆ ತಂದು ಅವರ ಮಾರ್ಗದರ್ಶನದಂತೆ ಎನ್‌ಆರ್‌ಐಜಿ ಸೇರಿದಂತೆ ವಿವಿಧ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಕೆಲವೊಂದು ದೊಡ್ಡ ದೊಡ್ಡ ಸಮಸ್ಯೆಗಳನ್ನು ಸಂಬಂಧಪಟ್ಟ ಆಯಾ ಇಲಾಖೆಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ಸದಸ್ಯ ಕೆ.ಎನ್.ಹರಿಪ್ರಸಾದ್ ಮಾತನಾಡಿ, ಮಕ್ಕಳು ಸಮಾಜದ ಮುಂದಿನ ಭವಿಷ್ಯದ ಪಿಲ್ಲರ್ ಇದ್ದಂತೆ. ಅವರ ಶೈಕ್ಷಣಿಕ ಬದುಕು ಬೀದಿಗೆ ಬಂದರೆ ಉತ್ತಮ ಸಮಾಜ ನಿರ್ಮಾಣವಾಗಲು ಹೇಗೆ ಸಾಧ್ಯ? ಮಕ್ಕಳು ಹೇಳಿದ ಸಮಸ್ಯೆಗಳ ಕುರಿತು ಮುಂದಿನ ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸವಿತಾ, ಸದಸ್ಯರಾದ ಪಿ.ಕೆ.ಶಿವಶಂಕರ್, ಎಚ್.ಕೆ.ಸುಧಾಕರ್, ರವಿ, ಆನಂದ್, ಉಮೇಶ್, ವಿನೋದ, ಸೌಮ್ಯಾ ಗವೀಶ್, ಯಶಸ್ವಿನಿ ರತ್ನರಾಜ್, ಗೀತಾ, ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ನೀಲಿಸಿದ್ದು, ಸಿಆರ್‌ಪಿ ಧರ್ಮಪಾಲ್, ವ್ಯಾಪ್ತಿಯ ಶಾಲೆಗಳ ಮುಖ್ಯಶಿಕ್ಷಕರು, ಸಹಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net