

ವಿಜಯವಾಣಿ ಸುದ್ದಿಜಾಲ ಆನೇಕಲ್
ಕೃಷಿ, ಶಿಕ್ಷಣ, ಕಂದಾಯ ಸೇರಿ ಪ್ರತಿ ಇಲಾಖೆಗಳಲ್ಲಿನ ಯೋಜನೆಗಳಿಗೆ ಅರ್ಹ ಫಲಾನುಭವಿಗಳನ್ನು ಗುರುತಿಸುವುದು ಗ್ರಾಮಸಭೆಯ ಉದ್ದೇಶವಾಗಿದೆ ಎಂದು ಸುರಗಜಕ್ಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಾ ಮಹದೇವಯ್ಯ ಹೇಳಿದರು.
ತಾಲೂಕಿನ ಸುರಗಜಕ್ಕನಹಳ್ಳಿ ಗ್ರಾಪಂನಲ್ಲಿ ಏರ್ಪಡಿದ್ದ 2023-24ನೇ ಸಾಲಿನ ಮೊದಲ ಸುತ್ತಿನ ಗ್ರಾಮಸಭೆಯಲ್ಲಿ ಮಾತನಾಡಿ, ಗ್ರಾಮಗಳಿಗೆ ಅಗತ್ಯವಾಗಿ ಬೇಕಾಗಿರುವ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಈ ಸಭೆ ಆಯೋಜನೆ ಮಾಡಲಾಗಿದೆ. ವೈಯಕ್ತಿಕವಾಗಿ ರೈತರಿಗೆ ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸುವುದು ಸಭೆಯ ಉದ್ದೇಶ. ಹಾಗಾಗಿ ಸಮಸ್ಯೆಗಳಿದ್ದರೆ ಸಭೆಯಲ್ಲಿ ತಿಳಿಸಬೇಕು ಎಂದು ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಸ್ಕಾಂ ಇಲಾಖೆಗೆ ಸಂಬಂಧಿಸಿದಂತೆ ಇದ್ದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಇಲಾಖೆ ಅಧಿಕಾರಿಗಳು ಸಭೆಗೆ ಹಾಜರಾಗಿರಲಿಲ್ಲ. ಸಭೆಗೆ ಹಾಜರಾಗದಿರುವ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು ಎಂದು ಗ್ರಾಪಂ ಅಧ್ಯಕ್ಷರು ತಿಳಿಸಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ 3ಸಾವಿರ ರೂ.ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ನಾಲ್ಕು ಸಾವಿರ ರೂ.ಮೊತ್ತದ ಚೆಕ್‌ಗಳನ್ನು ವಿತರಿಸಲಾಯಿತು. ಅಂತಿಮ ನಮನ ಕಾರ್ಯಕ್ರಮದಡಿಯಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಮೃತಪಟ್ಟ ಕುಟುಂಬಕ್ಕೆ ಐದು ಸಾವಿರ ರೂ.ಗಳ ಚೆಕ್‌ಗಳನ್ನು ವಿತರಿಸಲಾಯಿತು.
ಗ್ರಾಪಂ ಸದಸ್ಯರಾದ ಮುನಿಕೃಷ್ಣ, ಆರ್.ಶ್ರೀರಾಮ್, ಎ.ರಾಜಪ್ಪ, ಎಸ್.ಮುನಿರಾಜು, ಶಶಿಕಲಾ, ಚಿನ್ನಮ್ಮ, ಜಮುನಾರಾಣಿ, ಲಕ್ಷ್ಮಮ್ಮ, ಮಹಮದ್ ಶೌಕತ್, ರಾಜೇಂದ್ರ, ಮಂಜುಳಾ, ರೇಣುಕಾ, ಬೇಬಿ, ಎನ್.ಮಂಜುಳಾ, ಮುನಿರಾಜು, ವೈ.ಶಶಿಕಲಾ, ಚಂದ್ರಶೇಖರ್, ಮುನಿಲಕ್ಷ್ಮೀ ಇದ್ದರು.