ಸಮಸ್ಯೆ ಪರಿಹಾರಕ್ಕೆ ಗ್ರಾಮಸಭೆ ಸೂಕ್ತ ವೇದಿಕೆ

gramasabe
Published on

ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಅನಿಲ್‌ಕುಮಾರ್ ಅನಿಸಿಕೆ


ವಿಜಯವಾಣಿ ಸುದ್ದಿಜಾಲ ಆನೇಕಲ್
ಅರ್ಹ ಫಲಾನುಭವಿಗಳನ್ನು ಗುರುತಿಸಲು ಮತ್ತು ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ಗ್ರಾಮಸಭೆಗಳಲ್ಲಿ ಹೆಚ್ಚಿನ ಸಾರ್ವಜನಿಕರು ಪಾಲ್ಗೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಅನಿಲ್‌ಕುಮಾರ್ ಹೇಳಿದರು.
ತಾಲೂಕಿನ ಮರಸೂರು ಗ್ರಾಪಂನಲ್ಲಿ ಹಮ್ಮಿಕೊಂಡಿದ್ದ 2023-24ನೇ ಸಾಲಿನ ಮೊದಲ ಸುತ್ತಿನ ಗ್ರಾಮಸಭೆಯಲ್ಲಿ ಮಾತನಾಡಿ, ಜನರ ಪಾಲ್ಗೊಳ್ಳುವಿಕೆಯಿಂದ ಗ್ರಾಮಗಳ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂಡು ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.
ಗ್ರಾಪಂ ಅಧ್ಯಕ್ಷೆ ಚಂದ್ರಕಲಾ ಎಂ. ಮಾತನಾಡಿ, ಮರಸೂರು ಗ್ರಾಪಂ ಮಾದರಿ ಪಂಚಾಯಿತಿಯಾಗಿದೆ. ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಪ್ರತಿ ಲೀಟರ್ ಹಾಲಿಗೆ 2 ರೂ. ಪ್ರೋತ್ಸಾಹ ಧನ ನೀಡುತ್ತಿರುವ ತಾಲೂಕಿನ ಏಕೈಕ ಗ್ರಾಮ ಪಂಚಾಯಿತಿಯಾಗಿದೆ ಎಂದರು.
ಈ ಸಾಲಿನಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳಿಗೆ ಕ್ರಿಯಾಯೋಜನೆ ತಯಾರಿಸಲು ವಾರ್ಡ್ ಸಭೆಗಳನ್ನು ನಡೆಸಲಾಗಿದೆ. ಜನರಿಗೆ ಅವಶ್ಯಕವಿರುವ ಕಾರ್ಯಕ್ರಮ ರೂಪಿಸುವ ಮೂಲಕ ಗ್ರಾಪಂ ಜನಸ್ನೇಹಿಯಾಗಿದೆ ಎಂದರು.
ಮರಸೂರು ಮತ್ತು ಮಡಿವಾಳದ ಸರ್ವೇ ದಾಖಲೆಗಳು ಲಭ್ಯವಾಗುತ್ತಿಲ್ಲ. ಈ ಬಗ್ಗೆ ಸರ್ಕಾರ ಕ್ರಮಕೈಗೊಳ್ಳಬೇಕು. ಗ್ರಾಪಂನ ವಿವಿಧ ಗ್ರಾಮಗಳಿಗೆ ಸ್ಮಶಾನ ಜಾಗ ಮಂಜೂರು ಮಾಡಬೇಕು. ವೃದ್ಧಾಪ್ಯ ವೇತನ ಮತ್ತು ವಿಧವಾ ವೇತನ ವಿವಿಧ ಕಾರಣಗಳಿಂದ ಫಲಾನುಭವಿಗಳಿಗೆ ದೊರೆಯುತ್ತಿಲ್ಲ. ಈ ಬಗ್ಗೆ ಕಂದಾಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.
ಗ್ರಾಪಂ ಸದಸ್ಯರಾದ ಪ್ರಭಾಕರರೆಡ್ಡಿ, ಸರಿತಾ ವೆಂಕಟಸ್ವಾಮಿ, ಮಂಜುಳಾ ಸೋಮಶೇಖರ್, ಮಣಿಕಂಠ, ರಶ್ಮಿ ಅನಿಲ್, ಮಂಜುನಾಥ್, ನಾಗಲಕ್ಷ್ಮೀ, ವನಿತಾ, ಮಂಜುಳಾ ನಾರಾಯಣರೆಡ್ಡಿ, ನಿರ್ಮಲಾ, ಯಲ್ಲಪ್ಪ, ಮುನಿಯಪ್ಪ, ವೆಂಕಟಸ್ವಾಮಿರೆಡ್ಡಿ, ನಾಗರಾಜು, ಶಾಂತಮ್ಮ, ಅಳ್ಳಳ್ಳಿ ಮುನಿಯಮ್ಮ, ಕೃಷ್ಣಪ್ಪ ನಾಗಪ್ಪ, ಗೋಪಾಲಪ್ಪ, ಸುಧಾ ಮುರಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net