ಏಪ್ರಿಲ್ನಲ್ಲಿ 2500 ನಿವೇಶನ ಹಂಚಿಕೆ

grama
Published on

 ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ 

ದೇವನಹಳ್ಳಿ ತಾಲೂಕಿನ ನಿವೇಶನ ರಹಿತ ಅರ್ಹ ಫಲಾನುಭವಿಗಳನ್ನು ಈಗಾಗಲೇ ಗುರ್ತಿಸಿಲಾಗಿದ್ದು ಏಪ್ರಿಲ್ ತಿಂಗಳಲ್ಲಿ 2500 ನಿವೇಶನ ಹಂಚಿಕೆ ಮಾಡುವ ಗುರಿ ಇದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಭರವಸೆ ನೀಡಿದರು.

ದೇವನಹಳ್ಳಿ ತಾಲೂಕು ಕನ್ನಮಂಗಲ ಗ್ರಾಮ ಪಂಚಾಯತಿ ಆವರಣದಲ್ಲಿ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಗ್ರಾಮಸಭೆಯಲ್ಲಿ ತಿಳಿಸಿದರು. ಮಾರ್ಚ್ ಅಂತ್ಯದಲ್ಲಿ ನಿವೇಶನ ನೀಡುವ ಗುರಿ ಹೊಂದಲಾಗಿತ್ತು ಕಾರಣಾಂತರಗಳಿಂದ ಮುಂದಿಡಲಾಗಿದ್ದು ಏಪ್ರಿಲ್ ತಿಂಗಳಲ್ಲ್ಲಿ ದೊಡ್ಡಮಟ್ಟದಲ್ಲಿ ಕಾರ್ಯಕ್ರಮ ಏರ್ಪಡಿಸಿ ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲಾಗುವುದು ಎಂದರು. ಈ ಪಂಚಾಯತಿ ಆದಾಯನ್ನು ಸದ್ಬಳಕೆ ಮಾಡಿಕೊಂಡು ವೇಗವಾಗಿ ಅಭಿವೃದ್ದಿ ಹೊಂದುತ್ತಿದೆ ಇದು ಮಾದರಿ ಪಂಚಾಯತಿ ಆಗಿದೆ ಎಂದರು.

ಹೊಸ ಮಾದರಿ ಶಾಲೆ: ಪ್ರತಿ ಗ್ರಾಮಪಂಚಾಯತಿಯಲ್ಲಿ ಹೊಸ ಮಾದರಿ ಶಾಲೆಗಳ ನಿರ್ಮಾಣದ ಗುರಿಯನ್ನು ಹೊಂದಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಲಭ್ಯವಾದಲ್ಲಿ ಭವಿಷ್ಯದಲ್ಲಿ ಮಕ್ಕಳು ಉನ್ನತ ಹುದ್ದೆಗಳನ್ನು ಪಡೆಯಲು ಸಹಕಾರಿಯಾಗುತ್ತೆ ಎಂದು ಸಚಿವರು ಹೇಳಿದರು.

ಮಕ್ಕಳ ಪೋಷಣೆ, ಪಾಲನೆಯಲ್ಲಿ ತಾಯಂದಿರ ಪಾತ್ರ ಬಹಳ ಮುಖ್ಯ. ಗರ್ಭಿಣಿ, ಬಾಣಂತಿಯರಿಗೆ ಪೌಷ್ಟಿಕ ಅಹಾರವನ್ನು ಅಂಗನವಾಡಿ ಮುಖಾಂತರ ಕ್ರಮಬದ್ಧ್ದವಾಗಿ ವಿತರಿಸಬೇಕು. ಇಲ್ಲವಾದಲ್ಲಿ ಅಪೌಷ್ಟಿಕ ಮಕ್ಕಳ ಜನನವಾಗಿ ಸಮಾಜಕ್ಕೆ, ಕುಟಂಬಕ್ಕೂ ಹೊರೆಯಾಗಲಿದ್ದಾರೆ. ಹಾಗಾಗಿ ಪೌಷ್ಟಿಕ ಆಹಾರ ವಿತರಣೆಯಲ್ಲಿ ಯಾವುದೇ ಲೋಪಗಳು ಉಂಟಾಗದೇ ಅಹಾರ ವಿತರಿಸುವ ಮೂಲಕ ಅರಿವು ಮೂಡಿಸಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಪರಿಸರ ಜಾಗೃತಿ: ಕನ್ನಮಂಗಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಪರಿಸರದ ಕಾಳಜಿ, ನೀರಿನ ಮೌಲ್ಯ, ಸ್ವಚ್ಛತೆ ಕಾಪಾಡುವ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿದರು. 10 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುವ ಬಗ್ಗೆ ಸಭೆಯ ಅನುಮೋದನೆ ಪಡೆದುಕೊಂಡರು, ನಿವೇಶನ ರಹಿತರಿಂದ ವಸತಿ ಸೌಲಭ್ಯಕ್ಕಾಗಿ ಬಂದಿರುವ ಗ್ರಾಮವಾರು ಅರ್ಜಿಗಳ ಫಲಾನುಭವಿಗಳ ಪಟ್ಟಿ ಓದಿ ಸಭೆಯ ಅನುಮೋದನೆ ಪಡೆದುಕೊಂಡರು. 2023-24ಹಾಗೂ 24-25 ನೇ ಸಾಲಿನ ಎಲ್ಲ ಯೋಜನೆಗಳ ಆದಾಯ ಮತ್ತು ವೆಚ್ಚವನ್ನು ಗ್ರಾಮಸಭೆಯಲ್ಲಿ ಮಂಡಿಸಿ ಸಭೆಯ ಸರ್ವಾನುಮತದ ಅಂಗೀಕಾರ ಪಡೆದುಕೊಂಡರು. ಪಂಚಾಯತಿ ವ್ಯಾಪ್ತಿಯ ಚೌಡನಹಳ್ಳಿಯಲ್ಲಿ 4. 20 ಎಕರೆ, ಕನ್ನಮಂಗಲ ಪಾಳ್ಯದಲ್ಲಿ 2 .27 ಗುಂಟೆ, ಕೆಂಪತಿಮ್ಮನಹಳ್ಳಿಯಲ್ಲಿ 3 ಎಕರೆ ಜಾಗ ಗುರುತಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net