ಗ್ರಾ.ಪಂ.ಜಲಗಾರನಿಂದಲೇ ಸರ್ಕಾರಿ ಕೊಳವೆ ಬಾವಿ ದುರ್ಬಳಕೆ?

9999
Published on

ಚಿಕ್ಕಬಳ್ಳಾಪುರ: ರಾಜಕೀಯ ಪ್ರಭಾವದ ಹಿನ್ನೆಲೆಯಲ್ಲಿ ಗ್ರಾ.ಪಂ.ಜಲಗಾರನೇ ಸರ್ಕಾರಿ ಜಮೀನಿನಲ್ಲಿ ಕೊಳವೆ ಬಾವಿಯನ್ನು ಕೃಷಿ ತೋಟಕ್ಕೆ ಬಳಸಿಕೊಳ್ಳುತ್ತಿದ್ದು ಗ್ರಾಮಸ್ಥರು ಕುಡಿಯುವ ನೀರಿಗೆ ತೊಂದರೆ ಅನುಭವಿಸುವಂತಾಗಿದೆ.
ಹೌದು! ತಾಲೂಕಿನ ಕಾನಗಮಾಕಲಪಲ್ಲಿ ಗ್ರಾ.ಪಂ.ವ್ಯಾಪ್ತಿಯ ಬೂರಗಮಡಗು ತಾಂಡದಲ್ಲಿ ಸರ್ಕಾರಿ ವೇತನ ಪಡೆಯುತ್ತಿರುವ ಗ್ರಾ.ಪಂ.ಜಲಗಾರನು ರಾಜಕಾರಣಿಗಳ ಕೃಪಾಕಟಾಕ್ಷದ ದರ್ಪದಲ್ಲಿ ಸರ್ಕಾರಿ ಕೊಳವೆ ಬಾವಿಯನ್ನು ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದಾನೆ. ಇದರಿಂದ ಈ ಗ್ರಾಮದ ಜನರಿಗೆ ನೀರಿಲ್ಲದಂತಾಗಿದೆ. ಇದರ ಅರಿವಿದ್ದರೂ ತಾಲೂಕು ಆಡಳಿತ, ತಾ.ಪಂ.ಅಧಿಕಾರಿಗಳು ಮೌನಕ್ಕೆ ಜಾರಿದ್ದಾರೆ.

* ರಾಜಾರೋಷವಾಗಿ ಅಕ್ರಮ ಬಳಕೆ
ಬೂರಮಡಗು ತಾಂಡ ಗ್ರಾಮದ ಸರ್ಕಾರಿ ಜಮೀನಿನಲ್ಲಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯು ಕೊಳವೆ ಬಾವಿ ಕೊರೆಸಿದೆ. ಇದಕ್ಕೆ ಲಕ್ಷಾಂತರ ರೂ ಅನುದಾನ ಖರ್ಚು ಮಾಡಲಾಗಿದೆ. ಇಂತಹ ಕೊಳವೆ ಬಾವಿಯನ್ನು ಗ್ರಾಮದ ಜಲಗಾರ ವಶಕ್ಕೆ ಪಡೆದುಕೊಂಡಿದ್ದಾನೆ. ಜತೆಗೆ ಕೃಷಿ ತೋಟಕ್ಕೆ ನೀರು ಹರಿಸಿಕೊಳ್ಳುವ ಮೂಲಕ ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದಾನೆ. ಇನ್ನು ಅಕ್ರಮ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಮೀನಿನಲ್ಲಿ ಟೊಮ್ಯಾಟೋ, ಬದನೆ ಕಾಯಿ ಸೇರಿದಂತೆ ವಿವಿಧ ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದಾನೆ. ಗ್ರಾಮಸ್ಥರು ಕುಡಿಯುವ ನೀರಿಲ್ಲದೇ ಪ್ರಶ್ನಿಸಿದಾಗ ದೌರ್ಜನ್ಯವೆಸಗಿರುವ ಆರೋಪ ಕೇಳಿ ಬಂದಿದೆ.

*ಗ್ರಾಮಸ್ಥರ ಅಳಲು
ಜಲಗಾರ ಸರ್ಕಾರಿ ಜಾಗ ಮತ್ತು ಕೊಳವೆ ಬಾವಿಯನ್ನು ದುರುಪಯೋಗಪಡಿಸಿಕೊಳ್ಳಲು ರಾಜಕೀಯ ಪ್ರಭಾವವೇ ಪ್ರಮುಖ ಕಾರಣ ಎನ್ನುವುದು ಗ್ರಾಮಸ್ಥರ ಆರೋಪ.
ಗ್ರಾಮದ ಜನರಿಗೆ ಕುಡಿಯಲು ನೀರಿಲ್ಲದಂತೆ ಮಾಡಿ ಸರ್ಕಾರಿ ಕೊಳವೆಬಾವಿಯ ನೀರನ್ನು ಕೃಷಿ ಜಮೀನಿಗೆ ಬಳಸಿಕೊಳ್ಳುತ್ತಿರುವ ಜಲಗಾರನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಆದರೆ, ಇಲ್ಲಿನ ಗ್ರಾ.ಪಂ.ಸದಸ್ಯರು ಇಲ್ಲವೇ ಸ್ಥಳೀಯ ಜನಪ್ರತಿನಿಧಿಗಳ ಬೆಂಬಲದಿಂದ ಜಾಣ ಕುರುಡತನ ಪ್ರದರ್ಶಿಸಲಾಗುತ್ತಿದೆ ಎಂದು ಬೂರಗಮಡಗು ತಾಂಡ ನಾರಾಯಣನಾಯಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲವು ಬಾರಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲು ಜಲಗಾರನ ಬಳಿ ಅಳಲು ತೋಡಿಕೊಳ್ಳಲಾಗಿದೆ. ಆದರೆ, ಸ್ಪಂದಿಸಿಲ್ಲ. ಬದಲಿಗೆ ಸರ್ಕಾರಿ ಜಮೀನಿನಲ್ಲಿ ಬೆಳೆದಿರುವ ಕೃಷಿ ಬೆಳೆಗಳಿಗೆ ಸರ್ಕಾರಿ ಕೊಳವೆಬಾವಿಯ ನೀರು ಹರಿಸಿಕೊಳ್ಳಲಾಗುತ್ತಿದೆ. ಜನರು ನೀರಿಗಾಗಿ ಪರಿತಪಿಸುವಂತಾಗಿದೆ ಎಂದು ತಾಂಡ ಗ್ರಾಮದ ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net