ಕಡತ ಹೊತ್ತೊಯ್ದ ಗ್ರಾಪಂ ಸದಸ್ಯರು!

crime
Published on

ಕಾರ್ಕಳ: ಗ್ರಾಪಂ ಸಾಮಾನ್ಯಸಭೆಯಲ್ಲಿ ಚರ್ಚೆಗೆ ಇಡಲಾಗಿದ್ದ ಕಡತವನ್ನು ಮೂವರು ಸದಸ್ಯರು ಕೈಚೀಲದಲ್ಲಿ ತುಂಬಿಸಿ ಹೊತ್ತೊಯ್ದಿದ್ದಾರೆ ಎಂದು ಆರೋಪಿಸಿ ಅಜೆಕಾರು ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ.
ಶಿರ್ಲಾಲು ಮುಂಡ್ಲಿಯ ಸುಜಿತ್ ಕುಮಾರ್ ಶೆಟ್ಟಿ(45), ಮುಂಡ್ಲಿಯ ಕಿಶೋರ್(32) ಶಿರ್ಲಾಲಿನ ಗಿರೀಶ್ ಶೆಟ್ಟಿ(40) ಕಡತ ಹೊತ್ತೊಯ್ದ ಆರೋಪಿಗಳು.
ಶಿರ್ಲಾಲು ಗ್ರಾಪಂ ಪಿಡಿಒ ಶ್ರೀನಿವಾಸ್ ಎಸ್ ಎಂಬುವರು ಫೆ.24ರಂದು ಪಂಚಾಯಿತಿ ಕಡತ ಪರಿಶೀಲನೆ ನಡೆಸಿದಾಗ, ಗ್ರಾಪಂ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಇರಿಸಿದ್ದ ಪ್ರಮುಖ ಕಡತವೊಂದು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಗ್ರಾಪಂ ವ್ಯಾಪ್ತಿಯ ಖಾಸಗಿ ಸಂಸ್ಥೆಗೆ ಸಂಬಂಧಿಸಿದ ಕಡತ ಅದಾಗಿತ್ತು.
ಗ್ರಾಪಂ ಸಿಸಿ ಕ್ಯಾಮರಾ ಫೂಟೇಜ್ ಪರಿಶೀಲನೆ ವೇಳೆ, ಫೆ.17ರಂದು ನಡೆದಿದ್ದ ಶಿರ್ಲಾಲು ಗ್ರಾಪಂ ಸಾಮಾನ್ಯ ಸಭೆ ಸಂದರ್ಭ ಚರ್ಚೆಗೆ ಇಡಲಾಗಿದ್ದ ಈ ಕಡತಗಳನ್ನು ಮೂವರು ಸದಸ್ಯರು ಪರಿಶೀಲಿಸುತ್ತಿದ್ದುದು, ಸಭೆ ಮುಗಿದ ಬಳಿಕ ಕಡತವನ್ನು ಇತರ ಇಬ್ಬರು ಸದಸ್ಯರ ನೆರವು ಪಡೆದು ಗಿರೀಶ್ ಶೆಟ್ಟಿ ಎಂಬುವರು ಕೈಚೀಲದಲ್ಲಿ ಹಾಕಿ ಕೊಂಡೊಯ್ದಿರುವುದು ಬೆಳಕಿಗೆ ಬಂದಿದೆ. ಶಿರ್ಲಾಲು ಗ್ರಾಪಂ ಹಾಗೂ ಸಂಬಂಧಿಸಿದ ಸಂಸ್ಥೆಗೆ ತೊಂದರೆ ಕೊಡುವ ಉದ್ದೇಶದಿಂದ ಗ್ರಾಪಂ ಸದಸ್ಯರು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿ ಪಿಡಿಒ ಶ್ರೀನಿವಾಸ್ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net