

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಯಗವಕೋಟೆ ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯ ಸಂದರ್ಭದಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು ಪರಸ್ಪರ ಕೈ ಕೈ ಮಿಲಾಯಿಸುವ ಹಂತದಲ್ಲಿ ಪೊಲೀಸರು ಮಧ್ಯೆ ಪ್ರವೇಶಿಸಿ, ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮತಪತ್ರದ ಬಣ್ಣ ಬದಲಾದ ವಿಷಯಕ್ಕೆ ಸಂಬಂಧಪಟ್ಟಂತೆ ಮುಖಂಡರೊಬ್ಬರು ಗ್ರಾಮ ಪಂಚಾಯಿತಿ ಕಚೇರಿಯ ಒಳಗೆ ಹೋಗಿದ್ದು ಗಲಾಟೆಗೆ ಪ್ರಮುಖ ಕಾರಣ. ಈ ವಿಷಯದ ಬಗ್ಗೆ ಒಂದು ಪಕ್ಷದ ಗುಂಪು ಚಕಾರ ತೆಗೆದ ಹಿನ್ನೆಲೆಯಲ್ಲಿ ಮಾತಿನ ಚಕಮಕಿ ನಡೆದಿದೆ. ಇದು ವಿಕೋಪಕ್ಕೆ ತಿರುಗಿ, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಇದರ ಮಧ್ಯಾಹ್ನ 1.30 ಕ್ಕೆ ಮುಗಿಯಬೇಕಾದ ಚುನಾವಣಾ ಪ್ರಕ್ರಿಯೆಯು ಸಂಜೆ 5.30 ಗಂಟೆಯವರೆಗೆ ನಡೆಯಿತು.
ಗಲಾಟೆ ವಿಷಯ ತಿಳಿಯುತ್ತಿದ್ದಂತೆ ಪ್ರಭಾರಿ ತಹಸೀಲ್ದಾರ್ ರಾಜೇಂದ್ರ, ಬಟ್ಲಹಳ್ಳಿ ಪಿಎಸ್‌ಐ ಪುನೀತ್ ಒಂದು ಡಿಎಆರ್ ತುಕಡಿಯೊಂದಿಗೆ ಯಗವಕೋಟೆ ಗ್ರಾಮಕ್ಕೆ ಆಗಮಿಸಿದರು. ಹಾಗೆಯೇ ಗಲಾಟೆಯನ್ನು ತಡೆದು ಎರಡು ಗುಂಪುಗಳ ನಡುವೆ ಮಾತುಕತೆ ನಡಸಿದರು. ಬಳಿಕ ಸುಗಮವಾಗಿ ಚುನಾವಣೆ ನಡೆಯಿತು. ತಾಂತ್ರಿಕ ಕಾರಣಗಳಿಂದ ಚುನಾವಣೆ ವಿಳಂಬವಾಗಿದೆ. ಇದೇ ವೇಳೆ ಮಾತಿನ ಚಕಮಕಿಯಿಂದ ಗೊಂದಲ ಉಂಟಾಗಿದ್ದು ಎಲ್ಲರನ್ನು ಸಮಾಧಾನಪಡಿಸಲಾಗಿದೆ ಎಂದು ಪ್ರಭಾರಿ ತಹಸೀಲ್ದಾರ್ ರಾಜೇಂದ್ರ ತಿಳಿಸಿದರು.