

ಬಂಟ್ವಾಳ: ವಿಷ ಪದಾರ್ಥ ಸೇವಿಸಿದ್ದ ಕಾವಳಮೂಡೂರು ಗ್ರಾಪಂ ನಿಕಟಪೂರ್ವ ಸದಸ್ಯ, ಹಾಲಿ ಅಭ್ಯರ್ಥಿ ಆಸ್ಪತ್ರೆಯಲ್ಲಿ ಸೋಮವಾರ ಮೃತಪಟ್ಟಿದ್ದಾರೆ. ಕಾವಳಮುಡೂರು ಗ್ರಾಮದ ಅರ್ಗತ್ಯಾರು ನಿವಾಸಿ ಜಯಂತ ಪ್ರಭು(58) ಮೃತಪಟ್ಟವರು. ಡಿ.21ರಂದು ರಾತ್ರಿ 11 ಗಂಟೆಗೆ ಬಾಯಿಹುಣ್ಣಿಗೆಂದು ತೆಗೆದುಕೊಳ್ಳುತ್ತಿದ್ದ ಔಷಧದ ಬದಲು ಟ್ರೈಕಾಟ್ ಎಂಬ ಹುಲ್ಲಿಗೆ ಸಿಂಪಡಣೆ ಮಾಡುವ ಕಳೆನಾಶಕವನ್ನು ಅಲ್ಪಪ್ರಮಾಣದಲ್ಲಿ ಸೇವಿಸಿದ್ದರು.
ಮರುದಿನ ಗ್ರಾಪಂ ಚುನಾವಣೆಯಲ್ಲಿ ಮತದಾನ ಮಾಡಿದ್ದರು. ರಾತ್ರಿ ದಿಢೀರ್ ಅಸ್ವಸ್ಥರಾಗಿದ್ದರೆನ್ನಲಾಗಿದ್ದು, ತಕ್ಷಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಮೃತರು ಪತ್ನಿ, ಪುತ್ರನನ್ನು ಅಗಲಿದ್ದಾರೆ.