ಗ್ರಾಮಗಳಿಗೆ ದಾಳಿಯಿಟ್ಟ ಒಂಟಿ ಸಲಗ: 2 ಎಮ್ಮೆ ಸಾವು, ಜಾನುವಾರುಗಳಿಗೆ ಗಾಯ, ಬೈಕ್ ಜಖಂ

6 harohalli ane daali 1g
Published on

ಕನಕಪುರ/ಹಾರೋಹಳ್ಳಿ: ಒಂಟಿ ಸಲಗವೊಂದು ಹಲವು ಗ್ರಾಮಗಳಲ್ಲಿ ಪುಂಡಾಟ ನಡೆಸಿ ಎರಡು ಎಮ್ಮೆಗಳನ್ನು ಸಾಯಿಸಿದ್ದಲ್ಲದೆ, ಜಾನುವಾರುಗಳನ್ನು ಗಾಯಗೊಳಿಸಿ, ಬೈಕ್, ಕೊಟ್ಟಿಗೆಗೆ ಹಾನಿ ಮಾಡಿದೆ. ಕನಕಪುರ ತಾಲೂಕಿನ ಸಾತನೂರು ಹೋಬಳಿಯ ಹಲವಾರು ಗ್ರಾಮಗಳಲ್ಲಿ ಈ ಆನೆ ದಾಳಿ ನಡೆಸಿದ್ದು ಲಕ್ಷಾಂತರ ರೂ. ನಷ್ಟ ಉಂಟಾಗಿದೆ.

ಹಲಗೂರಿನ ಬಸವನಬೆಟ್ಟ ಕಾಡಿನಿಂದ ಶುಕ್ರವಾರ ಬೆಳಗ್ಗೆ ಹಲಗೂರಿನ ಮಲ್ಲೇಗೌಡನದೊಡ್ಡಿ ಕಡೆಯಿಂದ ಬಂದ ಬಂದ ಒಂಟಿಸಲಗ ದೇವೀರಳ್ಳಿಯ ಬಳಿ ಬೈಕೊಂದನ್ನು ಜಖಂಗೊಳಿಸಿದೆ. ನಂತರ ರಾಯರದೊಡ್ಡಿ, ದೊಂಬರದೊಡ್ಡಿ ಮಾರ್ಗವಾಗಿ ಸಾತನೂರು ಹೋಬಳಿಯ ಸಾಸಲಾಪುರ ಕಡೆಗೆ ನುಗ್ಗಿ ಗ್ರಾಮದ ಮರೀಗೌಡ ಎನ್ನುವವರಿಗೆ ಸೇರಿದ ಸಾವಿರಾರು ರೂ. ಬೆಲೆ ಬಾಳುವ ಎರಡು ಸೀಮೆಹಸುಗಳನ್ನು ತುಳಿದು ಗಾಯಗೊಳಿಸಿದೆ. ಅದೇ ಗ್ರಾಮದ ಸ್ವಾಮಿ ಎನ್ನುವವರ ದನದ ಕೊಟ್ಟಿಗೆಗೆ ಹಾನಿ ಮಾಡಿದೆ.

ಅಲ್ಲಿಂದ ಮುಂದೆ ಸಾಗಿದ ಆನೆ ಹಲಸಿನಮರದೊಡ್ಡಿಗೆ ಹೋಗಿ ಕೆಂಚಯ್ಯ ಎನ್ನುವವರ ಎರಡು ಎಮ್ಮೆಗಳನ್ನು ತುಳಿದು ಸಾಯಿಸಿದೆ. ಅದೇ ಗ್ರಾಮದ ಜಯರಾಮು ಎಂಬುವವರ ನಾಟಿ ಹಳ್ಳಿಕಾರ್ ಹಸುವಿನ ತೊಡೆಯನ್ನು ತುಳಿದಿದ್ದರಿಂದ ಮೂಳೆ ಮುರಿದಿದೆ. ಕರಿತಿಮ್ಮಣ್ಣ ಎನ್ನುವವರ ಎಮ್ಮೆಯನ್ನು ತುಳಿದು ಗಾಯಗೊಳಿಸಿದೆ. ಲಕ್ಷಾಂತರ ರೂ. ಬೆಲೆ ಬಾಳುವ ಜಾನುವಾರುಗಳನ್ನು ಗಾಯಗೊಳಿಸಿ, ಕೆಲವನ್ನು ಗಾಯಗೊಳಿಸಿ ಅಲ್ಲಿಂದ ಕಬ್ಬಾಳು ಅರಣ್ಯ ಪ್ರದೇಶದತ್ತ ಹೋಗಿದೆ. ಅರಣ್ಯ ಇಲಾಖೆ ಅಧಿಕಾರಿಗಳಾದ ಆರ್‌ಎ್ಒ ಕುಮಾರ್, ರಾಜು ಕಾಂತರಾಜು ರಿಜ್ವಾನ್ ಮತ್ತಿತರರು ಆನೆಯನ್ನು ಕಾಡಿಗೆ ಓಡಿಸಲು ಸಾಹಸ ಪಟ್ಟರು.

ಅರಣ್ಯಾಧಿಕಾರಿಗಳಿಗೆ ಗ್ರಾಮಸ್ಥರ ದಿಗ್ಬಂಧನ: ಕಾಡಂಚಿನ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಉಪಟಳವನ್ನು ತಡೆಗಟ್ಟಲು ಅರಣ್ಯ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ಮತ್ತು ಜಾನುವಾರುಗಳ ಹಾಗೂ ಹಾನಿಗೀಡಾದ ಬೈಕ್ ಮಾಲೀಕರಿಗೆ ಪರಿಹಾರ ನೀಡಬೇಕೆಂದು ಸಾಸಲಪುರ ಗ್ರಾಮಸ್ಥರು ಮತ್ತು ರೈತರು ಆನೆ ಓಡಿಸಲು ಬಂದಿದ್ದ ಅರಣ್ಯ ಅಧಿಕಾರಿಗಳಿಗೆ ದಿಗ್ಬಂಧನ ಹಾಕಿದರು. ಮೇಲಧಿಕಾರಿಗಳು ಸ್ಥಳಕ್ಕೆ ಬಂದು ಆಗಿರುವ ನಷ್ಟ ತುಂಬಿಕೊಡುವ ತನಕ ನಿಮ್ಮನ್ನು ಇಲ್ಲಿಂದ ಬಿಡುವುದಿಲ್ಲ ಎಂದು ಪಟ್ಟಹಿಡಿದರು. ಸುತ್ತಮುತ್ತಲ ಗ್ರಾಮಸ್ಥರು ಜಮಾಯಿಸಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಬಾಳೆಗಿಡ ನಾಶ: ಕೈಲಾಂಚ: ಹೋಬಳಿಯ ತುಂಬೇನಹಳ್ಳಿ ಗ್ರಾಮದಲ್ಲಿ ಆನೆಗಳ ದಾಳಿ ಮುಂದುವರಿದಿದ್ದು ರೈತರ ಅಪಾರ ಪ್ರಮಾಣದ ಬಾಳೆ ತೋಟ, ಮಾವಿನ ಮರಗಳು ನಾಶವಾಗಿವೆ. ಕಳೆದ ಒಂದು ವಾರದಿಂದ ತುಂಬೇನಹಳ್ಳಿ ಸಮೀಪದ ಹಂದಿಗೊಂದಿ ಅರಣ್ಯ ಪ್ರದೇಶದ ಸೀಗೆಹುದಿ ಅರಣ್ಯದಲ್ಲಿ ಬೀಡುಬಿಟ್ಟಿದ್ದ 4 ಆನೆಗಳು ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರತಿನಿತ್ಯ ರೈತರು ಬೆಳೆದ ಮಾವಿನಮರ, ತೆಂಗಿನ ಮರ, ರಾಗಿ ಮೆದೆ, ಜೋಳದ ಫಸಲನ್ನು ನಾಶಪಡಿಸುತ್ತಿದ್ದು ಅಕ್ಕಪಕ್ಕದ ಗ್ರಾಮಗಳ ಜನರಲ್ಲಿ ಆತಂಕ ಸೃಷ್ಟಿಸಿದೆ. ಗುರುವಾರ ರಾತ್ರಿ ಅರಣ್ಯದಿಂದ ಬಂದ ಆನೆಗಳು ತುಂಬೇನಹಳ್ಳಿ ಗ್ರಾಮದ ಬೈರೇಗೌಡ ಎಂಬುವರ 2 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಸಲು ಬಿಟ್ಟಿದ್ದ ಬಾಳೆಗಿಡಗಳನ್ನು ಸಂಪೂರ್ಣ ನಾಶಪಡಿಸಿವೆ. ಹಾಗೂ ಕೃಷ್ಣಪ್ಪ, ಶಿವಪ್ಪ, ರಾಮಣ್ಣ ಎಂಬುವರಿಗೆ ಸೇರಿದ್ದ ಮಾವಿನ ಮರಗಳನ್ನು ನಾಶಪಡಿಸಿ ಮತ್ತೆ ಅರಣ್ಯ ಸೇರಿಕೊಂಡಿವೆ. ಆನೆಗಳು ಮತ್ತೆ ಮತ್ತೆ ಬಂದು ರೈತರ ಫಸಲನ್ನು ನಾಶಪಡಿಸುತ್ತಿವೆ. ಬೆಳಗಿನ ವೇಳೆಯಲ್ಲಿ ಕಾಡಿನಿಂದ ಬಂದು ಭಯ ಹುಟ್ಟಿಸಿವೆ. ಕೂಡಲೇ ಆಗಿರುವ ನಷ್ಟಕ್ಕೆ ವ್ಶೆಜ್ಞಾನಿಕ ಪರಿಹಾರ ನೀಡಬೇಕು. ಆನೆಗಳನ್ನು ಸ್ವಸ್ಥಾನಕ್ಕೆ ಸೇರಿಸಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಅರಣ್ಯಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಎಸಿಎಫ್ ಎಂ. ರಾಮಕೃಷ್ಣಪ್ಪ, ರಾಮನಗರ ವಲಯ ಅರಣ್ಯಾಧಿಕಾರಿ ಎ.ಎಲ್. ಧಾಳೇಶ್, ಉಪ ವಲಯ ಅರಣ್ಯಾಧಿಕಾರಿ ಕೆ. ರಾಜು ಮತ್ತು ಸಿಬ್ಬಂದಿ, ರೈತರಿಗೆ ಆಗಿರುವ ನಷ್ಟದ ಬಗ್ಗೆ ಮಾಹಿತಿ ಕಲೆಹಾಕಿ ಇಲಾಖೆಯಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು. ಆನೆಗಳನ್ನು ಅವುಗಳ ಸ್ವಸ್ಥಾನಕ್ಕೆ ಸೇರಿಸಲಾಗುತ್ತದೆ ಎಂದು ತಿಳಿಸಿದರು.

ಆನೆಗಳ ಚಲನವಲನದ ಮೇಲೆ ನಿರಂತರವಾಗಿ ನಿಗಾ ಇಡಲಾಗಿದೆ. ಆದರೆ ಆನೆಗಳು ಅವುಗಳ ಸ್ವಸ್ಥಾನ ಸೇರದೆ ವಾಪಸ್ ಬರುತ್ತಿರುವುದು ಕಾರ್ಯಾಚರಣೆಗೆ ತೊಡಕಾಗಿದೆ. ಇಂದು ರಾತ್ರಿಯೇ ವಿಶೇಷ ಕಾರ್ಯಾಚರಣೆ ನಡೆಸಿ ಅವುಗಳನ್ನು ಸ್ವಸ್ಥಾನಕ್ಕೆ ಸೇರಿಸಲಾಗುವುದು. -ಎಸ್.ಎನ್. ಹೆಗ್ಗಡೆ ಉಪ ಅರಣ್ಯ ಸಂರಕ್ಷಣಾಧಿಕಾರಿ, ರಾಮನಗರ ತುಂಬೇನಹಳ್ಳಿ ಆಸು ಪಾಸಿನಲ್ಲೇ ಆನೆಗಳು ಬಿಡಾರ ಹೂಡಿ ರೈತರಿಗೆ ನಷ್ಟ ಉಂಟು ಮಾಡುತ್ತಿವೆ ಹಾಗೂ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿವೆ. ಆನೆಗಳನ್ನು ಕಾಡಿಗೆ ಅಟ್ಟುವಲ್ಲಿ ಅರಣ್ಯ ಇಲಾಖೆ ವಿಲವಾಗಿದೆ. -ಬೈರೇಗೌಡ ರೈತ, ತುಂಬೇನಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net