ಉಡುಪಿ ನಾಲ್ಕೂರಲ್ಲಿ ಗ್ರಾಮ ವಾಸ್ತವ್ಯ, ಜನರ ಸಮಸ್ಯೆಗೆ ಕಿವಿಯಾದ ಡಿಸಿ

grama vathsavya new
Published on

ಉಡುಪಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಜಿಲ್ಲಾಧಿಕಾರಿ ನಡೆ ಗ್ರಾಮದ ಕಡೆ’ ಪೈಲಟ್ ಯೋಜನೆ ಉಡುಪಿ ಜಿಲ್ಲೆಯಲ್ಲಿ ಶನಿವಾರ ಜಾರಿಗೆ ಬಂದಿದೆ. ಜಿಲ್ಲಾಧಿಕಾರಿ ಜಿ.ಜಗದೀಶ್ 15ನೇ ನಾಲ್ಕೂರು ಗ್ರಾಮಕ್ಕೆ ಭೇಟಿ ನೀಡಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಮತ್ತು ಅಧಿಕಾರಿಗಳನ್ನು ಚೆಂಡೆ ನಾದದೊಂದಿಗೆ ಗ್ರಾಮದ ಮಹಿಳೆಯರು ಪೂರ್ಣಕುಂಭ ಸ್ವಾಗತದೊಂದಿಗೆ ಗ್ರಾಮದ ಸಭಾಂಗಣಕ್ಕೆ ಬರ ಮಾಡಿಕೊಂಡರು.

ಸಭಾಂಗಣಕ್ಕೆ ಆಗಮಿಸುವ ಮೊದಲು ಸ್ಥಳೀಯ ನಾಲ್ಕೂರು ಸರ್ಕಾರಿ ಪ್ರೌಢಶಾಲೆಗೆ ತೆರಳಿ ಗಿಡ ನೆಟ್ಟ ಜಿಲ್ಲಾಧಿಕಾರಿ, ವಿದ್ಯಾರ್ಥಿಗಳ ಜತೆ ಒಂದು ಗಂಟೆ ಸಂವಾದ ನಡೆಸಿದರು. ಸಾಮಾನ್ಯ ಜ್ಞಾನ ಮತ್ತು ವಿದ್ಯಾರ್ಥಿಗಳು ಮುಂದೆ ಏನಾಗ ಬಯಸುತ್ತೀರಿ? ಎಂದು ಪ್ರಶ್ನೆಗಳನ್ನು ಕೇಳಿದರು. ವಿದ್ಯಾರ್ಥಿಗಳು ಉತ್ಸಾಹದಿಂದ ಅಭಿಪ್ರಾಯ ಹಂಚಿಕೊಂಡರು. ಸಭಾಂಗಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಜಮಾಯಿಸಿದ್ದರು. ಜಿಲ್ಲಾಧಿಕಾರಿಗೆ 157 ಅರ್ಜಿಗಳು ಸಲ್ಲಿಕೆಯಾಗಿದ್ದವು. ಗ್ರಾಪಂ ಮತ್ತು ಕಂದಾಯ ಸೇವೆ ಸಂಬಂಧಿಸಿ ಪ್ರತ್ಯೇಕ ಅರ್ಜಿ ಸ್ವೀಕೃತ ಕೇಂದ್ರವನ್ನು ಸಭಾಂಗಣದ ಹೊರಗೆ ತೆರೆಯಲಾಗಿತ್ತು.

ಕಂದಾಯ ಸಂಬಂಧಿತ ಅಹವಾಲುಗಳೇ ಹೆಚ್ಚು

ಕಂದಾಯ ಇಲಾಖೆಗೆ ಸಂಬಂಧಿಸಿ, ಭೂ ದಾಖಲೆಗಳಿಗೆ ಸಂಬಂಧಿಸಿದ ಅಹವಾಲುಗಳು ಸಲ್ಲಿಕೆಯಾದವು. ಜತೆಗೆ ಮೆಸ್ಕಾಂ, ಕುಡಿಯುವ ನೀರು, ಪಿಂಚಣಿ, ಶಾಲೆ ಮಕ್ಕಳ ಬಸ್ ಪ್ರಯಾಣ, ಅಕ್ರಮ ಗಣಿಗಾರಿಕೆ, ಕ್ರಷರ್, ಪಡಿತರ ಚೀಟಿ, ಪಿಂಚಣಿ ಸಮಸ್ಯೆ ಬಗ್ಗೆ ಸಾರ್ವಜನಿಕರು ಹೇಳಿಕೊಂಡರು. ಮಾಜಿ ಯೋಧ ಶ್ರೀಧರ ನಾಯ್ಕ ಎಂಬುವರು, ಸರ್ಕಾರ ತನಗೆ ಎಂಟು ಎಕರೆ ಭೂಮಿ ನೀಡಿದ್ದು, ಅದು ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಾದ್ದರಿಂದ ಆರ್‌ಟಿಸಿ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಆರ್‌ಟಿಸಿ-ಆಕಾರ ಬಂದ್ ತಾಳೆಯಾಗದ ಪ್ರಕರಣ, ಆರ್‌ಟಿಸಿ ತಿದ್ದುಪಡಿ ಸಮಸ್ಯೆಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಿದರು. ಕುಡಿಯುವ ನೀರು ಕುರಿತಾದ ಏಳೆಂಟು ಅರ್ಜಿಗಳನ್ನು ಜಿಲ್ಲಾಧಿಕಾರಿ ಪರಿಶೀಲಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಿ

ನಂಚಾರು ಗ್ರಾಮದ ವಿದ್ಯಾರ್ಥಿಗಳು 5 ಕಿ.ಮೀ.ನಡೆದುಕೊಂಡೇ ಶಾಲೆಗೆ ಹೋಗಬೇಕಿದೆ. ಈ ಭಾಗದ ಹೆಚ್ಚಿನ ವಿದ್ಯಾರ್ಥಿಗಳು ಉಡುಪಿ, ಬ್ರಹ್ಮಾವರ ಭಾಗಕ್ಕೆ ಶಾಲೆ, ಕಾಲೇಜುಗಳಿಗೆ ತೆರಳುತ್ತಾರೆ. ನಂಚಾರಿನಿಂದ ಆವರ್ಸೆ, ನಂಚಾರಿನಿಂದ ಮದ್ದೂರುವರೆಗಿನ ಮಾರ್ಗದಲ್ಲಿ ಸರ್ಕಾರಿ ಬಸ್ ಓಡಿಸಿ ವಿದ್ಯಾರ್ಥಿಗಳಿಗೆ ನೆರವಾಗುವಂತೆ ಮನವಿ ಮಾಡಿದರು. ಕೆಎಸ್‌ಆರ್‌ಟಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ಡೀಮ್ಡ್ ಫಾರೆಸ್ಟ್‌ನಿಂದ ಅಭಿವೃದ್ಧಿಗೆ ಹಿನ್ನಡೆ

ನಾಲ್ಕೂರು, ನಂಚಾರು ಭಾಗದಲ್ಲಿ 2,000 ಎಕರೆ ಡೀಮ್ಡ್ ಫಾರೆಸ್ಟ್ ಇರುವುದರಿಂದ 94ಸಿ, 57 ಅಡಿಯಲ್ಲಿ 200ಕ್ಕೂ ಅಧಿಕ ಮಂದಿಗೆ ನಿವೇಶನ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಜಿ.ಪಂ ಸದಸ್ಯ ಮಾರಾಳಿ ಪ್ರತಾಪ್ ಹೆಗ್ಡೆ ಜಿಲ್ಲಾಧಿಕಾರಿಗೆ ತಿಳಿಸಿದರು. ಅಕ್ರಮ- ಸಕ್ರಮ ಹಕ್ಕುಪತ್ರ ನೀಡಲಾಗುತ್ತಿಲ್ಲ. ಗ್ರಾಮದಲ್ಲಿ 600-700 ಎಕರೆ ಮೀಸಲು ಅರಣ್ಯ ಅಂತಿಮ ನೋಟಿಫಿಕೇಶನ್ ಆಗಿಲ್ಲ. ಇದರಿಂದ ಆ ಭಾಗದ ಜನರಿಗೆ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತಿಲ್ಲ ಎಂದರು.

ಕಜ್ಕೆ ಕುಡುಬಿ ಸಮುದಾಯ ಭೇಟಿ

ನಾಲ್ಕೂರು ಗ್ರಾಪಂ ವ್ಯಾಪ್ತಿಯ 22 ಎಕರೆ ಪ್ರದೇಶದಲ್ಲಿ ವಾಸ ಇರುವ ಕಜ್ಕೆ ಗ್ರಾಮದ ಕುಡುಬಿ ಸಮುದಾಯದ 37 ಕುಟುಂಬಗಳ ಸಮಸ್ಯೆಯನ್ನು ಜಿಲ್ಲಾಧಿಕಾರಿ ಆಲಿಸಿದರು. ಆರ್‌ಟಿಸಿ, ಹಕ್ಕುಪತ್ರ ನೀಡುವಂತೆ ಅಲ್ಲಿನ ವಾಸಿಗಳು ಡಿಸಿಗೆ ಬೇಡಿಕೆ ಇಟ್ಟರು. ಸಮುದಾಯದ ತಲೆಮಾರಿನ ಪ್ರಮುಖರ ಹೆಸರಲ್ಲಿ ಜಮೀನು ಇದ್ದು, ಇದೀಗ ಸಾಕಷ್ಟು ಕುಟುಂಬಗಳು ವಿಂಗಡಣೆಯಾಗಿ ವಾಸಿಸುತ್ತಿವೆ. ಇದನ್ನು ಪರಿಶೀಲಿಸಿ ದಾಖಲಾತಿ ಮಾಡಿಕೊಡುವಂತೆ ವಿನಂತಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಬಾಯಿಪಾಲು ಹೇಳಿಕೆಯನ್ನು ದಾಖಲಾತಿ ಮಾಡಲು, ವಂಶವೃಕ್ಷ ತಯಾರಿಸಿ, ಸಮುದಾಯದ ಹಿರಿಯರು, ಕಂದಾಯ ಅಧಿಕಾರಿಗಳ ಸಮ್ಮುಖದಲ್ಲಿ ಸರ್ವೇ ಮಾಡಿಸೋಣ. ಈ ಸಮಸ್ಯೆಯನ್ನು ಬಗೆಹರಿಸಿ ಆರ್‌ಟಿಸಿ ನೀಡಲು ಸಾಧ್ಯವಿದೆ ಎಂದು ಭರವಸೆ ನೀಡಿದರು.

ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪವಿಭಾಗಾಧಿಕಾರಿ ಕೆ.ರಾಜು, ಬ್ರಹ್ಮಾವರ ತಹಸೀಲ್ದಾರ್ ಕಿರಣ್ ಗೋರಯ್ಯ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಇಬ್ರಾಹಿಂ ಪುರ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೀತಾರಾಮ್, ಗ್ರಾ ಲೆಕ್ಕಾಧಿಕಾರಿ ರಾಘವೇಂದ್ರ, ಕಂದಾಯ ನಿರೀಕ್ಷಕರಾದ ಲಕ್ಷ್ಮೀನಾರಯಣ ಭಟ್, ಚೆಲುವರಾಜು ಇದ್ದರು.

ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಯೋಜನೆ ರಾಜ್ಯದಲ್ಲೆ ಮೊದಲ ಬಾರಿಗೆ ಉಡುಪಿಯಲ್ಲಿ ಆರಂಭಗೊಂಡಿದೆ. ವಾರದ ಮೊದಲು ಅರ್ಜಿ ತೆಗೆದುಕೊಂಡು ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವುದು ಈ ಯೋಜನೆ ನಿಯಮ. ಇದು ಮೊದಲ ಕಾರ್ಯಕ್ರಮವಾದ್ದರಿಂದ ಸಾಧ್ಯವಾಗಿಲ್ಲ. ಹಾಗಾಗಿ ಕಂದಾಯ ಸಂಬಂಧಿತ ಹೆಚ್ಚಿನ ಸಮಸ್ಯೆಗಳನ್ನು ಸ್ಥಳದಲ್ಲೆ ಬಗೆಹರಿಸಲು ಸಾಧ್ಯವಾಗಿಲ್ಲ. ಡೀಮ್ಡ್ ಫಾರೆಸ್ಟ್, ಹಕ್ಕುಪತ್ರ ಸಂಬಂಧಿಸಿ ಸರ್ಕಾರ ಹಂತದಲ್ಲಿ ತೀರ್ಮಾನವಾಗಬೇಕಿದ್ದು, ಶೀಘ್ರ ಈ ಸಮಸ್ಯೆ ಬಗೆಹರಿಯಲಿದೆ. ಮೀಸಲು ಅರಣ್ಯದಲ್ಲಿ ರಸ್ತೆ ಅಭಿವೃದ್ಧಿ ಡಿಎಫ್‌ಒ ಜತೆಗೆ ಚರ್ಚಿಸಲಾಗುವುದು. 94ಸಿ, 57 ಸಾಕಷ್ಟು ಅರ್ಜಿ ಬಾಕಿ ಇದ್ದು, ಶೀಘ್ರ ಕಡಿತ ರಚಿಸಲಾಗುವುದು. ಅಕ್ರಮ ಗಣಿಗಾರಿಕೆ ಇದ್ದಲ್ಲಿ, ನಿಯಮ ಮೀರಿ ಸ್ಫೋಟಕ ಬಳಕೆ ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು.

- ಜಿ.ಜಗದೀಶ್, ಉಡುಪಿ ಜಿಲ್ಲಾಧಿಕಾರಿ

ಗಣಿಗಾರಿಕೆ ಅನುಮತಿ ನೀಡಬೇಡಿ

ನಾಲ್ಕೂರು ಗ್ರಾ.ಪಂ ವ್ಯಾಪ್ತಿಯಲ್ಲಿ ನಂಚಾರು, ನಾಲ್ಕೂರು ಗ್ರಾಮಗಳಲ್ಲಿ 2 ಜಲ್ಲಿ ಕ್ರಷರ್ ಇದ್ದು, ಹಲವಾರು ಅಕ್ರಮ ಕ್ವಾರಿಗಳಿವೆ. ಶಿಲೆಕಲ್ಲು ಸ್ಫೋಟಗೊಳಿಸಲು ಜಿಲೆಟಿನ್ ಕಡ್ಡಿ ವ್ಯಾಪಕವಾಗಿ ಬಳಸುತ್ತಿದ್ದಾರೆ. ಇದು ಪರಿಸರ ಮತ್ತು ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಗ್ರಾಮದಲ್ಲಿ ಮತ್ತೆ ಮೂರು ಕ್ರಷರ್ ಆರಂಭಿಸಲು ಸಿದ್ಧತೆ ನಡೆಯುತ್ತಿದ್ದು, ಈ ಬಗ್ಗೆ ಅನುಮತಿ ನೀಡದಂತೆ ನೊಂದ ಗ್ರಾಮಸ್ಥರು ಡಿಸಿಗೆ ಮನವಿ ಸಲ್ಲಿಸಿದರು.

ಮುಟ್ಟಾಳೆ ಖರೀದಿಸಿ ನೂರು ರೂ. ನೀಡಿದರು

ಕೊರಗ ಮುಖಂಡ ಸುಕ್ರ ಕೊರಗ ತಾವೇ ತಯಾರಿಸಿದ ಅಡಕೆ ಮುಟ್ಟಾಳೆಯನ್ನು ತೋರಿಸಿದಾಗ ಜಿಲ್ಲಾಧಿಕಾರಿ ಮುಟ್ಟಾಳೆಯನ್ನು ಖರೀದಿಸಿ ನೂರು ರೂ. ನೀಡಿದರು. ಬಳಿಕ ನಂಚಾರು ಗ್ರಾಮದ ಹೆಸ್ಕುಂದ ದೂಳಿನ ಮನೆ, ಬೊಂಬೆ ನಾಯ್ಕರ ಮನೆಗಳಿಗೆ ತೆರಳಿ ಜಾಗದ ಸಮಸ್ಯೆ ಪರಿಹರಿಸುವ ಬಗ್ಗೆ ಭರವಸೆ ನೀಡಿದರು. ಸ್ಥಳೀಯರಾದ ಮುರಳೀಧರ ಹೊಳ್ಳ ಅವರು, ಗ್ರಾಮದಲ್ಲಿ ವಿದ್ಯುತ್ ಲೋ ವೋಲ್ಟೇಜ್ ಸಮಸ್ಯೆ, ಕಾಡು ಪ್ರಾಣಿ ಹಾವಳಿ ಬಗ್ಗೆ ತಿಳಿಸಿದರು. ಏತ ನೀರಾವರಿ ಯೋಜನೆಯ ನೀರು ಸಿಗುತ್ತಿಲ್ಲ ಎಂದು ಸಮಸ್ಯೆ ವಿವರಿಸಿದರು. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಡಿಸಿ ಹೇಳಿದರು. ಸಾಯಂಕಾಲ 5.20ಕ್ಕೆ ಜಿಲ್ಲಾಧಿಕಾರಿಗಳ ಕಾರ್ಯಕ್ರಮ ಮುಕ್ತಾಯಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net