ಸೌಲಭ್ಯ ಪಡೆಯಲು ಅರ್ಥಪೂರ್ಣ ಹೋರಾಟ ನಡೆಸಬೇಕು

26.npk-6
Published on

 ಶಾಸಕ ಡಾ. ಮಂತರ್ ಗೌಡ ಸಲಹೆ-  * ಹೊದ್ದೂರು ಗ್ರಾಪಂ ಆವರಣದಲ್ಲಿ ಗ್ರಾಮಸಭೆ

 ನಾಪೋಕ್ಲು : ಗ್ರಾಮಸ್ಥರು ಸೌಲಭ್ಯ ಪಡೆಯಲು ಅರ್ಥಪೂರ್ಣ ಹೋರಾಟ ನಡೆಸಬೇಕು ಎಂದು ಶಾಸಕ ಡಾ. ಮಂತರ್ ಗೌಡ ಹೇಳಿದರು.

ಸಮೀಪದ ಹೊದ್ದೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ವತಿಯಿಂದ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಗ್ರಾಮ ಸಭೆ ಹಾಗೂ ನಿವೇಶನಗಳ ಹಕ್ಕು ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದರು. ಗ್ರಾಮದ ಜನರು ತಮ್ಮ ಅವಶ್ಯಕತೆಗಳಿಗಾಗಿ ಪ್ರತಿಭಟನೆ, ಹೋರಾಟ ನಡೆಸುವುದು ಸಾಮಾನ್ಯ. ಗ್ರಾಮದ ಸಮಸ್ಯೆಗಳನ್ನು ಜನಪ್ರತಿನಿಧಿಗಳ ಗಮನಕ್ಕೆ ತಂದರೆ ಸೂಕ್ತವಾಗಿ ಪರಿಹರಿಸಲಾಗುವುದು. ಅದು ಬಿಟ್ಟು ಸ್ಥಳೀಯ ನಿವಾಸಿಗಳು ಚುನಾವಣೆ ಬಹಿಷ್ಕಾರ, ರಸ್ತೆ ಸಂಚಾರ ತಡೆ ಇತ್ಯಾದಿ ಮಾಡಬಾರದು ಎಂದರು.

ಗ್ರಾಮ ಮಟ್ಟದ ಸಮಸ್ಯೆಗಳನ್ನು ಅಧಿಕಾರಿಗಳು ಪರಿಹರಿಸುತ್ತಾರೆ .ಅಧಿಕಾರಿಗಳಿಗೆ ಇಚ್ಛಾ ಶಕ್ತಿ ಇದ್ದಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಬೇಗ ದಾರಿ ದೊರಕುತ್ತದೆ. ಅಧಿಕಾರಿ ವರ್ಗದವರು ಕಾಳಜಿಯಿಂದ ಜನರ ಕೆಲಸವನ್ನು ನಿರ್ವಹಿಸಬೇಖು. ಆಗ ಸ್ಥಳೀಯ ಪಂಚಾಯಿತಿ ಹಾಗೂ ಜನಪ್ರತಿನಿಧಿಗಳ ಬಗ್ಗೆ ಉತ್ತಮ ಅಭಿಪ್ರಾಯ ಮೂಡುತ್ತದೆ ಎಂದು ಮಂಥರ್ ಗೌಡ ಹೇಳಿದರು. ನಿವೇಶನ ರಹಿತರಿಗೆ ಕಂದಾಯ ಇಲಾಖೆಯ ಮೂಲಕ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದ ಅವರು ಯಾವುದೇ ಕಾರಣಕ್ಕೂ ಯಾರಿಗೂ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳಬೇಡಿ. ಯಾರಾದರೂ ಲಂಚದ ಬೇಡಿಕೆ ಇಟ್ಟರೆ ನನ್ನ ಗಮನಕ್ಕೆ ತನ್ನಿ. ಸೂಕ್ತ ಕ್ರಮ ವಹಿಸಿ ಕೆಲಸ ಮಾಡಿಸಿಕೊಡುವೆ ಎಂದು ಡಾ. ಮಂಥರ್ ಗೌಡ ಭರವಸೆ ನೀಡಿದರು.

ಅನುದಾನ ದೊರಕಿದೆ: ಗ್ರಾಪಂ ಪಂಚಾಯಿತಿ ಅಧ್ಯಕ್ಷ ಎಚ್.ಎ. ಹಂಸ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ ಶಾಸಕರು ಸಾಕಷ್ಟುವಿಶೇಷ ಅನುದಾನಗಳನ್ನು ನೀಡಿದ್ದಾರೆ .ಇದರಿಂದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗಿದೆ. ಇನ್ನೂ ಹೆಚ್ಚಿನ ಅನುದಾನವನ್ನು ಅವರು ಮುಂಬರುವ ದಿನಗಳಲ್ಲಿ ನೀಡಲಿದ್ದಾರೆ ಎಂದರು. ನೋಟಿಸ್ ನೀಡಿ: ಸಭೆಗೆ ಗೈರು ಹಾಜರಾದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಶಾಸಕ ಡಾ.ಮಂತರ್ ಗೌಡ ಸೂಚಿಸಿದರು. ಪಾಲೆಮಾಡು ಅಂಗನವಾಡಿ ಕಾರ್ಯಕರ್ತೆ ನಿರಂತರ ಗೈರು ಹಾಜರಾಗಿದ್ದಾರೆ. ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಶಾಸಕರು ಸಿಡಿಪಿಒಗೆ ನಿರ್ದೇಶನ ನೀಡಿದರು.

ಪುನರ್ವಸತಿ ಯೋಜನೆಯಡಿ ಫಲಾನುಭವಿ ಸಾವಿತ್ರಿ ಹಾಗೂ ಬಿ.ಡಿ. ರತಿ ಅವರಿಗೆ ರಾಜೀವ್ ಗಾಂಧಿ ವಸತಿ ನಿಗಮದಿಂದ ಅನುದಾನ ಬಿಡುಗಡೆಯಾಗದಿರುವ ಬಗ್ಗೆ ಪರಿಶೀಲಿಸಿ ವರದಿ ನೀಡಿ ಎಂದು ಶಾಸಕರು ತಾಪಂ ಇಒ ಶೇಖರ್‌ಗೆ ಸೂಚನೆ ನೀಡಿದರು. ಗ್ರಾಮಸ್ಥರಾದ ಅಶ್ವಿನಿ ವಿದ್ಯುತ್ ಕಡಿತ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದಾಗ ಮೂರ್ನಾಡು ಸೆಸ್ಕ್ ಕಿರಿಯ ಇಂಜಿನಿಯರ್ ಪ್ರತಿಕ್ರಿಯಿಸಿ, ವಿದ್ಯುತ್ ಕಡಿತಗೊಳಿಸದಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಕಂದಾಯ ಇಲಾಖೆಯ ಮೂಲಕ ಶಾಸಕರು ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಿದರು. ಆಯ್ಕೆ: ನಿವೇಶನ ಯೋಜನೆಯಡಿ ಹಕ್ಕುಪತ್ರ ನೀಡಲು 61 ಫಲಾನುಭವಿಗಳು, ವಸತಿ ಯೋಜನೆಯಡಿ 128, ವೈಯಕ್ತಿಕ ಶೌಚಗೃಹ ನಿರ್ಮಾಣಕ್ಕೆ 35 ಫಲಾನುಭವಿಗಳನ್ನು ಗ್ರಾಮ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಮಹಾತ್ಮಾ ಗಾಂಧಿ ನರೇಗಾ ಯೋಜನೆ ಕ್ರಿಯಾಯೋಜನೆಗೆ ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳಲಾಯಿತು.

ತಹಸೀಲ್ದಾರ್ ಪ್ರವೀಣ್, ತಾಪಂ ಇಒ ಶೇಖರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಘು, ಗ್ರಾಮ ಉಪಾಧ್ಯಕ್ಷೆ ಅನುರಾಧಾ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕೆ. ಮೊಣ್ಣಪ್ಪ, ನೀರು ಮತ್ತು ನೈರ್ಮಲ್ಯ ಸಮಿತಿ ಅಧ್ಯಕ್ಷ ಹಮೀದ್, ಗ್ರಾಪಂ ಸದಸ್ಯರಾದ ಚೌರೀರ ನಾಣಯ್ಯ, ಕುಸುಮಾವತಿ, ಅನಿತಾ, ಹಾಗೂ ವಿವಿಧ ಇಲಾಖೆಗಳ ಅಧಿಕಾರಿ ಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net