

ಯಳಂದೂರು : ತಾಲೂಕಿನ ಗಣಿಗನೂರು- ಕೃಷ್ಣಾಪುರ ರಸ್ತೆ ಅಭಿವೃದ್ಧಿಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು. ತಾಲೂಕಿನ ಯರಿಯೂರು ಗ್ರಾಮದ ವೀರಭದ್ರೇಶ್ವರ ದೇಗುಲದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು. ಸಮಸ್ಯೆ ಪರಿಹಾರಕ್ಕೆ ಮೊದಲ ಆದ್ಯತೆ ನೀಡುತ್ತೇನೆ. ಗಣಿಗನೂರು, ಯರಿಯೂರು ಗ್ರಾಮದ ಚರಂಡಿ ಸಮಸ್ಯೆಯನ್ನು ಸ್ಥಳೀಯ ಮುಖಂಡರೇ ಬಗೆಹರಿಸುವಂತೆ ಸಲಹೆ ನೀಡುವೆ. ಸರ್ವೇ ನಂ. 204, 205 ಮತ್ತು 206 ರ ವ್ಯಾಪ್ತಿಗೆ ಒಳಪಡುವ 7 ಎಕರೆ ಜಮೀನನ್ನು ಯಳಂದೂರು ಪಟ್ಟಣ ಪಂಚಾಯಿತಿಗೆ ಸೇರಿಸಿಕೊಂಡರೆ ಈ ವ್ಯಾಪ್ತಿಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಭೂಮಿಯ ಮೌಲ್ಯವೂ ಹೆಚ್ಚುತ್ತದೆ ಎಂದು ಸಲಹೆ ನೀಡಿದರು.
ಈ ಸಂಬಂಧ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು. ಸಭೆಯಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಯರಿಯೂರು, ಚಾಮಲಾಪುರ, ಗಣಿಗನೂರು ಗ್ರಾಮಗಳಿಂದ ಬಂದಿದ್ದ ನೂರಾರು ಜನರು ಭಾಗವಹಿಸಿದ್ದರು. ತಮ್ಮ ಭಾಗದ ಸಮಸ್ಯೆಗಳನ್ನು ಲಿಖಿತ ರೂಪದಲ್ಲಿ ಶಾಸಕರಿಗೆ ಸಲ್ಲಿಸಿದರು.