ಗ್ರಾಮಸ್ಥರ ಸಮಸ್ಯೆಗೆ ಶೀಘ್ರ ಸ್ಪಂದಿಸಿ

4blrp2
Published on

ಬೇಲೂರು : ಕಂದಾಯ ಇಲಾಖೆಯಲ್ಲಿ ವೃದ್ಧಾಪ್ಯ ವೇತನ, ಮನೆಗಳ ಹಕ್ಕುಪತ್ರ ವಿಳಂಬ, ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಮಶಾನಕ್ಕೆ ಜಾಗ ಗುರುತಿಸಿಲ್ಲ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಶಾಸಕ ಎಚ್.ಕೆ.ಸುರೇಶ್ ಅವರುಕಂದಾಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಸನ್ಯಾಸಿಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮಸ್ಥರ ಸಮಸ್ಯೆಗೆ ಶೀಘ್ರ ಸ್ಪಂದಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಅರ್ಜಿ ಕೊಟ್ಟು ತಿಂಗಳುಗಟ್ಟಲೆಯಾದರೂ ವೃದ್ಧಾಪ್ಯ ವೇತನ ಮಂಜೂರು ಮಾಡಿಲ್ಲವೆಂದು ಸನ್ಯಾಸಿಹಳ್ಳಿ ಗ್ರಾಮದ ಬೋರಣ್ಣಗೌಡ ಶಾಸಕರ ಗಮನಕ್ಕೆ ತಂದರು. ಆನಂತರ ಪಂಚಾಯಿತಿ ಮಾಜಿ ಅಧ್ಯಕ್ಷೆ ಪ್ರೇಮಾ ಅವರು ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಮಶಾನಕ್ಕೆ ಸ್ಥಳ ಗುರುತಿಸಿ ಕೊಡುವಂತೆ ಅರ್ಜಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲವೆಂದು ದೂರಿದರು. ಮಾವಿನಕೆರೆ ಗ್ರಾಮದಲ್ಲಿ ಸರ್ವೇ ನಂ. 22 ರಲ್ಲಿ 60 ಜನರಿಗೆ ನಿವೇಶನದ ಹಕ್ಕುಪತ್ರ ಕೊಡುತ್ತಿಲ್ಲ. ನಾವು ಮನೆ ಕಟ್ಟಿಕೊಂಡು ವಾಸಿಸುತ್ತಿದ್ದೇವೆ. ಮಳೆಗಾಲದಲ್ಲಿ ಮನೆ ಬಿದ್ದಿದೆ. ಅರ್ಜಿ ಕೊಟ್ಟರೂ ಇಲ್ಲದ ಸಬೂಬು ಹೇಳುತ್ತಾರೆಂದು ದೂರಿದರು.
ಸಾರ್ವಜನಿಕರ ದೂರು ಆಲಿಸಿ ಮಾತನಾಡಿದ ಶಾಸಕ ಸುರೇಶ್, ಕಂದಾಯ ಇಲಾಖೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡು, ನಿಮ್ಮನೆಯಿಂದ ದುಡ್ಡು ತಂದು ಕೊಡ್ತೀರಾ ? ಮನೆ ಬಿದ್ದರೂ ಏಕೆ ಕ್ರಮ ಕೈಗೊಂಡಿಲ್ಲ, ರಿಯಲ್ ಎಸ್ಟೇಟ್‌ನವರಿಗೆ ಕೆಲಸ ಮಾಡಿ ಕೊಡ್ತೀರ, ಬಡವರಿಗೆ ಕೆಲಸ ಮಾಡಿಕೊಡಲು ಇಲ್ಲದ ನೆಪ ಹೇಳ್ತೀರ. ಸರಿಯಾಗಿ ಕೆಲಸ ಮಾಡಿ ಎಂದು ತಾಕೀತು ಮಾಡಿದರು.
ಹೆಚ್ಚಿನ ಮಾಹಿತಿ ಪಡೆಯಲು ತಹಸೀಲ್ದಾರ್ ಎಂ.ಮಮತಾರನ್ನು ಸ್ಥಳಕ್ಕೆ ಕರೆಸಿ ಗ್ರಾಮಸ್ಥರಿಂದ ಬಂದಿರುವ ದೂರುಗಳ ಬಗ್ಗೆ ಶಾಸಕರು ಗಮನಕ್ಕೆ ತಂದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಆಗಬಾರದು, ರಸ್ತೆ ಬದಿ ತಿಪ್ಪೆಗಳನ್ನು ಜಮೀನಿನ ಬಳಿ ಹಾಕಲು ತಿಳಿಸಬೇಕು. ಕೆಲ ಗ್ರಾಮಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಿದೆ. ರಸ್ತೆ ಪಕ್ಕದಲ್ಲಿರುವ ಗಿಡ, ಗಂಟಿ ತೆಗೆಸಬೇಕು ಎಂದು ಸೂಚಿಸಿದರು.
ವ್ಯವಸ್ಥೆ ಮಾಡಿದ್ದೇವೆ:
ತಹಸೀಲ್ದಾರ್ ಎಂ. ಮಮತಾ ಮಾತನಾಡಿ, ಗ್ರಾಮಗಳಿಗೆ ಹೋಗಿ ವೃದ್ಧಾಪ್ಯ ವೇತನ ನೀಡಲು ವ್ಯವಸ್ಥೆ ಮಾಡಿದ್ದೇವೆ. ಬೋರಣ್ಣಗೌಡರ ದಾಖಲಾತಿ ಸಮರ್ಪಕವಾಗಿಲ್ಲದ ಕಾರಣ ಅವರಿಗೆ ನೋಟಿಸ್ ನೀಡಿದ್ದೇವೆ. ಉಳಿದಂತೆ ಮನೆಗಳ ಹಕ್ಕು ಪತಗಳನ್ನು ಡಿ. 18 ರಂದು ವಿತರಿಸುವುದಾಗಿ ತಿಳಿಸಿದರು.
ಮನೆ ಕಳೆದುಕೊಂಡವರಿಂದ ದಾಖಲಾತಿ ಪಡೆದು ಕ್ರಮ ಜರುಗಿಸುವಂತೆ ಸೂಚಿಸಿದರು. ಕಂದಾಯ ಇಲಾಖೆಯಲ್ಲಿ ದಾಖಲೆ ಸರಿಯಿದ್ದರೆ ಸಿಬ್ಬಂದಿ ಕೆಲಸ ಮಾಡಿ ಕೊಡುತ್ತಿದ್ದಾರೆಂದು ಸಮಜಾಯಿಸಿ ನೀಡಿದರು.
ಗ್ರಾ.ಪಂ ಅಧ್ಯಕ್ಷ ರಮೇಶ್, ಉಪಾಧ್ಯಕ್ಷೆ ಪಾರ್ವತಿ, ತಾಪಂ ಇಒ ಸತೀಶ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಂಗಸ್ವಾಮಿ, ಗ್ರಾಪಂ ಸದಸ್ಯರಾದ ವೆಂಕಟೇಶ್, ಮೋಹನಕುಮಾರ್, ಜ್ಯೋತಿ, ಶ್ರೀಧರ್, ವಿನೋದಾ, ಪಿಡಿಒ ಸರಸ್ವತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net