ಹಳ್ಳಿಗಾಡಿನ ಸಮಸ್ಯೆ ಪರಿಹಾರಕ್ಕೆ ಆದ್ಯತೆ

1blrp1
Published on

ಬೇಲೂರು: ಸಾರ್ವಜನಿಕರ ಕುಂದು ಕೊರತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಗ್ರಾಮ ಸಭೆಗಳು ಮಹತ್ತರವಾದ ಪಾತ್ರ ವಹಿಸುವುದರಿಂದ ಸಾರ್ವಜನಿಕರು ಸಭೆಗಳಲ್ಲಿ ಭಾಗವಹಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ತಾಲೂಕಿನ ಚೀಕನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಗ್ರಾಮ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮಲೆನಾಡು ಭಾಗದ ಈ ಗ್ರಾಮ ಪಂಚಾಯಿತಿಗಳಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಜತೆಗೆ ವಿವಿಧ ಇಲಾಖೆಯಿಂದ ಬರುವ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದಕ್ಜೆ ಪ್ರಥಮ ಆಧ್ಯತೆ ನೀಡಲಾಗುವುದು. ನಾಗರಿಕರಿಗೆ ಬೇಕಾದ ಮೂಲ ಸೌಕರ್ಯ ಒದಗಿಸುವುದಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದರು.
ಸ್ವಚ್ಛತೆಗೆ ಆದ್ಯತೆ ನೀಡಲು ಜನರೂ ಸಹಕಾರ ನೀಡಿ ಆರೋಗ್ಯ ಪಾಲನೆಗೆ ಮುಂದಾಗಬೇಕಿದೆ. ಸಾರ್ವಜನಿಕರ ಹಿತದೃಷ್ಠಿಯಿಂದ ಪಂಚಾಯಿತಿ ವ್ಯಾಪ್ತಿಯಲ್ಲಿನ ಎಲ್ಲ ಸಮಸ್ಯೆಗಳನ್ನು ಆಯಾ ಇಲಾಖೆ ಅಧಿಕಾರಿಗಳು ಪರಿಹರಿಸುವತ್ತ ಮುಂದಾಗಲಿದ್ದಾರೆ ಎಂದರು.
ಕಾಡಾನೆ ಹಾವಳಿ ತಡೆಗೆ ಕ್ರಮ
ಚೀಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಿನನಿತ್ಯ ಕಾಡಾನೆಗಳ ಹಾವಳಿಯಿಂದ ಜನರು ಬೇಸತ್ತಿದ್ದಾರೆ. ಈ ಸಮಸ್ಯೆ ನಿವಾರಗೆೆ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕಿದೆ. ಕಾಡಿನಲ್ಲಿ ಆನೆಗಳಿಗೆ ಸರಿಯಾದ ಆಹಾರ ಸಿಗದ ಕಾರಣ ತೋಟ, ಗದ್ದೆಗಳಿಗೆ ಆಹಾರ ಅರಸಿ ಬರುತ್ತಿವೆ. ಅವು ಇಲ್ಲಿಯೇ ಬೀಡು ಬಿಡುತ್ತಿವೆ. ಆದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಕಾಡಿನಲ್ಲಿ ಕಾಡಾನೆಗಳು ತಿನ್ನುವ ಗಿಡ, ಮರಗಳನ್ನು ಬೆಳೆಸುವ ಮೂಲಕ ಕಾಡಾನೆಗಳ ಉಪಟಳ ತಪ್ಪಿಸಲು ಮುಂದಾಗಬೇಕಿದೆ. ಇನ್ನೂ ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ಈಗಾಗಲೇ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದು, ಅನುದಾನ ತಂದು ಕೆಲಸ ಮಾಡಿಸಲಾಗುವುದು ಎಂದರು.
ಇದೇ ಸಂದರ್ಭ ಗ್ರಾಪಂ ವ್ಯಾಪ್ತಿಯ 94/ಸಿ ಫಲಾನೂಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಯಿತು. ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಿದರು.
ತಹಸೀಲ್ದಾರ್ ಎಂ.ಮಮತಾ, ಚೀಕನಹಳ್ಳಿ ಗ್ರಾಪಂ ಅಧ್ಯಕ್ಷೆ ಆಶಾ, ಉಪಾಧ್ಯಕ್ಷೆ ರಾಧಾ ಸದಸ್ಯರಾದ ಮಂಜುಳಾ, ಕೆ.ಜಿ.ಸುನೀಲ್ ಕುಮಾರ್, ಕೆ.ಆರ್.ಸುನೀಲ್ ಕುಮಾರ್, ಪ್ರದೀಪ್, ಸುಚಿತ್ರಾ, ಅಭಿವೃದ್ಧಿ ಅಧಿಕಾರಿ ಸುರೇಶ್, ಕಾರ್ಯದರ್ಶಿ ಶಿವರಾಜ್, ಮಾಜಿ ಅಧ್ಯಕ್ಷ ರಮೇಶ್ ಸುವರ್ಣ, ತಾಪಂ ಇಒ ಸತೀಶ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net