

ಗದಗ: ಅಂತೂ ಇಂತೂ ರಾಜ್ಯ ಚುನಾವಣೆ ಆಯೋಗವು ಸೋಮವಾರ ಗ್ರಾಮ ಪಂಚಾಯಿತಿಗಳ ಚುನಾವಣೆ ದಿನಾಂಕ ಘೋಷಣೆ ಮಾಡಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಜಿಲ್ಲೆಯ 7 ತಾಲೂಕುಗಳ 117 ಗ್ರಾಪಂಗಳಿಗೆ ಡಿ. 22 (ಮೊದಲ) ಹಾಗೂ 27(2ನೇ ಹಂತ)ರಂದು 2ಹಂತದಲ್ಲಿ ಚುನಾವಣೆ ಘೊಷಣೆಯಾಗಿದೆ. ಗದಗ (24 ಗ್ರಾಪಂ), ಶಿರಹಟ್ಟಿ (14), ಲಕ್ಷೆ್ಮೕಶ್ವರ (13) ತಾಲೂಕುಗಳಲ್ಲಿ ಮೊದಲ ಹಂತದಲ್ಲಿ ಹಾಗೂ ಮುಂಡರಗಿ (18 ಗ್ರಾಪಂ), ರೋಣ (24), ಗಜೇಂದ್ರಗಡ (9) ಮತ್ತು ನರಗುಂದ (13) ತಾಲೂಕುಗಳಲ್ಲಿ 2ನೇ ಹಂತದಲ್ಲಿ ಮತದಾನ ನಡೆಯಲಿದೆ. ಡಿ. 30ರಂದು ಮತ ಎಣಿಕೆ ನಡೆಯಲಿದೆ. 2021 ಆರಂಭಕ್ಕೆ ನೂತನ ಜನಪ್ರತಿನಿಧಿಗಳು ಗ್ರಾಮ ಪಂಚಾಯಿತಿ ಪ್ರವೇಶಿಸಲಿದ್ದಾರೆ.
ಗ್ರಾಪಂಗಳಿಗೆ ಚುನಾವಣೆ ಘೊಷಣೆಯ ನಿರೀಕ್ಷೆಯಲ್ಲಿದ್ದ ಗ್ರಾಮೀಣ ಪ್ರದೇಶಗಳಲ್ಲಿ ಈಗಾಗಲೇ ಚುನಾವಣೆ ಕಣ ರಂಗೇರಿದೆ. ರಾಜಕೀಯ ಪಕ್ಷಗಳ ಚಿಹ್ನೆಗಳಡಿಯಲ್ಲಿ ಚುನಾವಣೆ ನಡೆಯದೆ ಇದ್ದರೂ ಆಯಾ ಪಕ್ಷ ಬೆಂಬಲಿತರಾಗಿ ಕಣಕ್ಕಿಳಿಯಲು ಸ್ಪರ್ಧಾಕಾಂಕ್ಷಿಗಳು ಭರ್ಜರಿ ಕಸರತ್ತು ನಡೆಸಿದ್ದಾರೆ. ಇದೀಗ ಚುನಾವಣೆ ಘೊಷಣೆಯಾಗಿದ್ದು, ಈ ಎಲ್ಲ ಪ್ರಕ್ರಿಯೆಗಳು ಮತ್ತಷ್ಟು ಚುರುಕುಗೊಂಡಿವೆ.
ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವ ಉದ್ದೇಶ ಮತ್ತು ಪಕ್ಷದ ಕಾರ್ಯಕರ್ತರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಬಿಜೆಪಿ, ಕಾಂಗ್ರೆಸ್ನ ಸ್ಥಳೀಯ ಪ್ರಮುಖರು ನಿರ್ಧರಿಸಿದ್ದಾರೆ. ಹೀಗಾಗಿ, ಗ್ರಾಪಂಗಳಿಗೆ ಚುನಾವಣೆ ಘೊಷಣೆಯಾಗುವ ಮುನ್ನವೇ ಆಯಾ ವಾರ್ಡ್ಗಳಲ್ಲಿ ಮತದಾರರ ಸಂಖ್ಯೆ, ಜಾತಿವಾರು ಆಧಾರದ ಮೇಲೆ ಬೆಂಬಲಿತ ಅಭ್ಯರ್ಥಿಗಳನ್ನು ಗುರುತಿಸಿ ಕಣಕ್ಕಿಳಿಸಲು ವಾರ್ಡ್ವಾರು ಸಭೆಗಳನ್ನು ನಡೆಸಲಾಗಿದೆ.
ಜಿಲ್ಲೆಯ ಕೆಲ ಗ್ರಾಪಂಗಳಲ್ಲಿ ವಾರ್ಡ್ಗಳ ಮತದಾರರ ಸಂಖ್ಯೆ, ಜಾತಿವಾರು ಆಧಾರದ ಮೇಲೆ ಬೆಂಬಲಿತ ಅಭ್ಯರ್ಥಿಗಳನ್ನು ಗುರುತಿಸಿ ಅವಿರೋಧವಾಗಿ ಆಯ್ಕೆ ಮಾಡಲು ತೆರೆಮರೆಯಲ್ಲಿ ಯತ್ನ ನಡೆದಿದೆ. ಗದಗ ತಾಲೂಕಿನ ಹುಲಕೋಟಿ, ಅಸುಂಡಿ ಮತ್ತು ಕುರ್ತಕೋಟಿ ಸೇರಿ ಜಿಲ್ಲೆಯ ಅನೇಕ ಗ್ರಾಪಂ ಗಳಲ್ಲಿ ಸದಸ್ಯರನ್ನು ಅವಿರೋಧ ಆಯ್ಕೆ ಮಾಡುವಂತಹ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ, ಈ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಮುಖಂಡರು ಪ್ರತಿ ವಾರ್ಡ್ಗೂ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಜ್ಜಾಗಿ ನಿಂತಿವೆ. ಗ್ರಾಮೀಣ ಭಾಗದಲ್ಲೂ ಬಿಜೆಪಿ ಗಟ್ಟಿ ತಳಪಾಯ ಹಾಕಿಕೊಂಡಿದ್ದರಿಂದ ಅಖಾಡಾ ರಂಗೇರುವುದು ಖಚಿತ.
ಬಿಜೆಪಿ ಮುಂದು: ಗ್ರಾಪಂ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಈಗಾಗಲೇ ಸಾಕಷ್ಟು ತಯಾರಿ ಮಾಡಿಕೊಂಡಿದ್ದು, ಕಾರ್ಯಕರ್ತರು ಕಾರ್ಯಪ್ರವೃತ್ತರಾಗಿದ್ದಾರೆ. ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದು, ಸಂಸದರೂ ಬಿಜೆಪಿ ಪಕ್ಷದವರಿದ್ದಾರೆ. ಅಲ್ಲದೆ, ಬೂತ್ ಮಟ್ಟದಲ್ಲಿ ಪಂಚರತ್ನ ಕಮಿಟಿ ರಚಿಸಲಾಗಿದೆ. ಪ್ರತಿ ಗ್ರಾಮಕ್ಕೆ ಒಬ್ಬ ಪ್ರಮುಖರನ್ನು ನೇಮಿಸಲಾಗಿದೆ. ಪ್ರತಿ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಮಹಾಶಕ್ತಿ ಕಮಿಟಿ ರಚಿಸಲಾಗದೆ. ಕಾರ್ಯಕರ್ತರು ಈಗಾಗಲೇ ತಮ್ಮ ಮಟ್ಟದಲ್ಲಿ ಕಸರತ್ತು ಆರಂಭಿಸಿದ್ದಾರೆ. ಅಲ್ಲದೆ, ಗ್ರಾಮ ಸ್ವರಾಜ್ ಕಾರ್ಯಕ್ರಮ ಆಯೋಜನೆ ಮೂಲಕ ಕಾರ್ಯಕರ್ತರನ್ನು ಹುರಿದುಂಬಿಸಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಉತ್ಸಾಹ ತುಂಬುತ್ತಿದ್ದಾರೆ. ಹೀಗಾಗಿ, ಈ ಸಲದ ಗ್ರಾಪಂ ಚುನಾವಣೆಯಲ್ಲಿ 110 ಗ್ರಾಮ ಪಂಚಾಯಿತಿಗಳನ್ನು ಗೆಲ್ಲುವ ವಿಶ್ವಾಸವಿದೆ ಎನ್ನುತ್ತಿದ್ದಾರೆ ಬಿಜೆಪಿ ಮುಖಂಡರು. ಆದರೆ, ಕಾಂಗ್ರೆಸ್ನಲ್ಲಿ ಅಂತಹ ತಯಾರಿ ಕಂಡುಬರುತ್ತಿಲ್ಲ. ಚುನಾವಣೆ ದಿನಾಂಕ ನಿಗದಿಯಾಗಿದ್ದು, ಯುದ್ಧ ಕಾಲೆ ಶಸ್ತ್ರಾಭ್ಯಾಸ ಎನ್ನುವಂತೆ ಕಾಂಗ್ರೆಸ್ ಮುಖಂಡ ಇನ್ನುಂದೆ ಗ್ರಾಮೀಣ ಭಾಗದ ಕಡೆಗೆ ಗಮನ ಹರಿಸುವ ಸಾಧ್ಯತೆಗಳಿವೆ.
ಒಟ್ಟು 5,34,085 ಮತದಾರರು: ಜಿಲ್ಲೆಯಲ್ಲಿ ಒಟ್ಟು 122 ಗ್ರಾಮ ಪಂಚಾಯಿತಿಗಳಿದ್ದು, 1765 ಸದಸ್ಯರ ಬಲವನ್ನು ಹೊಂದಿದೆ. ಇದರಲ್ಲಿ ಸದ್ಯ 117 ಗ್ರಾಮ ಪಂಚಾಯಿತಿಗಳಿಗೆ ಮಾತ್ರ ಚುನಾವಣೆ ನಡೆಯಲಿದೆ. ಜಿಲ್ಲೆಯಲ್ಲಿ 2,70,245 ಪುರುಷರು, 2,63,840 ಮಹಿಳೆಯರು ಸೇರಿ ಒಟ್ಟು 5,34,085 ಮತದಾರರು ಹಕ್ಕು ಚಲಾಯಿಸಲಿದ್ದಾರೆ. 621 ಮತಗಟ್ಟೆಗಳಿದ್ದು, 1678 ಸದಸ್ಯರು ಆಯ್ಕೆಯಾಗಲಿದ್ದಾರೆ. ಉಳಿದ 5 ಗ್ರಾಮ ಪಂಚಾಯಿತಿಗಳ ಅವಧಿ 2021 ಮಾರ್ಚ್-ಏಪ್ರಿಲ್ಗೆ ಪೂರ್ಣಗೊಳ್ಳಲಿದೆ.
ಹಳ್ಳಿ ಫೈಟ್ಗೆ ಸಕಲ ಸಿದ್ಧತೆ: ರಾಜ್ಯ ಚುನಾವಣೆ ಆಯೋಗದ ನಿರ್ದೇಶನದ ಮೇರೆಗೆ ಆಗಸ್ಟ್ ತಿಂಗಳಲ್ಲಿ ಅವಧಿ ಮುಗಿದಿರುವ ಗ್ರಾಪಂಗಳಿಗೆ ಚುನಾವಣೆ ನಡೆಸಲು ಜಿಲ್ಲಾಡಳಿತ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲಾಧಿಕಾರಿ ಸುಂದರೇಶಬಾಬು ಈಗಾಗಲೇ ಜಿಲ್ಲೆಯ ಎಲ್ಲ ತಾಲೂಕುಗಳ ತಹಸೀಲ್ದಾರರೊಂದಿಗೆ ವಿಡಿಯೋ ಸಂವಾದ ನಡೆಸಿದ್ದಾರೆ. ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಸಂಬಂಧಿಸಿದಂತೆ ಮತಗಟ್ಟೆಗಳಿಗೆ ಭೇಟಿ ನೀಡಿ ಮೂಲಸೌಲಭ್ಯಗಳ ಪರಿಶೀಲನೆ ನಡೆಸಿದ್ದಾರೆ. ಆಯಾ ತಾಲೂಕಿನ ಬಿಎಲ್ಒಗಳು (ಬೂತ್ ಮಟ್ಟದ ಅಧಿಕಾರಿ) ಉದ್ದೇಶಿತ ಮತಗಟ್ಟೆಗಳಿಗೆ ಸ್ವತಃ ಭೇಟಿ ನೀಡಿ ಅಲ್ಲಿರುವ ಲಭ್ಯವಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಮತಗಟ್ಟೆಗಳಲ್ಲಿ ವಿದ್ಯುತ್ ಸೌಕರ್ಯ, ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆಯ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ.