ಗ್ರಾಪಂ ಸಿಬ್ಬಂದಿಯಿಂದ ಖಾತ್ರಿ ಯೋಜನೆ ದುರ್ಬಳಕೆ

11-DVD-1
Published on

ದೇವದುರ್ಗ: ಜಾಲಹಳ್ಳಿ ಗ್ರಾಪಂನಿಂದ ನರೇಗಾ ಯೋಜನೆಯಡಿ ನೀಡಲಾಗಿರುವ ಬೋಗಸ್ ಜಾಬ್ ಕಾರ್ಡ್‌ಗಳನ್ನು ರದ್ದು ಮಾಡುವಂತೆ ಆಗ್ರಹಿಸಿ ಗ್ರಾಪಂ ಕಚೇರಿ ಮುಂದೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಸಂಘಟನೆ ತಾಲೂಕು ಅಧ್ಯಕ್ಷ ಯಲ್ಲಪ್ಪ ಗಚ್ಚಿನಮನಿ ಮಾತನಾಡಿ, ಕೆಲಸಕ್ಕಾಗಿ ಅರ್ಜಿ ಸಲ್ಲಿಸಿ 2ತಿಂಗಳಾದರೂ ಕೆಲಸ ನೀಡದೆ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಇದರಿಂದಾಗಿ ಕೂಲಿಕಾರರು ಕೆಲಸದಿಂದ ವಂಚಿತರಾಗಿ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

750 ಕಾರ್ಮಿಕರು ಕೆಲಸಕ್ಕೆ ಅರ್ಜಿ ಸಲ್ಲಿಸಿ 2 ತಿಂಗಳಾದರೂ ಕೆಲಸ ನೀಡಿಲ್ಲ. ಉದ್ದೇಶ ಪೂರ್ವಕವಾಗಿ ಕೆಲಸ ನೀಡದೆ ಖಾತ್ರಿ ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಗ್ರಾಮಸಭೆ ಕರೆದು ಕಾಮಗಾರಿಗಳ ಗುಚ್ಛ ಸಿದ್ಧಪಡಿಸದೆ ಪಟ್ಟಿ ತಯಾರಿಸಿ ಮೇಲಧಿಕಾರಿಗಳ ಒಪ್ಪಿಗೆ ಪಡೆಯಲು ಕಳಿಸಿ ಕಾಲಹರಣ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಗ್ರಾಪಂ ವ್ಯಾಪ್ತಿಯಲ್ಲಿ ಬೋಗಸ್ ಕಾರ್ಡ್‌ಗಳ ಹಾವಳಿಯಿಂದಾಗಿ ಅರ್ಹ ಕೂಲಿಕಾರರಿಗೆ ಕೆಲಸ ಸಿಗದಂಥ ಸ್ಥಿತಿ ನಿರ್ಮಾಣವಾಗಿದೆ. ಎಸ್ಸೆಸ್ಸೆಲ್ಸಿ, ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳ ಹೆಸರಿನಲ್ಲಿ ಬ್ಯಾಂಕ್‌ಖಾತೆ ತೆರೆದು ನರೇಗಾ ಯೋಜನೆಯ ಹಣ ಜಮಾ ಮಾಡುವ ಮೂಲಕ ಭಾರಿ ಅವ್ಯವಹಾರದಲ್ಲಿ ಅಧಿಕಾರಿಗಳು ತೊಡಗಿದ್ದಾರೆ. ಕೆಲಸಕ್ಕೆ ಅರ್ಜಿ ಸಲ್ಲಿಸದ ಕೂಲಿಕಾರರ ಬ್ಯಾಂಕ್ ಖಾತೆಗೂ ಹಣ ಜಮಾ ಮಾಡಲಾಗಿದೆ ಎಂದು ಆಪಾದಿಸಿದರು.
ಕೂಡಲೇ ಬೋಗಸ್ ಜಾಬ್‌ಕಾರ್ಡ್ ರದ್ದುಮಾಡಬೇಕು. ಈ ಕುರಿತು ತನಿಖೆ ನಡೆಸಿ ಪಿಡಿಒ ಪತ್ಯಾಪ್ಪ ರಾಠೋಡ್ ಹಾಗೂ ಡಾಟಾ ಎಂಟ್ರಿ ಆಪರೇಟರ್ ರಾಯಪ್ಪನನ್ನು ಅಮಾನತು ಮಾಡಬೇಕು. ಅರ್ಜಿ ಸಲ್ಲಿಸಿದ 750 ಅರ್ಹರಿಗೆ ಕೆಲಸ ನೀಡಬೇಕು. ಕಾಯಕ ಬಂಧುಗಳನ್ನು ತಂತ್ರಾಂಶದಲ್ಲಿ ನೋಂದಾಯಿಸಿ ಪ್ರೋತ್ಸಾಹಧನ ನೀಡಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net