

ಶನಿವಾರಸಂತೆ: ಸಮೀಪದ ದುಂಡಳ್ಳಿ ಗ್ರಾಪಂ ಆಡಳಿತ ಮಂಡಳಿಯ ಸಾಮಾನ್ಯ ಸಭೆ ಅಧ್ಯಕ್ಷೆ ಸತ್ಯವತಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು.
ಸ್ವಚ್ಛತೆಗೆ ಆದ್ಯತೆ, ಅನುದಾನದ ಕೊರತೆಯ ನಡುವೆ ಕಾರ್ಮಿಕರಿಗೆ ವೇತನ ನೀಡುತ್ತಿರುವ ಬಗ್ಗೆ, ಅರಣ್ಯ ಹಕ್ಕು ಸಮಿತಿ ರಚನೆ, ಗ್ರಾಮಸಭೆ ನಡೆಸುವ ಬಗ್ಗೆ, ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಲಾಯಿತು. ಈ ಹಿಂದಿನ ಆಡಳಿತ ಮಂಡಳಿಯ ಅವಧಿಯಲ್ಲಿ ಅಮೃತ ಗ್ರಾಮ ಯೋಜನೆಯಡಿ ಬಂದಿದ್ದ ಅನುದಾನದಲ್ಲಿ 13 ಲಕ್ಷ ರೂ. ಬಳಕೆಯಾಗಿದ್ದು, ಇದರ ಬಗ್ಗೆ ಮಾಹಿತಿ ಇಂದಿಗೂ ಲಭ್ಯವಾಗದಿರುವ ಬಗ್ಗೆ ಸದಸ್ಯ ಡಿ.ಬಿ.ಬೋಜಪ್ಪ ವಿಷಯ ಪ್ರಸ್ತಾಪಿಸಿದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಆಯಿಷಾ ಕ್ರಿಯಾಯೋಜನೆ, ಸರ್ಕಾರದಿಂದ ಬಂದ ಆದೇಶ ಪತ್ರಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾಪಂ ಸದಸ್ಯರಾದ ಸಿ.ಜೆ.ಗಿರೀಶ್, ಡಿ.ಬಿ.ಬೋಜಪ್ಪ, ಎಸ್.ಪಿ.ಭಾಗ್ಯಾ, ದೇವರಾಜ್, ನಂದಿನಿ ನಾಗರತ್ನಾ, ಭವಾನಿ ಇತರರು ಇದ್ದರು.