ಉಡುಪಿಯಲ್ಲಿ ಎರಡು ಹಂತದಲ್ಲಿ ಗ್ರಾಪಂ ಚುನಾವಣೆ: ಜಿಲ್ಲಾಧಿಕಾರಿ ಜಿ.ಜಗದೀಶ್

jagadeesh
Published on

ಉಡುಪಿ: ಜಿಲ್ಲೆಯಲ್ಲಿ 154 ಗ್ರಾಮ ಪಂಚಾಯಿತಿಗಳಲ್ಲಿ ಎರಡು ಹಂತಗಳಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಲಿದೆ. ಡಿಸೆಂಬರ್ 31ರವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರಲಿದೆ.

ಮೊದಲ ಹಂತದಲ್ಲಿ ಡಿ.22ರಂದು ಜಿಲ್ಲೆಯ ನಾಲ್ಕು ತಾಲೂಕುಗಳ ಒಟ್ಟು 67 ಗ್ರಾಪಂಗಳಿಗೆ ಮತ್ತು ಎರಡನೇ ಹಂತದಲ್ಲಿ ಡಿ.27ರಂದು ಉಳಿದ ಮೂರು ತಾಲೂಕುಗಳ 87 ಗ್ರಾಪಂಗಳಿಗೆ ಮತದಾನ ನಡೆಯಲಿದೆ. ಚುನಾವಣೆಗೆ ಬೇಕಾದ ಎಲ್ಲ ರೀತಿಯ ತಯಾರಿಯನ್ನು ಜಿಲ್ಲಾಡಳಿತ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೊದಲ ಹಂತದಲ್ಲಿ ಬ್ರಹ್ಮಾವರ ತಾಲೂಕಿನ 27 ಗ್ರಾಪಂ, ಉಡುಪಿಯ 16, ಬೈಂದೂರಿನ 15, ಹೆಬ್ರಿಯ 9 ಗ್ರಾಪಂಗಳಿಗೆ ಮತದಾನ ನಡೆಯಲಿದೆ. ಎರಡನೇ ಹಂತದಲ್ಲಿ ಕುಂದಾಪುರದ 44, ಕಾರ್ಕಳದ 27 ಹಾಗೂ ಕಾಪುವಿನ 16 ಗ್ರಾಪಂಗಳಿಗೆ ಚುನಾವಣೆ ನಡೆಯಲಿದೆ. 890 ಮತಗಟ್ಟೆ ಮತ್ತು 282 ಆಕ್ಸಿಲರಿ ಮತಗಟ್ಟೆ ಸಹಿತ ಒಟ್ಟು 1172 ಮತಗಟ್ಟೆಗಳಿವೆ ಎಂದರು.

ಜಿಲ್ಲೆಯ ಗ್ರಾಪಂ ಚುನಾವಣೆಯಲ್ಲಿ 3,82,785 ಪುರುಷ ಮತದಾರರು, 4,12,887 ಮಹಿಳಾ ಮತದಾರರು ಹಾಗೂ 9 ಮಂದಿ ಇತರ ಮತದಾರರು ಸೇರಿದಂತೆ ಒಟ್ಟು 7,95,681 ಮಂದಿ ಮತದಾರರಿದ್ದಾರೆ ಎಂದು ಡಿಸಿ ತಿಳಿಸಿದರು.

ಮೊದಲ ಹಂತದ ಚುನಾವಣೆಗೆ ಡಿ.7, ಎರಡನೇ ಹಂತಕ್ಕೆ ಡಿ.11 ರಂದು ಅಧಿಸೂಚನೆ ಹೊರಡಿಸಲಾಗುವುದು. ನಾಮಪತ್ರ ಸಲ್ಲಿಕೆಗೆ ಮೊದಲ ಹಂತಕ್ಕೆ ಡಿ.11 ಹಾಗೂ ಎರಡನೇ ಹಂತಕ್ಕೆ ಡಿ.16 ಕೊನೆಯ ದಿನವಾಗಿರುತ್ತದೆ. ಕ್ರಮವಾಗಿ ಡಿ.12 ಹಾಗೂ 17ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಡಿ.14 ಮತ್ತು 19 ನಾಮಪತ್ರ ಹಿಂಪಡೆಯಲು ಕೊನೆಯ ದಿನ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net