

ಕಾರವಾರ: ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕ ಘೊಷಣೆ ಅಗುವ ಸಾಧ್ಯತೆ ಇರುವುದರಿಂದ ರಾಜಕೀಯ ಪಕ್ಷಗಳು ತಯಾರಿ ನಡೆಸಿವೆ. ಇದು ನೇರವಾಗಿ ಪಕ್ಷದ ಚಿಹ್ನೆಯ ಮೇಲೆ ನಡೆಯುವ ಚುನಾವಣೆ ಆಗಿರದಿದ್ದರೂ ಗ್ರಾಮೀಣ ಭಾಗದಲ್ಲಿ ತಮ್ಮ ಮೂಲ ಬೇರನ್ನು ಗಟ್ಟಿ ಮಾಡಿಕೊಳ್ಳಲು ಪಕ್ಷಗಳಿಗೆ ಇರುವ ಒಂದು ಅವಕಾಶವಾಗಿದೆ. ಒನ್ನೊಂದೇ ವರ್ಷದಲ್ಲಿ ಜಿಪಂ, ತಾಪಂ ಚುನಾವಣೆ ಸಹ ಬರುವುದರಿಂದ ಪಕ್ಷಗಳು ಗ್ರಾಪಂ ಚುನಾವಣೆಯನ್ನೂ ಗಂಭೀರವಾಗಿ ಪರಿಗಣಿಸಿ ತಯಾರಿಗೆ ಇಳಿದಿವೆ.
ಪಂಚ ರತ್ನಗಳು: ಬಿಜೆಪಿ ಈಗಾಗಲೇ ಪ್ರತಿ ಬೂತ್ ಮಟ್ಟದಲ್ಲಿ ಪಂಚ ರತ್ನಗಳು ಎಂಬ ಹೆಸರಿನ ಐವರು ಸದಸ್ಯರನ್ನು ನೇಮಿಸಿದೆ. ಅವರು ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಿ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ. ಅದಕ್ಕೆ ಪಕ್ಷ ಅನುಮೋದನೆ ನೀಡಲಿದೆ. ಇನ್ನು, ಬೂತ್ ಮಟ್ಟದಲ್ಲಿ ನಿರಂತರ ಜನಸಂಪರ್ಕ ಈಗಾಗಲೇ ಪ್ರಾರಂಭವಾಗಿದೆ. ಕಾಂಗ್ರೆಸ್ ಸಹ ಈ ನಿಟ್ಟಿನಲ್ಲಿ ಹಿಂದೆ ಬಿದ್ದಿಲ್ಲ. ಈಗಾಗಲೇ ಗ್ರಾಮೀಣ ಭಾಗಗಳಲ್ಲಿ ಸಭೆಗಳನ್ನು ನಡೆಸುತ್ತಿದೆ. ಹಳಿಯಾಳದಲ್ಲಿ ಮಾಜಿ ಶಾಸಕ ಆರ್.ವಿ.ದೇಶಪಾಂಡೆ ಅವರು ಗ್ರಾಮೀಣ ಭಾಗದಲ್ಲಿ ಸಭೆ ನಡೆಸಿ ಗ್ರಾಪಂ ಚುನಾವಣೆಗೆ ತಯಾರಿ ನಡೆಸಿರುವ ಸಂದೇಶ ರವಾನಿಸಿದ್ದಾರೆ.
ಹಲವರ ಆಸಕ್ತಿ: ಜಿಪಂ, ತಾಪಂಗಳಿಗಿಂತ ಗ್ರಾಪಂಗೆ ನೇರವಾಗಿ ಅನುದಾನ ಬರುವುದರಿಂದ ಗ್ರಾಪಂ ಸದಸ್ಯರಾಗಲು ಹೆಚ್ಚಿನವರು ಆಸಕ್ತಿ ತೋರುತ್ತಿರುವುದು ಕಂಡುಬರುತ್ತಿದೆ. ಕಾರವಾರದಲ್ಲಿ ತಾಪಂ ಮಾಜಿ ಅಧ್ಯಕ್ಷೆಯೊಬ್ಬರು ‘ನಾನು ಈ ಬಾರಿ ಬಹುಜನರ ಅಪೇಕ್ಷೆಯ ಮೇರೆಗೆ ಗ್ರಾಪಂಗೆ ಸ್ಪರ್ಧಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ.
ರಾಜಕೀಯದ ಸುಳಿ ಗಾಳಿ: ಗ್ರಾಪಂ ಚುನಾವಣೆಯಲ್ಲಿ ಯಾವುದೇ ಪಕ್ಷದ ಚಿಹ್ನೆಯಲ್ಲಿ ಸ್ಪರ್ಧಿಸುವ ಅವಕಾಶವಿಲ್ಲ. ಆದರೆ, ಅತಿ ಹೆಚ್ಚು ಪಕ್ಷ ರಾಜಕೀಯ ಇಲ್ಲೇ ಕಾಣಿಸುತ್ತಿದೆ. ಒಂದೇ ಮನೆಯ ಸದಸ್ಯರಲ್ಲಿ ಮೂವರನ್ನು ಬೆಂಬಲಿಸು ವವರಿದ್ದಾರೆ. ಈಗಾಗಲೇ ಗ್ರಾಮೀಣ ಭಾಗದ ಕಟ್ಟೆಗಳು, ಅಂಗಡಿ ಮುಂಗಟ್ಟುಗಳು, ಚಹಾ ಹೋಟೆಲ್ಗಳಲ್ಲಿ ರಾಜಕೀಯದ ಚರ್ಚೆ ಪ್ರಾರಂಭವಾಗಿಬಿಟ್ಟಿದೆ. ಕಳೆದ ಐದು ವರ್ಷದಲ್ಲಿ ಯಾರು ಏನು ಮಾಡಿದರು? ಯಾರನ್ನು ಗೆಲ್ಲಿಸ ಬೇಕು ಎಂಬೆಲ್ಲ ವಿಷಯಗಳ ಬಗ್ಗೆ ಪರಾಮರ್ಶೆ ನಡೆದಿದೆ.
ಪಕ್ಷಗಳ ನೇರ ಸಹಭಾಗಿತ್ವ ಇಲ್ಲದಿದ್ದರೂ ಬಿಜೆಪಿ ಗ್ರಾಪಂ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಪ್ರತಿ ಬೂತ್ ಮಟ್ಟದಲ್ಲಿ ಪಕ್ಷ ಕಟ್ಟಲು, ಸಾಮರ್ಥ್ಯ ತೋರಿಸಲು ಇದೊಂದು ಸದವಕಾಶ. ಈಗಾಗಲೇ ತಯಾರಿ ಆರಂಭಿಸಲಾಗಿದೆ. | ನಾಗರಾಜ ನಾಯಕ ಬಿಜೆಪಿ ವಕ್ತಾರ
ಹೀಗಿತ್ತು ಹಿಂದಿನ ಚುನಾವಣೆ
2015ರ ಮೇ 29ರಂದು ಜಿಲ್ಲೆಯ 230 ಗ್ರಾಪಂಗಳ 2700ಕ್ಕೂ ಅಧಿಕ ಸ್ಥಾನಗಳಿಗೆ ಚುನಾವಣೆ ನಡೆದು ಜೂನ್ 5ರಂದು ಫಲಿತಾಂಶ ಹೊರಬಿದ್ದಿತ್ತು. 7316 ಜನ ಚುನಾವಣೆ ಎದುರಿಸಿದ್ದರು. 267 ಕ್ಷೇತ್ರಗಳಿಗೆ ಅವಿರೋಧ ಆಯ್ಕೆ ನಡೆದರೆ, 13 ಕ್ಷೇತ್ರಗಳಿಗೆ ಯಾವುದೇ ಅಭ್ಯರ್ಥಿ ನಾಮಪತ್ರ ಸಲ್ಲಿಸಿರಲಿಲ್ಲ.