ಗ್ರಾಪಂ ಸದಸ್ಯ ಸ್ಥಾನಗಳು ಹರಾಜು ಸತ್ಯ ; ತುರುವೇಕೆರೆ ತಾಲೂಕಿನಲ್ಲಿ ಮೂವರ ಬಂಧನ

16 tpt 1
Published on

ತುಮಕೂರು : ಗ್ರಾಮ ಪಂಚಾಯಿತಿ ಸ್ಥಾನಗಳಿಗೆ ಹರಾಜು ಮೂಲಕ ಅವಿರೋಧ ಆಯ್ಕೆಯಾಗುತ್ತಿವೆ ಎಂಬ ಆರೋಪಕ್ಕೆ ಪುಷ್ಟಿ ಸಿಕ್ಕಿದ್ದು, ಕುಣಿಗಲ್, ತುರುವೇಕೆರೆ, ಚೇಳೂರು ಹಾಗೂ ನೊಣವಿನಕೆರೆ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ತುರುವೇಕೆರೆ ತಾಲೂಕು ಮುದ್ದನಹಳ್ಳಿಯ ಸಿದ್ದೇಗೌಡ, ಹುಚ್ಚೇಗೌಡ ಹಾಗೂ ಶ್ರೀನಿವಾಸ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಹರಾಜು ಮೂಲಕ ಸದಸ್ಯತ್ವ ಪಡೆಯಲು ಯತ್ನಿಸಿದವರ ವಿರುದ್ಧ 9 ಪ್ರಕರಣ ದಾಖಲಾಗಿದ್ದು, ಇನ್ನೂ ನೂರಾರು ಪ್ರಕರಣಗಳ ಬಗ್ಗೆಯೂ ತನಿಖೆ ನಡೆಯುವ ಅಗತ್ಯವಿದೆ. ಕುಣಿಗಲ್ ತಾಲೂಕು ಕಿತ್ನಾಮಂಗಲ ಗ್ರಾಪಂ ವ್ಯಾಪ್ತಿಯ ಕಾಡುಮತ್ತಿಕೆರೆಯಲ್ಲಿ ಅವಿರೋಧ ಆಯ್ಕೆಯಾಗಿರುವ ಬಿಸಿಎಂ(ಎ) ಮಹಿಳೆ ಸ್ಥಾನಕ್ಕೆ ಲಕ್ಷ್ಮಮ್ಮ, ಎಸ್‌ಸಿ ಮೀಸಲಾತಿಗೆ ಭಾಗ್ಯಮ್ಮ ಆಯ್ಕೆಯಲ್ಲಿ ಹರಾಜು ನಡೆಸಿದ್ದ ವಿಡಿಯೋ ಸಾಕ್ಷ್ಯ ಆಧರಿಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪೊಲೀಸ್ ಮಾಹಿತಿದಾರ ಹಾಗೂ ಗ್ರಾಮಸ್ಥರಿಂದ ಮಾಹಿತಿ ಸಂಗ್ರಹಿಸಿ ಕಾಡುಮತ್ತೀಕೆರೆ ಮಾರಮ್ಮ ದೇವಸ್ಥಾನದ ಮುಂಭಾಗ ನೀತಿಸಂಹಿತೆ ಉಲ್ಲಂಸಿ ಹರಾಜು ನಡೆಸಲಾಗಿದೆ ಎಂದು ಪ್ರಕರಣ ದಾಖಲಿಸಲಾಗಿದೆ.  ಗ್ರಾಮದ ಜಯರಾಮಯ್ಯ (38), ಕೆಇಬಿ ನೌಕರ ರಂಗನಾಥ (45), ನಾಗರಾಜು (40), ವಕೀಲ ಮಂಜುನಾಥ್ (42) ಹಾಗೂ ಗ್ರಾಮಸ್ಥರು ಗುಂಪು ಸೇರಿ ಹರಾಜು ನಡೆಸಿದ್ದರು ಎಂದು ಆರೋಪಿಸಲಾಗಿದೆ. 11.75ಲಕ್ಷ ರೂಪಾಯಿಗೆ ಹರಾಜು ನಡೆಸಲಾಗಿರುವ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ಗ್ರಾಮದಲ್ಲಿ ಬೇರೆ ಯಾರೂ ನಾಮಪತ್ರ ಸಲ್ಲಿಸದೆ ಅವಿರೋಧ ಆಯ್ಕೆಯಾಗಿದೆ ಎಂದು ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ.

ತುರುವೇಕೆರೆ ತಾಲೂಕು ಮಾವಿನಕೆರೆ, ಮುದಿಗೆರೆ, ಬ್ಯಾಡರಹಳ್ಳಿ, ಕರಡಗೆರೆ, ಮೇಲಿನವರೆಗರಹಳ್ಳಿಯಲ್ಲಿ ಅಭ್ಯರ್ಥಿಗಳು ಕೆಂಪಮ್ಮ ದೇವಿ ಹಾಗೂ ಇತರ ದೇವಾಲಯಗಳಿಗೆ ಹಣ ಬಳಸಿಕೊಳ್ಳಲು 37.50 ಲಕ್ಷ ರೂಪಾಯಿಗೆ ಹಾಗೂ ಕಣತೂರು ಗ್ರಾಪಂ ಕಣತೂರು ಮತ್ತು ಮುದ್ದನಹಳ್ಳಿ ಹಾಗೂ ಗೋಣಿ ತುಮಕೂರಿನಲ್ಲಿ ಹರಾಜು ನಡೆದಿದ್ದು ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಗುಬ್ಬಿ ತಾಲೂಕು ಗುಡ್ಡದಹಳ್ಳಿ ಕ್ಷೇತ್ರದಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಿದ್ದ ಸ್ಥಾನಕ್ಕೆ ಸಲ್ಲಿಕೆಯಾಗಿದ್ದ 5 ನಾಮಪತ್ರಗಳಲ್ಲಿ ನಾಲ್ವರು ವಾಪಸ್ ಪಡೆದಿರುವ ಬಗ್ಗೆ ಗ್ರಾಮಸ್ಥರು ಆಕ್ಷೇಪಣೆ ಸಲ್ಲಿಸಿದ್ದು, ಗ್ರಾಮದಲ್ಲಿ 3.75ಲಕ್ಷ ರೂಪಾಯಿಗೆ ಹರಾಜು ನಡೆದಿರುವ ಬಗ್ಗೆ ಬಿದರೆ ಗ್ರಾಪಂ ಚುನಾವಣಾಧಿಕಾರಿ ದೂರಿನ ಹಿನ್ನೆಲೆಯಲ್ಲಿ ಚೇಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೊಣವಿನಕೆರೆ ಗ್ರಾಪಂ ಆಲ್ಬೂರು 2ನೇ ಬ್ಲಾಕ್ 3 ಸದಸ್ಯತ್ವದ ಸ್ಥಾನಗಳಿಗೆ ಹರಾಜು ಮಾಡಲು ಪ್ರಯತ್ನಿಸುತ್ತಿದ್ದು, ಇದನ್ನು ಆಕ್ಷೇಪಿಸಿದ್ದ ಅಣಪನಹಳ್ಳಿ ಗ್ರಾಮಸ್ಥರು ಚುನಾವಣೆ ಬಹಿಸ್ಕರಿಸಲು ನಿರ್ಧರಿಸಿದ್ದರು. ಚುನಾವಣೆ ವೇಳೆಯಲ್ಲಿ ಆಲ್ಬೂರು ಹಾಗೂ ಅಣಪನಹಳ್ಳಿ ಗ್ರಾಮಗಳ ನಡುವೆ ಗಲಾಟೆಗಳಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಿ ನೊಣವಿನಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net