ಗ್ರಾಪಂ ಚುನಾವಣೆಗೆ ಸ್ಪರ್ಧಿಸಿದೋದಕ್ಕೆ ಏನೆಲ್ಲ ತಯಾರಿ ಬೇಕು - ಇಲ್ಲಿದೆ ವಿವರ..

Voting
Published on

ಬೆಂಗಳೂರು : ರಾಜ್ಯದ 5,762 ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆ ನಿಗದಿಯಾಗಿದೆ. ಈ ಚುನಾವಣೆಯನ್ನು ಎಲ್ಲ ರಾಜಕೀಯ ಪಕ್ಷಗಳೂ ಗಂಭೀರವಾಗಿ ಪರಿಗಣಿಸಿರುವುದರಿಂದ ಚುನಾವಣಾ ಕಣ ರಂಗೇರಲಿದೆ. ಡಿಸೆಂಬರ್ 22 ಹಾಗೂ 27ರಂದು ಮತದಾನ ನಡೆಯಲಿದೆ. ಡಿ.30 ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರ ಬೀಳಲಿದೆ. ಎರಡು ಹಂತಗಳಲ್ಲಿ ಈ ಬಾರಿ ಚುನಾವಣೆ ನಡೆಯಲಿದ್ದು, ಒಟ್ಟು 2,96,15,048 ಮತದಾರರು 92,121 ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ.

ಮೊದಲ ಹಂತದ ನಾಮಪತ್ರ ಸಲ್ಲಿಕೆಗೆ ಸಂಬಂಧಿಸಿದಂತೆ ಡಿ.7 ರಂದು ಆಯಾ ಜಿಲ್ಲಾಧಿಕಾರಿಗಳು ಅಧಿಸೂಚನೆ ಪ್ರಕಟಿಸಲಿದ್ದಾರೆ. ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ಅದೇ ರೀತಿ ಎರಡನೇ ಹಂತದ ಅಧಿಸೂಚನೆ ಡಿ.11 ರಂದು ಹೊರಡಿಸಲಾಗುತ್ತದೆ. ಕರೊನಾ ಕರಿನೆರಳಿನ ಕಾರಣ ಬಹುತೇಕ ಕೇಂದ್ರ ಗೃಹ ಇಲಾಖೆ ಮಾರ್ಗಸೂಚಿ ಅನ್ವಯ ಚುನಾವಣೆ ನಡೆಸಲು ನಿಧರಿಸಲಾಗಿದೆ. ನಾಮಪತ್ರ ಸಲ್ಲಿಕೆ ಹಂತದಿಂದ ಮತದಾನದವರೆಗೆ ಕರೊನಾ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ.
ಈ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಕೆಲವು ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ನಾಮಪತ್ರದ ಜತೆಗೆ ನಿಗದಿತ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಲೋಕಸಭೆ, ವಿಧಾನಸಭೆ ಸೇರಿದಂತೆ ಬೇರೆ ಬೇರೆ ಚುನಾವಣೆಯಂತೆಯೇ ಗ್ರಾಮ ಪಂಚಾಯಿತಿ ಚುನಾವಣೆ ಕಣಕ್ಕಿಳಿಯುವವರು ಕೆಲವು ದಾಖಲೆಗಳನ್ನು ಸಲ್ಲಿಸಬೇಕು.

ಹಾಗಿದ್ದರೆ ಏನೇನು ಬೇಕು?: ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವವರು ಪ್ರಪತ್ರ-5ರಲ್ಲಿ ನಾಮಪತ್ರ ಸಲ್ಲಿಸಬೇಕು. ಒಬ್ಬ ವ್ಯಕ್ತಿ ನಾಲ್ಕು ನಾಮಪತ್ರಗಳನ್ನು ಸಲ್ಲಿಸಬಹುದು. ಅದರ ಜತೆಗೆ ಜಾತಿ ಪ್ರಮಾಣಪತ್ರ, ೋಷಣಾ ಪತ್ರ(ಅಫಿಡೆವಿಟ್) ಇದು 20 ರೂ. ಮುಖ ಬೆಲೆಯ 2 ಪ್ರತಿ 1 ಝರಾಕ್ಸ್ ಪ್ರತಿ ಸಲ್ಲಿಸಬೇಕು.

ಠೇವಣಿ ಹಣ ಎಷ್ಟು ?: ಸಾಮಾನ್ಯ ವರ್ಗದ ಸ್ಥಾನಕ್ಕೆ 200 ರೂ. ಹಾಗೂ ಮೀಸಲಿರಿಸಿದ ಸ್ಥಾನ(ಎಸ್ಸಿ/ಎಸ್ಟಿ/ಒಬಿಸಿ ಪ್ರವರ್ಗ ಮತ್ತು ಮಹಿಳೆಯರಿಗೆ) ಗಳಿಗೆ 100 ರೂ. ಠೇವಣಿ ಇರಿಸಬೇಕು.

ಇನ್ನೇನು ದಾಖಲೆ: ಮತಪತ್ರಗಳಲ್ಲಿ ಮುದ್ರಿಸಬೇಕಾದ ಹೆಸರಿನ ಬಗ್ಗೆ ಲಿಖಿತ ಪತ್ರವನ್ನು ನೀಡಬೇಕು, ಅಭ್ಯರ್ಥಿಗಳು ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕಾದ ಹೆಚ್ಚುವರಿ ಮಾಹಿತಿ (ಪ್ರೊಫೈಲ್), ಗ್ರಾಮ ಪಂಚಾಯಿತಿಯಿಂದ ಪಡೆದ ಬೇಬಾಕಿ ಪ್ರಮಾಣಪತ್ರ, ಅಭ್ಯರ್ಥಿಗಳ ಭಾವಚಿತ್ರ(ಪಾಸ್ ಪೋರ್ಟ್ ಸೈಜ್)-3 ಹಾಗೂ ಇತ್ತೀಚಿನ ಮತದಾರರ ಗುರುತಿನ ಚೀಟಿ/ಆಧಾರ್ ಕಾರ್ಡ್ ಝರಾಕ್ಸ್ ಪ್ರತಿಗಳನ್ನು ಸಲ್ಲಿಸುವುದನ್ನು ಕಡ್ಡಾಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net