

| ಮಂಜುನಾಥ ಕೋಳಿಗುಡ್ಡ ಬೆಳಗಾವಿ
ಹಳ್ಳಿಗಳಲ್ಲಿ ತೀವ್ರ ಪೈಪೋಟಿ, ನಾನಾ ಕಸರತ್ತು ನಡೆಸಿ ಗೆಲುವು ಸಾಧಿಸಿರುವ ಗ್ರಾಪಂ ಸದಸ್ಯರಿಗೆ ಇದೀಗ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ‘ಮೀಸಲಾತಿ’ ಆತಂಕ ಎದುರಾಗಿದೆ. ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಬಲಾಢ್ಯ ಸದಸ್ಯರು ಹಾಲಿ, ಮಾಜಿ ಶಾಸಕರ ಬೆನ್ನು ಬಿದ್ದಿದ್ದಾರೆ.
ರಾಜ್ಯದ 5,728 ಗ್ರಾಪಂಗಳಲ್ಲಿ 91,339 ಸದಸ್ಯ ಸ್ಥಾನಗಳ ಚುನಾವಣೆ ನಡೆದಿದ್ದು, ಗೆದ್ದಿರುವ ಸದಸ್ಯರು ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಮೇಲೆ ಕಣ್ಣಿಟ್ಟಿದ್ದಾರೆ. ರಾಜಕೀಯ ಹಾಗೂ ಆರ್ಥಿಕವಾಗಿ ಬಲಾಢ್ಯರಾದ ಅಭ್ಯರ್ಥಿಗಳು ತಮಗೆ ಅನುಕೂಲವಾಗುವಂತೆ ಮೀಸಲಾತಿ ಪಡೆದುಕೊಳ್ಳಲು ಕಸರತ್ತು ಆರಂಭಿಸಿದ್ದಾರೆ. ಅಲ್ಲದೆ, ತಮ್ಮಲ್ಲಿ ಬಹುಮತವಿರುವಷ್ಟು ಸದಸ್ಯರು ಇದ್ದಾರೆ ಎಂದು ಶಾಸಕರ ಕಚೇರಿಗಳಿಗೆ ಪರೇಡ್ ಮಾಡುತ್ತಿದ್ದಾರೆ.
ಗೆದ್ದವರಿಗೆ ಪ್ರವಾಸ: ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್ನ ಸ್ಥಳೀಯ ಮುಖಂಡರು ಇದೀಗ ಗೆದ್ದಿರುವ ಅಭ್ಯರ್ಥಿಗಳು ನಮ್ಮವರು ಎನ್ನುತ್ತಿದ್ದಾರೆ. ಅಲ್ಲದೆ, ಅವರ ಮನವೊಲಿಸುವ ಕಸರತ್ತು ಆರಂಭಿಸಿದ್ದಾರೆ. ಈ ನಡುವೆ ಅಭ್ಯರ್ಥಿಗಳ ಗೆಲುವಿಗಾಗಿ ಲಕ್ಷಾಂತರ ರೂ. ಖರ್ಚು ಮಾಡಿರುವ ರಿಯಲ್ ಎಸ್ಟೇಟ್ ಉದ್ಯಮಿಗಳು ತಮಗೆ ಬೇಕಾದವರನ್ನು ಅಧ್ಯಕ್ಷರನ್ನಾಗಿ ಮಾಡಲು ಮತ್ತೆ ಹಣ ಖರ್ಚು ಮಾಡಲು ಮುಂದಾಗಿದ್ದಾರೆ. ಪರಿಣಾಮ ಗೆದ್ದಿರುವ ಸದಸ್ಯರನ್ನು ಪ್ರವಾಸ ಕರೆದುಕೊಂಡು ಹೋಗುವ ವ್ಯವಸ್ಥೆ ಆರಂಭಿಸಿದ್ದಾರೆ.
ಸನ್ಮಾನ ಕಾರ್ಯಕ್ರಮ
ಬುಧವಾರ ತಡರಾತ್ರಿ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಆಯಾ ತಾಲೂಕು ಕೇಂದ್ರಗಳಲ್ಲಿರುವ ಹಾಲಿ ಮತ್ತು ಮಾಜಿ ಶಾಸಕ ಕಚೇರಿಗಳಲ್ಲಿ ತಡರಾತ್ರಿಯೇ ಗೆದ್ದಿರುವ ಸದಸ್ಯರುಗಳಿಗೆ ಸ್ಪರ್ಧೆಯ ರೀತಿಯಲ್ಲಿ ಸನ್ಮಾನ ಕಾರ್ಯಕ್ರಮ ಜರುಗಿದವು.
ಮೀಸಲಾತಿಗಾಗಿ ಪಕ್ಷಗಳ ಪೈಪೋಟಿ
ಈ ಬಾರಿ ಗ್ರಾಪಂ ಚುನಾವಣೆಯಲ್ಲಿ ಯುವಕರು, ಆರ್ಥಿಕ ಬಲಾಢ್ಯರು ಹಾಗೂ ಪ್ರಬಲ ಸಮುದಾಯದ ಬೆಂಬಲ ಹೊಂದಿರುವ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇವರು ಗ್ರಾಪಂ ಅಧ್ಯಕ್ಷ ಸ್ಥಾನದ ತಮ್ಮ ಪೆನಲ್ನಿಂದ ತಪ್ಪಿ ಹೋಗಬಾರದು ಎಂದು ಮೀಸಲಾತಿಗಾಗಿ ರಾಜಕೀಯ ಪಕ್ಷಗಳು ಪರೋಕ್ಷವಾಗಿ ಪೈಪೋಟಿ ಆರಂಭಿಸಿವೆ. ಸಾಮಾನ್ಯ ವರ್ಗ, ಎಸ್ಸಿ, ಎಸ್ಟಿ ವರ್ಗದ ಮಹಿಳಾ ಅಭ್ಯರ್ಥಿಗಳನ್ನು ಹಿಡಿದಿಟ್ಟುಕೊಳ್ಳುತ್ತಿದ್ದಾರೆ. ತಮ್ಮ ವಿರೋಧ ಬಣಗಳಿಗೆ ಅಧ್ಯಕ್ಷ ಸ್ಥಾನ ಹೋಗದಂತೆ ಮೀಸಲಾತಿ ಪ್ರಕಟಿಸಲು ಶಾಸಕರುಗಳ ಮೂಲಕ ಪಕ್ಷಗಳ ಮುಖಂಡರು ಪ್ರಯತ್ನಿಸುತ್ತಿದ್ದಾರೆ.
ಸದಸ್ಯರಿಗೆ ಭರ್ಜರಿ ಆಫರ್!
ಗ್ರಾಪಂ ಅಧ್ಯಕ್ಷ ಸ್ಥಾನ ಪಡೆದುಕೊಳ್ಳಬೇಕು ಎಂದು ಲಕ್ಷಾಂತರ ರೂ. ಖರ್ಚು ಮಾಡಿ ಸದಸ್ಯರನ್ನು ಗೆಲ್ಲಿಸಿಕೊಂಡು ಬಂದಿರುವ ಆರ್ಥಿಕ, ರಾಜಕೀಯ ಬಲಾಢ್ಯರು ಹೊಸ ಮಾರ್ಗ ಅನುಸರಿಸಿದ್ದಾರೆ. ಅಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಸದಸ್ಯರಿಗೆ ಒಂದು ವಾರಗಳ ಪ್ರವಾಸ, ರೇಷ್ಮೆ ಸೀರೆ, 5 ಗ್ರಾಂ ಚಿನ್ನ, ಸರ್ಕಾರದ ವಸತಿ ಯೋಜನೆಯಲ್ಲಿ ಮನೆಗಳ ಹಂಚಿಕೆ ಸೇರಿ ಭರ್ಜರಿ ಆಫರ್ ನೀಡುತ್ತಿದ್ದಾರೆ. ಹಾಗಾಗಿ ಚುನಾವಣಾ ಆಯೋಗವು ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಮೇಲೆ ನಿಗಾ ವಹಿಸಬೇಕು ಎಂದು ಗ್ರಾಪಂನ ಮಾಜಿ ಸದಸ್ಯ ಭೀಮಶಿ ಅರಕೇರಿ, ಮಾರುತಿ ನಾಯಕರ್ ವಿನಂತಿಸಿದ್ದಾರೆ.
ಗೆದ್ದವರ ಸಮ್ಮುಖ ಮೀಸಲು ನಿಗದಿ
ಬೆಂಗಳೂರು: ಗಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ 30 ದಿನಗಳ ಸಮಯ ಇದ್ದು, ಮೀಸಲಾತಿಯನ್ನು ತಾಲೂಕುವಾರು ಗೆದ್ದ ಪ್ರತಿನಿಧಿಗಳ ಸಮ್ಮುಖದಲ್ಲಿ ಅಂತಿಮಗೊಳಿಸಲಾಗುತ್ತದೆ. ತಾಲೂಕುವಾರು ಯಾವ ವರ್ಗಕ್ಕೆ ಎಷ್ಟು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳು ಸಿಗಬೇಕು ಎಂಬ ಪಟ್ಟಿಗೆ ರಾಜ್ಯ ಚುನಾವಣಾ ಆಯೋಗ ಒಪ್ಪಿಗೆ ನೀಡಿದೆ. ಈ ಪಟ್ಟಿ ಆಧರಿಸಿ ಆಯಾ ಜಿಲ್ಲಾಧಿಕಾರಿ ಪಂಚಾಯಿತಿವಾರು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮೀಸಲಾತಿ ನಿಗದಿ ಮಾಡಲಿದ್ದಾರೆ. 1993ರಿಂದ ಪ್ರತಿ ಪಂಚಾಯಿತಿಯಲ್ಲಿ ಯಾವ ವರ್ಗಕ್ಕೆ ಎಷ್ಟು ಬಾರಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಸಿಕ್ಕಿದೆ ಎಂಬ ಆಧಾರದಲ್ಲಿ ರೋಟೆಶನ್ ಪ್ರಕಾರ ಮೀಸಲಾತಿ ನಿಗದಿಯಾಗಲಿದೆ. ಜನಸಂಖ್ಯೆಯನ್ನು ಗಮನದಲ್ಲಿ ಇಟ್ಟುಕೊಳ್ಳಲಾಗುತ್ತದೆ. ಕನಿಷ್ಠ ಕಳೆದ ಬಾರಿ ನಿಗದಿಯಾಗಿದ್ದ ವರ್ಗಕ್ಕೆ ಈ ಬಾರಿಯೂ ಅವಕಾಶ ಸಿಗದಂತೆ ಎಚ್ಚರ ವಹಿಸಲಾಗುತ್ತದೆ. ಜಿಲ್ಲಾಧಿಕಾರಿಗಳು ಪಂಚಾಯಿತಿವಾರು ಗೆದ್ದ ಅಭ್ಯರ್ಥಿಗಳ ಅಧಿಸೂಚನೆ ಹೊರಡಿಸಿದ ನಂತರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಇದಕ್ಕೆ ಫಲಿತಾಂಶ ಬಂದ ನಂತರ 30 ದಿನಗಳ ಕಾಲಾವಕಾಶ ಇದೆ. ರೋಟೆಶನ್ ಆಧಾರದಲ್ಲಿ ಮೀಸಲಾತಿ ನಿಗದಿ ಮಾಡಿದ ನಂತರ ಜಿಲ್ಲಾಧಿಕಾರಿಗಳು ಪ್ರತಿ ತಾಲೂಕಿನಲ್ಲಿ ಎಲ್ಲ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳ ಸಭೆಯನ್ನು ಕರೆದು ಅಲ್ಲಿ ಮೀಸಲಾತಿಯನ್ನು ಪ್ರಕಟಿಸಲಿದ್ದಾರೆ. ಯಾವುದಾದರೂ ಆಕ್ಷೇಪಣೆಗಳಿದ್ದರೆ ಅಲ್ಲಿಯೇ ಸಲ್ಲಿಸಬಹುದಾಗಿದೆ. ಮೀಸಲಾತಿ ನಿರ್ಧಾರ ಸಂಪೂರ್ಣ ಜಿಲ್ಲಾಧಿಕಾರಿಗಳದ್ದೇ ಜವಾಬ್ದಾರಿಯಾಗಿದ್ದು, ಮಾಹಿತಿ ಹಾಗೂ ಮಾರ್ಗದರ್ಶನವನ್ನು ಆಯೋಗ ನೀಡಲಿದೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಡಾ. ಬಿ.ಬಸವರಾಜು ಸ್ಪಷ್ಟಪಡಿಸಿದರು.
ಬೇಡವೆಂದರೂ ಒಲಿದು ಬಂದ ಅದೃಷ್ಟ!
ಕೊಳ್ಳೇಗಾಲ: ಲಾಟರಿ ಮೂಲಕ ದೊರೆಯುವ ವಿಜಯ ತನಗೆ ಇಷ್ಟವಿಲ್ಲವೆಂದು ಹೇಳಿ ಎಣಿಕೆ ಕೇಂದ್ರದಿಂದ ಹೊರ ನಡೆದಿದ್ದ ಅಭ್ಯರ್ಥಿಗೇ ಅದೃಷ್ಟ ಒಲಿದುಬಂದ ಅಪರೂಪದ ಪ್ರಸಂಗ ಬುಧವಾರ ತಡರಾತ್ರಿ ನಡೆಯಿತು. ತಾಲೂಕಿನ ಸತ್ತೇಗಾಲ ಗ್ರಾಪಂಗೆ ಪಾಸ್ಕಲ್ನಗರದ 11ನೇ ವಾರ್ಡಿನ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಆರೋಗ್ಯಸ್ವಾಮಿ ಅವರಿಗೆ 458 ಮತ ಹಾಗೂ ಇವರ ಪ್ರತಿಸ್ಪರ್ಧಿ ವಿನ್ಸೆಂಟ್ಗೆ 461 ಮತ ದೊರಕಿದ್ದವು. 9 ಅಂಚೆ ಮತಗಳ ಪೈಕಿ 6 ತಿರಸ್ಕೃತಗೊಂಡವು. ಉಳಿದ 3 ಆರೋಗ್ಯಸ್ವಾಮಿಗೆ ಸಿಕ್ಕಿದ್ದರಿಂದ ಇಬ್ಬರೂ ಸಮಾನ ಮತ ಪಡೆದರು. ಈ ವೇಳೆ ಚುನಾವಣಾಧಿಕಾರಿ ಲಾಟರಿ ಮೂಲಕ ಫಲಿತಾಂಶ ನಿರ್ಧರಿಸಲು ಮುಂದಾದರು. ಲಾಟರಿ ಮೂಲಕ ಬರುವ ವಿಜಯ ಒಪ್ಪಲು ನನಗೆ ಮನಸ್ಸಿಲ್ಲ. ಆದ್ದರಿಂದ ಪ್ರತಿಸ್ಪರ್ಧಿ ವಿನ್ಸೆಂಟ್ರನ್ನೇ ವಿಜೇತರೆಂದು ಘೂಷಿಸುವಂತೆ ಸ್ವತಃ ಹೇಳಿದ ಆರೋಗ್ಯಸ್ವಾಮಿ ಮತ ಎಣಿಕೆ ಕೇಂದ್ರದಿಂದ ಹೊರ ನಡೆದರು. ಅದನ್ನೊಪ್ಪದ ಚುನಾವಣಾಧಿಕಾರಿ ಲಾಟರಿ ಎತ್ತಿದಾಗ, ಆರೋಗ್ಯಸ್ವಾಮಿ ಹೆಸರೇ ಬಂದಿದೆ.
ಬಿಜೆಪಿ ರಾಜ್ಯ ಹಾಗೂ ರಾಷ್ಟ್ರದಲ್ಲಿ ದಿನೇದಿನೆ ಸಾಧನೆ ಉತ್ತಮಗೊಳಿಸುತ್ತ ಮುನ್ನಡೆಯುತ್ತಿದೆ. ಪ್ರಸ್ತುತ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ರಾಜ್ಯದ ಶೇ.60 ಕಡೆ ಜಯ ಗಳಿಸಿದ್ದಾರೆ. ಇದಕ್ಕೆ ಕಾರಣ ಸಾಮೂಹಿಕ ನಾಯಕತ್ವ. ಉಸ್ತುವಾರಿ ಸಚಿವರು, ಶಾಸಕರು, ಕಾರ್ಯಕರ್ತರ ಪರಿಶ್ರಮ. ಹಾಗೆಯೆ 5785 ಗ್ರಾಪಂ ಪೈಕಿ 3800 ರಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರ ಹೊಂದಲಿದ್ದಾರೆ. ಇದು ದೊಡ್ಡ ಸಾಧನೆ. | ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ
ಗ್ರಾಪಂಗಳಲ್ಲಿ ಪ್ರಮೀಳಾರಾಜ್ಯ ಬೆಂಗಳೂರು: ಗ್ರಾಮ ಪಂಚಾಯಿತಿ ಮತಗಳ ಎಣಿಕೆಯಲ್ಲಿನ ನಿಯಮ ಹಾಗೂ ಇತರ ಕಾರಣಗಳಿಂದ ಮಹಿಳಾ ಸಾಮ್ರಾಜ್ಯವೇ ಸೃಷ್ಠಿಯಾಗುತ್ತಿದೆ. ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಶೇ.50 ಮೀಸಲಾತಿ ಇದ್ದರೂ ಈ ಬಾರಿ ಪುರುಷರಿಗಿಂತ 2921 ಅಧಿಕ ಮಹಿಳೆಯರು ಆಯ್ಕೆಯಾಗಿದ್ದಾರೆ. ಒಂದು ಗ್ರಾಮದಲ್ಲಿ ವಾರ್ಡ್ಗೆ ಯಾವುದೇ ಮೀಸಲಾತಿ ಇದ್ದರೂ ಪರಿಶಿಷ್ಟ ಜಾತಿ ಮತ್ತು ವರ್ಗದವರು ಹೆಚ್ಚು ಮತ ಪಡೆದವರ ಆಯ್ಕೆ ಮಾಡಲಾಗುತ್ತದೆ. ಅದರಲ್ಲೂ ಮಹಿಳೆಯರಿಗೆ ಮೊದಲ ಆದ್ಯತೆ. ಮಹಿಳೆಯರಿಗೆ ಪುರುಷರಿಗಿಂತ ಹೆಚ್ಚು ಸ್ಥಾನಗಳು ಲಭ್ಯವಾಗಲಿಕ್ಕೆ ಇದೂ ಪ್ರಮುಖ ಕಾರಣ. ಒಟ್ಟು ಸದಸ್ಯರಲ್ಲಿ 43,904 ಪುರುಷರು ಆಯ್ಕೆಯಾಗಿದ್ದರೆ, 46,825 ಮಹಿಳೆಯರು ಗೆದ್ದು ಬಂದಿದ್ದಾರೆ. ಅನುಸೂಚಿತ ಜಾತಿ, ಅನುಸೂಚಿತ ಪಂಗಡ ಹಾಗೂ ಹಿಂದುಳಿದ ವರ್ಗಗಳ ಎ ನಲ್ಲಿ ಮಹಿಳಾ ಸದಸ್ಯರ ಸಂಖ್ಯೆ ಹೆಚ್ಚಾಗಿದ್ದರೆ, ಸಾಮಾನ್ಯ ಹಾಗೂ ಹಿಂದುಳಿದ ವರ್ಗಗಳ ಬಿ ನಲ್ಲಿ ಪುರುಷರ ಸಂಖ್ಯೆ ಜಾಸ್ತಿ ಇದೆ. ಅನುಸೂಚಿತ ಜಾತಿಯಲ್ಲಿ ಪುರುಷರು 7542 ಹಾಗೂ ಮಹಿಳೆಯರು 10,853 ಸ್ಥಾನಗಳನ್ನು ಗೆದ್ದಿದ್ದಾರೆ. ಅನುಸೂಚುತ ಪಂಗಡದಲ್ಲಿ ಪುರುಷರು 3019 ಹಾಗೂ ಮಹಿಳೆಯರು 7508, ಹಿಂದುಳಿದ ವರ್ಗ ಎ ನಲ್ಲಿ ಪುರುಷರು 4890 ಹಾಗೂ ಮಹಿಳೆಯರು 8052, ಹಿಂದುಳಿದ ವರ್ಗ ಬಿ ನಲ್ಲಿ 1894 ಪುರುಷರು ಹಾಗೂ 1232 ಮಹಿಳೆಯರು ಗೆದ್ದಿದ್ದಾರೆ. ಸಾಮಾನ್ಯ ವರ್ಗದಲ್ಲಿ 26,559 ಪುರುಷರು ಮತ್ತು 19,180 ಮಹಿಳೆಯರು ಈ ಬಾರಿ ಆಯ್ಕೆಯಾಗಿದ್ದಾರೆ.
ಅಧಿಕಾರ ಕಳೆದುಕೊಳ್ಳುವ ಭಯದಲ್ಲಿ ಯಡಿಯೂರಪ್ಪ ಸುಳ್ಳು ಹೇಳುತ್ತಿದ್ದಾರೆ. ನನಗಿರುವ ಮಾಹಿತಿ ಪ್ರಕಾರ, ಗೆದ್ದ ಹೆಚ್ಚಿನ ಸಂಖ್ಯೆಯ ಪಂಚಾಯತಿ ಸದಸ್ಯರು ಕಾಂಗ್ರೆಸ್ ಕಾರ್ಯಕರ್ತರಾಗಿದ್ದಾರೆ. ಬಿಜೆಪಿಗೆ ಅನೇಕ ಕಡೆ ಅಭ್ಯರ್ಥಿಗಳೇ ಸಿಕ್ಕಿಲ್ಲ.ಹಲವು ಜಿಲ್ಲೆಗಳಲ್ಲಿ ಪೂರ್ಣ ಫಲಿತಾಂಶ ಹೊರಬಂದಿಲ್ಲ, ಮೀಸಲಾತಿ ಅಡಿ ಅಧ್ಯಕ್ಷ-ಸ್ಥಾನದ ಹಂಚಿಕೆಯಾಗಿಲ್ಲ, ಆಗಲೇ ಸಿಎಂ ತಮ್ಮ ಪಕ್ಷ 3800ಕ್ಕೂ ಅಧಿಕ ಪಂಚಾಯತಿಗಳಲ್ಲಿ ಗೆದ್ದಿದ್ದೇವೆ ಎನ್ನುತ್ತಿರುವುದು ಹಾಸ್ಯಾಸ್ಪದ. | ಸಿದ್ದರಾಮಯ್ಯ ವಿಧಾನಸಭೆ ವಿಪಕ್ಷ ನಾಯಕ
ತರಕಾರಿ ಮಾರಿದ ವಂಡ್ರಮ್ಮ
ತಳ್ಳುಗಾಡಿ ಮೂಲಕ ಗ್ರಾಮದಲ್ಲಿ ತರಕಾರಿ ಮಾರಾಟ ಮಾಡುವ ವಂಡ್ರಮ್ಮ ಬಳ್ಳಾರಿ ತಾಲೂಕಿನ ಕಪ್ಪಗಲ್ಲು ಗ್ರಾಪಂಗೆ ಸ್ಪರ್ಧಿಸಿ, ಗೆಲುವು ಕಂಡಿದ್ದಾರೆ. ಆದರೂ ಗುರುವಾರ ನಿತ್ಯದ ಕಾಯಕದಲ್ಲಿ ತೊಡಗಿಸಿಕೊಂಡು ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದರು.
ಇಂಜಿನಿಯರ್ ವಿರುದ್ಧ ಮಂಗಳಮುಖಿ ಗೆಲುವು
ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ಚೋರನೂರು ಗ್ರಾಪಂಗೆ ಸ್ಪರ್ಧಿಸಿದ್ದ ಮಂಗಳಮುಖಿ ಎ.ಅಂಜಿನಮ್ಮ (490), ಪ್ರತಿಸ್ಪರ್ಧಿಯಾದ ಮೆಕಾನಿಕಲ್ ಇಂಜಿನಿಯರ್ ಜಗದೀಶ್ (472) ವಿರುದ್ಧ 18 ಮತಗಳ ಅಂತರದಿಂದ ಗೆದ್ದಿದ್ದಾರೆ.
ಇನ್ನೂ ಪೂರ್ಣ ಪ್ರಮಾಣದಲ್ಲಿ ಫಲಿತಾಂಶ ಬರಬೇಕಿದೆ. ಈವರೆಗಿನ ಫಲಿತಾಂಶದಲ್ಲಿ ಪಕ್ಷ ಬೆಂಬಲಿಸಿದ ಅಭ್ಯರ್ಥಿಗಳ ಸಾಧನೆ ಸಮಾಧಾನ ತಂದಿದೆ. ಬಿಜೆಪಿಯಲ್ಲಿ ಯಾವ ಆಂತರಿಕ ಸಮಸ್ಯೆ ಇದೆಯೋ ಗೊತ್ತಿಲ್ಲ. ಹೀಗಾಗಿ ಅವರು ನನ್ನ ಕ್ಷೇತ್ರದಲ್ಲೇ ಗೆದ್ದಿದ್ದೇವೆ ಎನ್ನುತ್ತಿದ್ದಾರೆ. ಗ್ರಾಪಂ ರಚನೆಯಾಗಲಿ ಯಾರು ಗೆದ್ದಿದ್ದಾರೆ ಎಂದು ಗೊತ್ತಾಗುತ್ತದೆ. | ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ
ಹತ್ತು ಅಭ್ಯರ್ಥಿ ಗೆಲ್ಲಿಸಿದ್ದ ಮುಖಂಡನ ಹತ್ಯೆ ಬೆಳಗಾವಿ: ಗ್ರಾಪಂ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ಪೆನಲ್ನ ಮುಖಂಡನನ್ನು ಬುಧವಾರ ತಡರಾತ್ರಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆ ಮಾಡಲಾಗಿದ್ದು, ಕೊಲೆ ನಡೆದ ಗಂಟೆಯೊಳಗೆ ಪೊಲೀಸರು ಆರು ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹುಕ್ಕೇರಿ ತಾಲೂಕಿನ ಸುಲ್ತಾನ್ಪುರ ಗ್ರಾಮದಲ್ಲಿ ದುಷ್ಕೃತ್ಯ ನಡೆದಿದ್ದು, ಶಾನೂರಸಾಬ್ ದಸ್ತಗಿರಸಾಬ್ ಮುಲ್ಲಾ (50) ಕೊಲೆಯಾದ ವ್ಯಕ್ತಿ. ಬಂಧಿತರನ್ನು ಅದೇ ಗ್ರಾಮದ ಜಹಾಂಗೀರ ಮುಲ್ಲಾ, ಸುಲ್ತಾನ್ಸಾಬ ಮುಲ್ಲಾ, ಹಸನ್ಸಾಬ್ ಮುಲ್ಲಾ, ದಸ್ತಗೀರ ಮುಲ್ಲಾ, ತೌಸೀಫ್ ಮುಲ್ಲಾ ಹಾಗೂ ಮೋಸಿನ್ ಖಾಜಿ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಪರಾಭವಗೊಂಡ ಅಭ್ಯರ್ಥಿ ಶಬ್ಬೀರ್ ಮುಲ್ಲಾ ಸಂಬಂಧಿಕರು. ಶಾನೂರಸಾಬ್ ಮುಲ್ಲಾ ಪೆನೆಲ್ನಿಂದ ಸ್ಪರ್ಧಿಸಿದ್ದ ಎಲ್ಲ 10 ಅಭ್ಯರ್ಥಿಗಳು ಭರ್ಜರಿ ಜಯ ದಾಖಲಿಸುವ ಮೂಲಕ ಪಂಚಾಯಿತಿ ಗದ್ದುಗೆ ಹಿಡಿಯಲು ಯಶಸ್ವಿಯಾಗಿದ್ದರು. ಇದರಿಂದ ಕಂಗೆಟ್ಟಿದ್ದ ವಿರೋಧಿ ಬಣದವರು ಗೆಲುವು ಸಾಧಿಸಿದ್ದ ಬಶೀರ್ ಮುಲ್ಲಾ ಸಹೋದರ ಶಾನೂರ್ ಮುಲ್ಲಾ ಹತ್ಯೆಗೈದಿದೆ.
ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದಾರೆ. ಇದರಿಂದ ಬಿಜೆಪಿ ರಾಜ್ಯವ್ಯಾಪಿಯಾಗಿದೆ. ಅತಿ ಹೆಚ್ಚು ಯುವಕರು ಗೆಲುವು ಸಾಧಿಸಿದ್ದು ಗ್ರಾಮೀಣ ಪ್ರದೇಶದಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿದಂತಾಗಿದೆ. | ನಳಿನ್ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷ