

ಕೊಪ್ಪಳ: ಜಿಲ್ಲೆಯ 149 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ಪೂರ್ಣಗೊಂಡಿದ್ದು, ಸದ್ಯ ಪ್ರತಿ ಮನೆಯಲ್ಲಿ ಸೋಲು-ಗೆಲುವಿನ ಲೆಕ್ಕಾಚಾರಗಳು ಶುರವಾಗಿವೆ.
ಮೊದಲ ಹಂತದಲ್ಲಿ 73 ಹಾಗೂ ಎರಡನೇ ಹಂತದಲ್ಲಿ 76 ಗ್ರಾಪಂಗಳಿಗೆ ಚುನಾವಣೆ ನಡೆದಿದೆ. ವರ್ಷದ ಕೊನೆಯಲ್ಲಿ ಫಲಿತಾಂಶ ದೊರೆಯಲಿದ್ದು, ಮುಂಬರುವ 2021ನೇ ವರ್ಷ ಕೆಲವರ ಪಾಲಿಗೆ ಸಿಹಿಯಾದರೆ, ಇನ್ನು ಕೆಲವರಿಗೆ ಸೋಲಿನ ಕಹಿ ಉಣಬಡಿಸಲಿದೆ. ಗೆಲ್ಲಲು ನಾನಾ ತಂತ್ರ ಅನುಸರಿಸಿರುವ ಅಭ್ಯರ್ಥಿಗಳು, ಸೋಲು-ಗೆಲುವಿನ ಬಗೆಗಿನ ಸಾಧ್ಯತೆಗಳನ್ನು ಮೆಲುಕು ಹಾಕುತ್ತಿದ್ದಾರೆ. ಗೆಲುವಿನ ದಡ ಸೇರಿಸಬಹುದಾದ ಬೆಳವಣಿಗೆಗಳು, ಸೋಲುವ ಸಾಧ್ಯತೆ ಕಂಡುಬಂದ ಪ್ರಸಂಗಗಳ ಬಗ್ಗೆ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿವೆ. ತಮ್ಮ ಪರವಾಗಿ ಅತಿ ಹೆಚ್ಚು ಮತಗಳು ಬಂದಿವೆ ಎಂಬ ಲೆಕ್ಕಾಚಾರದಲ್ಲಿ ಕೆಲವರು ಸಿಹಿ ಹಂಚಿ ಮುಂಗಡವಾಗಿಯೇ ಸಂಭ್ರಮಿಸುತ್ತಿದ್ದಾರೆ. ಇನ್ನು ಕೆಲವರು ಶೇ.50:50 ಸೋಲು-ಗೆಲುವಿನ ಬಗ್ಗೆ ಮಾತನಾಡಿದರೆ, ಮತ್ತೆ ಕೆಲವರು ಅದೃಷ್ಟದಾಟ ಎಂದು ನಿಟ್ಟುಸಿರು ಬಿಡುತ್ತಿದ್ದಾರೆ. ಇಷ್ಟದ ದೇವರು, ಮದುವೆ ಸೇರಿ ಇತರ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಚುನಾವಣೆ ಗುಂಗಿನಿಂದ ಕ್ಷಣಕಾಲ ವಿಶ್ರಾಂತಿ ಪಡೆಯುತ್ತಿದ್ದಾರೆ. ಅಂತಿಮವಾಗಿ ಯಾರಿಗೆ ವಿಜಯ ಲಕ್ಷ್ಮೀ ಒಲಿಯುವಳೆಂಬುದು ಇನ್ನೊಂದು ದಿನದಲ್ಲಿ ಬಹಿರಂಗವಾಗಲಿದೆ. ಹೀಗಾಗಿ ಎಲ್ಲರ ಚಿತ್ತ ಮತ ಎಣಿಕೆ ದಿನದತ್ತ ನೆಟ್ಟಿದ್ದು, ಪಂಚಾಯಿತಿ ಫೈಟ್‌ಗೆ ವರ್ಷದ ಕೊನೆಯಲ್ಲಿ ಅಂತಿಮ ತೆರೆ ಬೀಳಲಿದೆ.
ಕನಕಗಿರಿ ತಾಲೂಕಿನಲ್ಲಿ ಹೆಚ್ಚು
ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಭಾನುವಾರ ನಡೆದ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 3,22,202 ಮತದಾರರು ಮತಚಲಾಯಿಸಿದ್ದಾರೆ. ಗಂಗಾವತಿ, ಕಾರಟಗಿ, ಕನಕಗಿರಿ ಹಾಗೂ ಕುಷ್ಟಗಿ ತಾಲೂಕಿನ 76 ಗ್ರಾಪಂಗಳ 592 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ನಾಲ್ಕು ತಾಲೂಕುಗಳಲ್ಲಿ 3,92,317 ಮತದಾರರಿದ್ದು, ಈ ಪೈಕಿ 3,22,202 ಮತದಾರರು (ಶೇ.82.13)ಮತಚಲಾಯಿಸಿದ್ದಾರೆ. 1,95,339 ಪುರುಷರಲ್ಲಿ 1,62,990 ಮತದಾರರು, 1,96,965 ಮಹಿಳಾ ಮತದಾರರಲ್ಲಿ 1,62,990 ಜನರು ಮತಚಲಾಯಿಸಿದ್ದಾರೆ. ಗಂಗಾವತಿ ತಾಲೂಕಿನ 18 ಗ್ರಾಪಂಗಳ 156 ಮತಗಟ್ಟೆಗಳಲ್ಲಿ ಮತದಾನವಾಗಿದ್ದು, 1,02,175 ಮತದಾರರ ಪೈಕಿ 83,596 ಜನರು ಮತದಾನ ಮಾಡಿದ್ದಾರೆ. ಕಾರಟಗಿ ತಾಲೂಕಿನ 11 ಗ್ರಾಪಂಗಳ 87 ಮತಗಟ್ಟೆಗಳಲ್ಲಿ 57,742 ಮತದಾರರಲ್ಲಿ 47,156 ಜನರು ಮತದಾನ ಮಾಡಿದ್ದಾರೆ. ಕನಕಗಿರಿ ತಾಲೂಕಿನ 11 ಗ್ರಾಪಂಗಳ 67 ಮತಗಟ್ಟೆಗಳಲ್ಲಿ 44,338 ಮತದಾರರ ಪೈಕಿ 38,483 ಜನರು ಮತದಾನ ಮಾಡಿದ್ದಾರೆ. ಕುಷ್ಟಗಿ ತಾಲೂಕಿನ 36 ಗ್ರಾಪಂಗಳ 282 ಮತಗಟ್ಟೆಗಳಲ್ಲಿ 1,88,062 ಮತದಾರರಲ್ಲಿ 1,52,967 ಜನರು ಮತದಾನ ಮಾಡಿದ್ದಾರೆ. ನಾಲ್ಕು ತಾಲೂಕುಗಳ ಪೈಕಿ ಕನಕಗಿರಿ ತಾಲೂಕಿನಲ್ಲಿ ಅತಿ ಹೆಚ್ಚು ಮತದಾನವಾಗಿರುವುದು ವಿಶೇಷ.