ಗ್ರಾಪಂ ಚುನಾವಣೆ: ಗೆದ್ದವರ ಲೆಕ್ಕಾಚಾರ, ಸೋತವರ ಚಿಂತೆ ಏನು?

Gramayana
Published on

| ಗಂಗಾಧರ್ ಬೈರಾಪಟ್ಟಣ ರಾಮನಗರ

ಗೆದ್ದವನು ಸೋತ, ಸೋತವನು ಸತ್ತ... ಎನ್ನುವ ಮಾತು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಹುತೇಕ ಸಾಬೀತಾಗಿದೆ.

ಪಕ್ಷಗಳಿಗೆ ಚುನಾವಣೆ ಹೇಗೆ ಪ್ರತಿಷ್ಠೆಯ ಕಣವೋ ಅದಕ್ಕಿಂತ ಮಿಗಿಲು ಸ್ಥಳೀಯರ ನಡುವಿನ ಜಟಾಪಟಿ. ಈ ಹಿನ್ನೆಲೆಯಲ್ಲಿ ಚುನಾವಣೆ ವೆಚ್ಚದಾಯಕವಾಗಿ ಪರಿಣಮಿಸಿದೆ. ಇದರ ಪರಿಣಾಮವಾಗಿ ಪ್ರತಿ ವಾರ್ಡ್ ನಲ್ಲಿ ಗೆಲುವು ಸಾಧಿಸಲು ಲಕ್ಷಗಟ್ಟಲೆ ಹಣ ಖರ್ಚು ಮಾಡಬೇಕಾದ ಅನಿವಾರ್ಯತೆ ನಿರ್ವಣವಾಗಿದೆ. ಗೆದ್ದ ಅಭ್ಯರ್ಥಿ ಗೆಲುವಿನ ನಗೆ ಬೀರಿದರೂ ಒಳಗೊಳಗೇ ಹಾಕಿದ ಬಂಡವಾಳ ಹೇಗೆ ವಾಪಸ್ ತೆಗೆಯಬೇಕು ಎನ್ನುವ ಲೆಕ್ಕಾಚಾರ ಹಾಕುವಂತೆ ಆಗಿದ್ದರೆ, ಮಾಡಿದ ಸಾಲ ತೀರಿಸಲು ಹೇಗೆಲ್ಲ ಹೆಣಗಾಡಬೇಕು ಎನ್ನುವ ಆತಂಕ ಸೋತ ಅಭ್ಯರ್ಥಿಗಳದ್ದಾಗಿದೆ.

ಪ್ರಾಮಾಣಿಕ ಪ್ರಯತ್ನ: ಕೆಲವರು ಚುನಾವಣೆಗಾಗಿ ಸಾಲ ಮಾಡಿಕೊಂಡು ಊರು ಬಿಡುವ ಹಂತಕ್ಕೆ ತಲುಪಿದ್ದರೆ, ಕೆಲವರು ಹಣವನ್ನೇ ನೀಡದೆ ಚುನಾವಣೆ ಎದುರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.

ನೀತಿಸಂಹಿತೆ ಬರೀ ಕಾಗದಕ್ಕೆ: ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಕಟ್ಟುನಿಟ್ಟಾಗಿ ಜಾರಿ ಆಗುವ ನೀತಿಸಂಹಿತೆ ನಿಯಮಗಳು ಗ್ರಾಪಂ ಚುನಾವಣೆಗೆ ಏಕೆ ಇಲ್ಲ ಎನ್ನುವ ದೊಡ್ಡ ಪ್ರಶ್ನೆ ಮೂಡಿದೆ. ಜಿಲ್ಲೆಯಲ್ಲಿ ರಾಜಾರೋಷವಾಗಿಯೇ ಮತದಾರರಿಗೆ ಹಣ ಮತ್ತು ಇತರ ಸಾಮಗ್ರಿ ಹಂಚಿಕೆ ಮಾಡಿದ್ದರೂ ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದರೆ ತಪ್ಪಾಗಲಾರದು.

ಗ್ರಾಪಂ ಚುನಾವಣೆಗಳು ಪಕ್ಷಾತೀತವಾಗಿ ನಡೆಯಬೇಕು ಎನ್ನುವ ನಿಯಮವಿದ್ದರೂ ಪಕ್ಷಗಳ ನೇರ ಪಾಲುದಾರಿಕೆ ಇದೆ. ಅಲ್ಲದೆ, ಭ್ರಷ್ಟಾಚಾರ ರಹಿತ ಚುನಾವಣೆಗಳು ನಡೆಯುತ್ತಿಲ್ಲ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಗಂಭೀರವಾಗಿ ಚಿಂತನೆ ನಡೆಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಣವಂತರಿಂದ ರಕ್ಷಣೆ ಮಾಡಬೇಕಿದೆ. | ಸಿ. ಪುಟ್ಟಸ್ವಾಮಿ ರೈತ ಸಂಘದ ಮುಖಂಡ

ಜಮೀನು ಅಡವಿಟ್ಟರು

ಗ್ರಾಮ ಪಂಚಾಯಿತಿ ಚುನಾವಣೆ ಸ್ಥಳೀಯ ಮುಖಂಡರ ಪ್ರತಿಷ್ಠೆಯ ಪ್ರಶ್ನೆ ಆಗಿರುವ ಕಾರಣ ಗೆಲ್ಲಲೇಬೇಕು ಎನ್ನುವ ಹಠಕ್ಕೆ ಜಮೀನು ಮತ್ತು ನಿವೇಶನ ಅಡವಿಟ್ಟು ಚುನಾವಣೆ ಮಾಡಿದ್ದಾರೆ. ಪ್ರತಿ ವಾರ್ಡ್​ನಲ್ಲಿ ಕನಿಷ್ಠವೆಂದರೂ 10-15 ಲಕ್ಷ ರೂ.ವರೆಗೆ ಅಭ್ಯರ್ಥಿಗಳ ಸಿಂಡಿಕೇಟ್ ಖರ್ಚು ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಒಂದು ಮತಕ್ಕೆ ಕೆಲವು ಕಡೆಗಳಲ್ಲಿ 200 ರೂ.ನಿಂದ ಆರಂಭಗೊಂಡು, 5 ಸಾವಿರ ರೂ.ವರೆಗೂ ನೀಡಲಾಗಿದೆ. ಕೆಲವು ಕಡೆಗಳಲ್ಲಿ ಕುಕ್ಕರ್, ದೀಪ, ಬ್ಯಾಟರಿ ಸೇರಿ ಸಣ್ಣಪುಟ್ಟ ವಸ್ತುಗಳ ಚಿಹ್ನೆಗಳನ್ನು ಪಡೆದ ಅಭ್ಯರ್ಥಿಗಳು ಅವುಗಳನ್ನೇ ಮತದಾರರಿಗೆ ಹಂಚಿದ್ದೂ ಉಂಟು. ಇದರಿಂದಾಗಿ ಸ್ಪರ್ಧಿ ಅನಿವಾರ್ಯವಾಗಿ ಹೆಚ್ಚು ಖರ್ಚು ಮಾಡಲು ನಿವೇಶನ, ಜಮೀನುಗಳನ್ನು ಅಡವಿಟ್ಟಿದ್ದಾರೆ. ರಾಮನಗರ ತಾಲೂಕಿನ ವಾರ್ಡ್ ಒಂದರಲ್ಲಿ ಸ್ಪರ್ಧಿಯೊಬ್ಬರು ಸುಮಾರು 60 ಲಕ್ಷ ರೂ. ಖರ್ಚು ಮಾಡಿ ಗೆಲುವು ಸಾಧಿಸಿದ್ದಾರೆ ಎನ್ನುವ ಚರ್ಚೆಗಳೂ ನಡೆದಿವೆ.

ನರೇಗಾ ಆಕರ್ಷಣೆ

ಗ್ರಾಮ ಪಂಚಾಯಿತಿ ಚುನಾವಣೆ ಇಷ್ಟೊಂದು ವೆಚ್ಚದಾಯಕವಾಗಿರುವುದರ ಹಿಂದೆ ಒಂದೆಡೆ ಪ್ರತಿಷ್ಠೆ ಇದ್ದರೆ ಮತ್ತೊಂದೆಡೆ ಗ್ರಾಪಂನಲ್ಲಿ ನರೇಗಾ ಸೇರಿದಂತೆ ಇತರ ಮೂಲಗಳಿಂದ ದೊರೆಯುವ ಅನುದಾನಗಳೂ ಕಾರಣವಾಗಿವೆ. ನರೇಗಾದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಮಿತಿಯೇ ಇಲ್ಲದಿರುವುದರಿಂದ ಗ್ರಾಪಂಗಳಿಗೆ ಹೆಚ್ಚಿನ ಹಣ ಬರುತ್ತದೆ. ಇದರ ಜತೆಗೆ ವರ್ಗ 1 (ಸ್ಥಳೀಯ ಕರ ಸಂಗ್ರಹ), 15ನೇ ಹಣಕಾಸು ಯೋಜನೆಯಲ್ಲಿ ದೊರೆಯುವ ಅನುದಾನಗಳು ಗ್ರಾಪಂ ಮೇಲೆ ಕಣ್ಣಿಡುವಂತೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net