ಫುಟ್ ಪಾತ್ ಮೇಲೆ ಗ್ರಾಪಂ ಡ್ಯೂಟಿ ಮಾಡಿದ ಪಿಡಿಒ!

Panchayat
Published on

ಬೀದರ್: ತಾಲೂಕಿನ ಚಾಂಬೋಳ ಗ್ರಾಪಂ ಪಿಡಿಒ ಮಂಗಲಾ ಕಾಂಬ್ಳೆ ಅವರು ಮಂಗಳವಾರ ನಗರದ ಡಿಸಿ ಕಚೇರಿ ಎದುರು ಕುಳಿತು ಕರ್ತವ್ಯ ನಿರ್ವಹಿಸುವ ಮೂಲಕ ವಿನೂತನ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿದ್ದಾರೆ.

ಡಿಸಿ ಕಚೇರಿ ಎದುರಿನ ಫುಟ್ಪಾತ್ ಮೇಲೆ ಕುರ್ಚಿ ಹಾಕಿಕೊಂಡು ಕುಳಿತು ಒಂದೆಡೆ ದಿನದ ಕೆಲಸ ಮಾಡಿದರೆ, ಇನ್ನೊಂದೆಡೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಮೇಲೆ ಒತ್ತಡವೂ ಹೇರಿದರು.

ಭ್ರಷ್ಟಾಚಾರಕ್ಕೆ ಹೊಂದಿಕೊಳ್ಳುವಂತೆ ಒತ್ತಾಯಿಸಿ ಅಧಿಕಾರಿಗಳು, ಜನಪ್ರತಿನಿಧಿಗಳು ಸತತ ಕಿರುಕುಳ ನೀಡುತ್ತಿದ್ದಾರೆ. ನನ್ನ ಕೊಲೆಗೂ ಕೆಲವರು ಪಿತೂರಿ ನಡೆಸಿದ್ದಾರೆ. ಈ ಬಗ್ಗೆ ನಿರಂತರವಾಗಿ ಹೋರಾಟ ನಡೆಸಿ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದರೂ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಜಿಪಂನವರು ಕಣ್ಣೆತ್ತಿ ನೋಡುತ್ತಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಇಲ್ಲೇ ಕುಳಿತು ಸರ್ಕಾರದ ಕೆಲಸ ಮಾಡುವೆ ಎಂದು ಮಂಗಲಾ ತಿಳಿಸಿದ್ದಾರೆ.

ನನ್ನ ಮೇಲೆ ಸಾಕಷ್ಟು ಅನ್ಯಾಯ, ದಬ್ಬಾಳಿಕೆ ನಡೆಯುತ್ತಿದೆ. ಭ್ರಷ್ಟಾಚಾರಕ್ಕೆ ಅವಕಾಶ ಕೊಡದಿರುವುದೇ ನನಗೆ ಮುಳುವಾಗಿ ಕಾಡಿದೆ. ಹಲವರು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಗೂಂಡಾಗಳನ್ನು ಬಿಟ್ಟು ಅತ್ಯಾಚಾರ ಎಸಗಿ, ಕೊಲೆ ಮಾಡುವ ಯತ್ನ ಮಾಡಲಾಗುತ್ತಿದೆ. ಇದರಿಂದ ಗ್ರಾಪಂಗೆ ಹೋಗಲು ಹೆದರಿಕೆಯಾಗುತ್ತಿದೆ. ನನಗೆ ನ್ಯಾಯ ಕೊಡಲು ಆಗ್ರಹಿಸಿ ಕಳೆದ ತಿಂಗಳು ಬೆಂಗಳೂರಿನ ವಿಧಾನಸೌಧ ಎದುರು ಸಹ ಧರಣಿ ನಡೆಸಿರುವೆ. ನನ್ನ ಹೋರಾಟ ನಿರಂತರ ನಡೆಯಲಿದೆ. ತಪ್ಪಿತಸ್ಥರಿಗೆ ಜೈಲಿಗೆ ಹಾಕುವವರೆಗೆ ಇಲ್ಲಿಂದ ಕದಲುವುದಿಲ್ಲ. ಬೇಡಿಕೆಗೆ ಸ್ಪಂದಿಸದಿದ್ದರೆ ಆಮರಣ ಉಪವಾಸ ಆರಂಭಿಸಿ ಇಲ್ಲೇ ಪ್ರಾಣ ಬಿಡುವೆ ಎಂದು ಎಚ್ಚರಿಸಿದ್ದಾರೆ.

ತಮ್ಮ ಮೇಲಾದ ಅನ್ಯಾಯದ ಕುರಿತು ಮಂಗಲಾ ಅವರು ಜಿಪಂ ಸಿಇಒ, ಇತರರಿಗೆ ಪತ್ರದಲ್ಲಿ ತಿಳಿಸಿದ್ದಾರೆ. ಡಿಸಿ ಕಚೇರಿ ಎದುರು ಧರಣಿ ಹೂಡಿ, ಇಲ್ಲಿಂದಲೇ ಕೆಲಸ ಮಾಡುತ್ತಿರುವುದೇಕೆ? ಎಂಬ ಬಗ್ಗೆ ಮಂಗಲಾ ಅವರು ಸ್ವತಃ ವಿಡಿಯೋ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಮಂಗಲಾ ಅವರು ಕಳೆದ ಹಲವು ತಿಂಗಳಿಂದ ವಿವಿಧ ರೀತಿಯ ಹೋರಾಟ ನಡೆಸುತ್ತಿದ್ದಾರೆ. ಆದರೆ ಇಲ್ಲಿ ವಾಸ್ತವ ಏನಿದೆ? ಸಮಸ್ಯೆ ಎಲ್ಲಿದೆ? ಇದಕ್ಕೆ ಶಾಶ್ವತ ಪರಿಹಾರ ಏನು ಎಂಬ ಬಗ್ಗೆ ಸಂಬಂಧಿತರಿಂದ ಪ್ರಯತ್ನ ನಡೆಯುತ್ತಿಲ್ಲವೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net